Made in Bengaluru Film Promotion in Kadale Kaayi Parashe

ಕಡಲೆಕಾಯಿ ಪರಿಷೆಯಲ್ಲಿ ‘ಮೇಡ್ ಇನ್ ಬೆಂಗಳೂರು’ ಚಿತ್ರದ ಭರ್ಜರಿ ಪ್ರಚಾರ - CineNewsKannada.com

ಕಡಲೆಕಾಯಿ ಪರಿಷೆಯಲ್ಲಿ ‘ಮೇಡ್ ಇನ್ ಬೆಂಗಳೂರು’ ಚಿತ್ರದ ಭರ್ಜರಿ ಪ್ರಚಾರ

ಬೆಂಗಳೂರಿನ ಜನಪ್ರಿಯ ಉತ್ಸವ ಮತ್ತು ಜಾತ್ರೆಗಳಲ್ಲಿ ಬಸವನಗುಡಿಯ ಜನಪ್ರಿಯ ಕಡಲೆಕಾಯಿ ಪರಿಷೆಯೂ ಒಂದು. ಮೂರು ದಿನಗಳ ಕಾಲ ನಡೆಯುವ ಈ ಪರಿಷೆಯಲ್ಲಿ ಇದಕ್ಕೂ ಮುನ್ನ ಕೆಲವು ಚಿತ್ರತಂಡಗಳು ತಮ್ಮ ಚಿತ್ರದ ಚಿತ್ರೀಕರಣ ಮಾಡಿದ್ದಾರೆ. ಇದೇ ಮೊದಲು ಬಾರಿಗೆ ‘ಮೇಡ್ ಇನ್ ಬೆಂಗಳೂರು’ ಚಿತ್ರತಂಡವು ಈ ಪರಿಷೆಯಲ್ಲಿ ತಮ್ಮ ಚಿತ್ರದ ಪ್ರಚಾರ ಮಾಡಿದೆ.

ಕಳೆದ ತಿಂಗಳ ಅಂತ್ಯದಲ್ಲಿ ನಡೆದ ಈ ಪರಿಷೆಯಲ್ಲಿ ಸೋನು ನಿಗಮ್ ಹಾಡಿರುವ ‘ಒಲವು’ ಎಂಬ ಸುಮಧುರ ಹಾಡನ್ನು ಸಾವಿರಾರು ಜನರ ನಡುವೆ ಬಿಡುಗಡೆ ಮಾಡಲಾಗಿದೆ. ಕಾರ್ತಿಕ ಸೋಮವಾರದಂದು ಬಿಡುಗಡೆಯಾದ ಈ ಹಾಡು ಇದೀಗ ಕೆಲವೇ ದಿನಗಳ ಅಂತರದಲ್ಲಿ ಎರಡು ಮಿಲಿಯನ್ ವೀಕ್ಷಣೆ ಕಂಡಿದೆ.

ಬರೀ ಹಾಡಷ್ಟೇ ಅಲ್ಲ, ಚಿತ್ರತಂಡದವರು ಇದೇ ಸಂದರ್ಭದಲ್ಲಿ ‘ಲವ್ಲೆಟರ್ ಟು ಬೆಂಗಳೂರು’ ಎಂಬ ಹೊಸ ಅಭಿಯಾನ ಶುರು ಮಾಡಿದ್ದು, ಇದರಲ್ಲಿ ಬೆಂಗಳೂರಿನ ಕುರಿತು ಯಾರು ಬೇಕಾದರೂ ಪ್ರೇಮಪತ್ರಗಳನ್ನು ಬರೆಯಬಹುದಾಗಿದೆ. ಮೂರು ದಿನಗಳ ಪರಿಷೆಯಲ್ಲಿ 800ಕ್ಕೂ ಹೆಚ್ಚು ಜನ ಬೆಂಗಳೂರಿನ ಕುರಿತ ತಮ್ಮ ಪ್ರೀತಿಯನ್ನು ಪತ್ರಗಳ ಮೂಲಕ ಹಿಡಿದಿಟ್ಟಿದ್ದಾರೆ. ಚಿತ್ರದಲ್ಲಿ ‘ದೊಡ್ಡ ತಾಯಿ ಬೆಂಗಳೂರು’ ಎಂಬ ಹಾಡಿದ್ದು, ಅದನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಈ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸುವ ಗಣ್ಯರಿಂದಲೂ ಪ್ರೇಮಪತ್ರಗಳನ್ನು ಬರೆಯಿಸಿ ಬಿಡುಗಡೆ ಮಾಡಲಾಗುತ್ತದೆ.

ಇದೆಲ್ಲದರ ಜತೆಗೆ, ಪರಿಷೆಯಲ್ಲಿ ಚಿತ್ರದ ಲೋಗೋ ಇರುವ 300 ಶರ್ಟ್ಗಳು ಮತ್ತು 200 ಮಗ್ಗಳನ್ನು ಮಾರಾಟ ಮಾಡಲಾಗಿದೆ. ಈ ಕುರಿತು ಮಾತನಾಡುವ ನಿರ್ದೇಶಕ ಪ್ರದೀಪ್ ಶಾಸ್ತ್ರಿ, ‘ಪರಿಷೆಯಲ್ಲಿ ನಾನು, ನಮ್ಮ ಸಂಗೀತ ನಿರ್ದೇಶಕರು. ನಿರ್ಮಾಪಕರು, ಕಲಾವಿದರು ಎಲ್ಲರೂ ರಸ್ತೆಯಲ್ಲಿ ಟ್ಯಾಬ್ಲೋ ಇಟ್ಟುಕೊಂಡು ನಮ್ಮ ಸಿನಿಮಾದ ಲೋಗೋ ಇರುವ ಶರ್ಟ್ ಮತ್ತು ಮಗ್ಗಳನ್ನು ಮಾರಾಟ ಮಾಡಿದ್ದೇವೆ. ಈ ಮೂಲಕ ಜನಸಾಮಾನ್ಯರ ಹತ್ತಿರ ಹೋಗಿ ಚಿತ್ರದ ಪ್ರಚಾರ ಮಾಡುತ್ತಿದ್ದೇವೆ. ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಅಪೀಲ್ ಮಾಡಿದ್ದೇವೆ. ಸಾಕಷ್ಟು ಜನರ ಎದುರು ಚಿತ್ರವನ್ನು ಪ್ರಚಾರ ಮಾಡಿದ್ದೇವೆ. ಕಡಲೆಕಾಯಿ ಪರಿಷೆಯಲ್ಲಿ ಇದುವರೆಗೂ ಯಾರೂ ಹಾಡು ಬಿಡುಗಡೆ ಮಾಡಿ, ಚಿತ್ರದ ಪ್ರಚಾರ ಮಾಡಿದ ಉದಾಹರಣೆ ಇರಲಿಲ್ಲ. ನಾವು ಮೊದಲ ಬಾರಿಗೆ ಬಿಡುಗಡೆ ಮಾಡಿದ್ದೇವೆ’ ಎನ್ನುತ್ತಾರೆ.

admin

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin