ತಂದೆ- ಮಗನ ಭಾವನಾತ್ಮಕ ಕಥನ “ಅಪ್ಪ ಐ ಲವ್ ಯೂ” ಚಿತ್ರ ಏಪ್ರಿಲ್ 12ಕ್ಕೆ ತೆರೆಗೆ

ಕನ್ನಡದಲ್ಲಿ ಇತ್ತೀಚೆಗೆ ಭಾವನಾತ್ಮಕ ಕಥೆಗಳು ಕಡಿಮೆ ಎನ್ನುವ ಕಾಲಘಟ್ಟದಲ್ಲಿಯೇ ಮನ ಮಿಡಿಯುವ ಕಥೆಯನ್ನು ಆಧರಿಸಿದ “ ಅಪ್ಪ ಐ ಲವ್ ಯೂ” ಚಿತ್ರ ಏಪ್ರಿಲ್ 12 ರಂದು ತೆರೆಗೆ ಬರಲು ಸಜ್ಜಾಗಿದೆ. ಅಥರ್ವ್ ಆರ್ಯ ಆಕ್ಷನ್ ಕಟ್ ಹೇಳಿದ್ದು ಕೆಆರ್ ಎಸ್ ಸಂಸ್ಥೆ ನಿರ್ಮಾಣ ಮಾಡಿದೆ.

ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿ ಚಿತ್ರದ ಕಥಾವಸ್ತು ಮತ್ತು ಚಿತ್ರ ಮೂಡಿ ಬಂದಿರುವ ಪರಿಯನ್ನು ಬಹುವಾಗಿ ಮೆಚ್ಚಿಕೊಂಡು ಯಾವುದೇ ಕತ್ತರಿ ಪ್ರಯೋಗ ಮಾಡದೆ ಮುಕ್ತಕಂಠದಿಂದ ಶ್ಲಾಘಿಸಿ ಯು ಪ್ರಮಾಣ ಪತ್ರ ನೀಡಿರುವುದು ತಂಡಕ್ಕೆ ಮತ್ತಷ್ಟು ಆನೆ ಬಲ ಬಂದಿದೆ.

ತಂದೆ-ಮಗನ ಬಾಂಧವ್ಯದ ಕಥೆ ಹೇಳುವ “ ಅಪ್ಪ ಐ ಲವ್ ಯೂ” ಚಿತ್ರ ಮುಂದಿನ ತಿಂಗಳು 12ಕ್ಕೆ ತೆರೆಗೆ ಬರಲಿದೆ. ಚಿತ್ರತಂಡ ಅಧಿಕೃತವಾಗಿ ದಿನಾಂಕ ಘೋಷಿಸಿದೆ. ಈ ಮೂಲಕ ಕನ್ನಡದಲ್ಲಿ ಮತ್ತೊಂದು ಭಾವನಾತ್ಮಕ ಕಥೆಯನ್ನು ಪ್ರೇಕ್ಷಕರ ಮುಂದೆ ತರಲು ನಿರ್ದೇಶಕ ಅಥರ್ವ್ ಆರ್ಯ ಮತ್ತವರ ತಂಡ ಮುಂದಾಗಿದೆ.

ಕೆ ಆರ್ ಎಸ್ ಪ್ರೊಡಕ್ಷನ್ಸ್ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿ ಬಂದಿದ್ದು ಕನ್ನಡದ ಉತ್ತಮ ಚಿತ್ರಗಳಲ್ಲಿ ಒಂದು ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ಚಿತ್ರಮಂದಿರಗಳಿಂದಲೂ ಚಿತ್ರಕ್ಕೆ ಬೇಡಿಕೆ ಬರುತ್ತಿದೆ. ಇದು ಸಹಜವಾಗಿ ಚಿತ್ರತಂಡದ ಮುಖದಲ್ಲಿ ಮಂದಹಾಸ ಮನೆ ಮಾಡಿದೆ. ಬೆಂಗಳೂರು, ಮೈಸೂರು ಸುತ್ತ ಮುತ್ತ 60 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

ನೆನಪಿರಲಿ ಪ್ರೇಮ್, ಮಾನ್ವಿತಾ ಕಾಮತ್, ತಬಲ ನಾಣಿ ಸಂಜಯ್, ಜೀವಿತಾ ವಶೀಷ್ಠ, ಬಲ ರಾಜ್ವಾಡಿ, ಅರವಿಂದ ರಾವ್, ಅರುಣ ಬಾಲರಾಜ್, ವಿಜಯ್ ಚೆಂಡೂರ್.ಗಿರೀಶ್ ಜತ್ತಿ ಸೇರಿದಂತೆ ಹಿರಿ ಕಿರಿಯ ಕಲಾವಿದರ ದಂಡೇ ಚಿತ್ರದಲ್ಲಿದೆ.

ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಮತ್ತು ಮಾನ್ವಿತಾ ಕಾಮತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಟ್ರಾಕ್‍ನಲ್ಲಿ ತಬಲ ನಾಣಿ ಮತ್ತು ಅವರ ಪುತ್ರನ ಕಥೆ ಸಾಗಲಿದೆ. ತಂದೆಯ ಮಹತ್ವ ಸಾರುವ ಭಾವನಾತ್ಮಕ ಕಥೆಯ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವ ಕೆಲಸವನ್ನು ನಿರ್ದೇಶಕ ಅಥರ್ವ್ ಆರ್ಯ ಮಾಡಿದ್ದಾರೆ.

ಚಿತ್ರಕ್ಕೆ ನಾಗಾರ್ಜುನ್ ಆರ್. ಡಿ ಛಾಯಾಗ್ರಹಣ, ವೇದಿಕೆ ವೀರ ಸಂಕಲನ, ತಬಲ ನಾಣಿ ಸಂಭಾಷಣೆ, ಆಕಾಶ್ ಪರ್ವ ಸಂಗೀತ , ಕಂಬಿ ರಾಜು ನೃತ್ಯ ಚಿತ್ರಕ್ಕಿದೆ.