ಟೀಸರ್ ಮೂಲಕ ಕೌತುಕದ ಕಿಡಿ ಹೊತ್ತಿಸಿದ `ಕೆಂಡ’
ಒಂದೇ ಒಂದು ಮೋಷನ್ ಪೆÇೀಸ್ಟರ್ ಮೂಲಕ ಅಗಾಧ ಪ್ರಮಾಣದಲ್ಲಿ ಕುತೂಹಲ ಮೂಡಿಸಿದ್ದ ಚಿತ್ರ `ಕೆಂಡ’. ಹಾಗೆ ಪಾಸಿಟಿವ್ ಟಾಕ್ ಹಬೆಯಾಡುವಂತೆ ಮಾಡಿ, ಅದರ ಪ್ರಭೆಯಲ್ಲಿಯೇ ಕ್ಯಾರೆಕ್ಟರ್ ರಿವೀಲಿಂಗ್ ವೀಡಿಯೋ ಬಿಟ್ಟಿದ್ದ ಚಿತ್ರತಂಡ ಅದರಲ್ಲಿಯೂ ಪ್ರೇಕ್ಷಕರ ಮನ ಗೆದ್ದಿದೆ.
ಟೀಸರ್ ಗಾಗಿನ ನಿರೀಕ್ಷೆ. ಇದೀಗ ಕೆಂಡದ ಟೀಸರ್ ಬಿಡುಗಡೆಗೊಂಡಿದೆ. ಮಾಸ್ ಸೇರಿದಂತೆ ಎಲ್ಲ ಅಂಶಗಳನ್ನೂ ಒಳಗೊಂಡಿರುವ, ಗಹನವಾದ ಕಥೆಯ ಸುಳಿವಿನೊಂದಿಗೆ ಕೆಂಡ ಮತ್ತೊಮ್ಮೆ ನಿಗಿನಿಗಿಸಿದೆ.
ಚಿತ್ರರಂಗ ಒಂದು ಅಲೆಯ ಬೆಂಬಿದ್ದು ಮಿಂದೇಳುತ್ತಿರುವಾಗ, ಹಠಾತ್ತನೆ ಭಿನ್ನ ಕಥಾನಕದ ಸುಳಿವು ಸಿಕ್ಕರೆ ತಂತಾನೇ ಸೆಳೆಮಿಂಚೊಇಂದು ಪ್ರವಹಿಸಿದಂತಾಗುತ್ತದೆ. ಕೆಂಡ ಚಿತ್ರದ ಟೀಸರ್ ಅದನ್ನು ಅಕ್ಷರಶಃ ಸಾಧ್ಯವಾಗಿಸಿದಂತಿದೆ. ಓರ್ವ ಸಾಮಾನ್ಯ ಹುಡುಗ ವ್ಯವಸ್ಥೆಯ ಅಡಕತ್ತರಿಗೆ ಸಿಕ್ಕು ಅಸಾಮಾನ್ಯವಾಗಿ ಠೇಂಕರಿಸುವ ಕಥೆ ಕೆಂಡದ ಜೀವಾಳ. ಈ ಬಗ್ಗೆ ಚಿತ್ರತಂಡವೇ ಒಂದಷ್ಟು ಮಾಹಿತಿಗಳನ್ನು ಬಿಟ್ಟುಕೊಟ್ಟಿತ್ತು. ಇದೀಗ ಕಥೆ ಒಟ್ಟಾರೆ ಸುಳಿವನ್ನು ಬಚ್ಚಿಟ್ಟುಕೊಂಡೇ, ಒಂದಿಡೀ ಸಿನಿಮಾದ ಆಂತರ್ಯವನ್ನು ಈ ಟೀಸರ್ ಮೂಲಕ ತೆರೆದಿಡಲಾಗಿದೆ.
ಈ ಹಿಂದೆ ಕ್ಯಾರೆಕ್ಟರ್ ರಿವೀಲಿಂಗ್ ವೀಡಿಯೋ ಬಿಡುಗಡೆಯಾದಾಗಲೇ ಇದೊಂದು ವಿಶಿಷ್ಟವಾದ ಚಿತ್ರವೆಂಬ ಸ್ಪಷ್ಟ ಸುಳಿವು ಸಿಕ್ಕಿತ್ತು. ಈ ಟೀಸರ್ ಅದನ್ನು ಮತ್ತಷ್ಟು ನಿಚ್ಚಳವಾಗಿಸಿದೆ. ಅಷ್ಟಕ್ಕೂ ಕೆಂಡ ಸಿನಿಮಾ ಪ್ರೇಕ್ಷಕರ ಪಾಲಿಗೆ ಇಷ್ಟು ಮುಖ್ಯವಾಗಲು ಕಾರಣವಿದೆ. ಈ ಹಿಂದೆ ಗಂಟುಮೂಟೆ ಎಂಬ ಚಿತ್ರವನ್ನು ರೂಪಿಸಿದ್ದ ತಂಡವೇ ಕೆಂಡದ ಹಿಂದಿರೋದನ್ನು ಪ್ರಧಾನ ಕಾರಣವಾಗಿ ಪರಿಗಣಿಸಬಹುದು. ಆ ಚಿತ್ರವನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದ ರೂಪಾ ರಾವ್ ಕೆಂಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಗಂಟುಮೂಟೆ ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದುಕೊಂಡು, ಛಾಯಾಗ್ರಾಹಕರಾಗಿಯೂ ಕಾರ್ಯ ನಿರ್ವಹಿಸಿದ್ದ ಸಹದೇವ್ ಕೆಲವಡಿ ಕೆಂಡದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅವರು ಮೊದಲ ಹೆಜ್ಜೆಯಲ್ಲಿಯೇ ಭಿನ್ನ ಕಥಾನಕವನ್ನು ಮುಟ್ಟಿರುವ ಸೂಚನೆ ಈ ಟೀಸರ್ ಮೂಲಕ ಸ್ಪಷ್ಟವಾಗಿಯೇ ಕಾಣಿಸಿದೆ.
ರಂಗಭೂಮಿ ಪ್ರತಿಭೆಗಳೇ ಈ ಚಿತ್ರದಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ ದೇಶಪಾಂಡೆ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ.
ಕಥೆಯೊಂದಿಗೇ ಹೊಸೆದುಕೊಂಡಂಥಾ ಎರಡು ಹಾಡುಗಳಿಗೆ ಖುದ್ದು ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಕೆಂಡ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ. ಅಂತೂ ಈ ಟೀಸರ್ ಮೂಲಕ ಕೆಂಡದ ಬಗ್ಗೆ ಅತೀವ ಕುತೂಹಲದ ಪರ್ವವೊಂದಕ್ಕೆ ಚಾಲನೆ ಸಿಕ್ಕಂತಾಗಿದೆ…