“ನಾಡಪ್ರಭು ಕೆಂಪೇಗೌಡ”ರ ಹೊಸ ಅವತಾರದಲ್ಲಿ ಡಾಲಿ ಧನಂಜಯ
ವಿಭಿನ್ನ ಪಾತ್ರಗಳ ಮೂಲಕ ಜನ ಮನ ಗೆದ್ದಿರುವ ಡಾಲಿ ಧನಂಜಯ ಇದೀಗ ನಾಡಪ್ರಭು ಕೆಂಪೇಗೌಡರ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದು ಗಮನ ಸೆಳೆದಿದೆ. ಚಿತ್ರಕ್ಕೆ ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ ಆಕ್ಷನ್ ಕಟ್ ಹೇಳಲಿದ್ದಾರೆ
ಬಹು ನಿರೀಕ್ಷಿತ ಐತಿಹಾಸಿಕ ಚಿತ್ರ”ನಾಡಪ್ರಭು ಕೆಂಪೇಗೌಡ” ಇದೀಗ ತನ್ನ ಮೊದಲ ಪೋಸ್ಟರ್ ಬಿಡುಗಡೆ ಮಾಡಿ ಎಲ್ಲೆಡೆ ಸದ್ದು ಮಾಡುತ್ತಿದೆ. ಜೊತೆಗೆ ಬಾರಿ ಕುತೂಹಲ ಕೆರಳಿಸಿದೆ.
ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಜೀವನ ಚರಿತ್ರೆ ಹೇಳುವ ಕಥೆ “ನಾಡಪ್ರಭು ಕೆಂಪೇಗೌಡ” ಆಗಿದ್ದು, ಇದನ್ನು ಹಿರಿಯ ನಿರ್ದೇಶಕ ಡಾ.ಟಿ.ಎಸ್.ನಾಗಾಭರಣ ನಿರ್ದೇಶಿಸಲಿದ್ದಾರೆ ಹಾಗೂ ಚಿತ್ರದಲ್ಲಿ ನಟರಾಕ್ಷಸ ಡಾಲಿ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪೋಸ್ಟರ್ ನಲ್ಲಿ, ಧನಂಜಯ ಅವರ ಐತಿಹಾಸಿಕ ಲುಕ್ ಎಲ್ಲರ ಗಮನ ಸೆಳೆದಿದೆ.
ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ಚಿತ್ರವನ್ನು ಡಾ.ಎಂ.ಎನ್.ಶಿವರುದ್ರಪ್ಪ ಮತ್ತು ಶುಭಂ ಗುಂಡಲ ಈಶ್ವರ ಎಂಟರ್ಟೇನ್ ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.
“ಬಂಗಾರದ ಜಿಂಕೆ”, “ಜನುಮದ ಜೋಡಿ”, “ಕಲ್ಲರಳಿ ಹೂವಾಗಿ” ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿದ ಮೇರು ನಿರ್ದೇಶಕ ಡಾ.ಟಿ.ಎಸ್ ನಾಗಾಭರಣ ಅವರ ಎರಡು ದಶಕಗಳ ಕನಸಿನ ಕೂಸಾದ “ನಾಡಪ್ರಭು ಕೆಂಪೇಗೌಡ”, ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಸದ್ದು ಮಾಡಿರುವ ಜೀವನ ಚರಿತ್ರೆಯ ಕಥನವಾಗಿದೆ. ಹಲವಾರು ವರ್ಷಗಳ ನಂತರ ಮತ್ತೆ ಆಕ್ಷನ್ ಕಟ್ ಹೇಳಲು ಹೊರಟಿರುವ ನಾಗಾಭರಣ ಅವರಿಗೆ ಈ ಚಿತ್ರ ಕಮ್ ಬ್ಯಾಕ್ ಆಗಲಿದೆ ಎಂದು ಗಾಂಧಿನಗರದ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ