ನಾಯಕನಾಗಲು ರವಿಚಂದ್ರನ್ ಸರ್ ಪ್ರೇರಣೆ ಕಾರಣ : ನಟ ಶರಣ್
ನಟ ಶರಣ್ , ಮೇಘನಾ ಗಾವಂಕರ್ ಮತ್ತು ಅದಿತಿ ಪ್ರಭುದೇವ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ “ ಛೂ ಮಂತರ್” ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಸಾಥ್ ನೀಡಿದ್ದಾರೆ. ಚಿತ್ರದ ಟೈಟಲ್ ಟ್ರಾಕ್ ಬಿಡುಗಡೆಯಾಗಿದ್ದು, ನಾಯಕನಾಗಲು ರವಿ ಸಾರ್ ಕಾರಣ ಎಂದಿದ್ದಾರೆ ನಟ ಶರಣ್.
ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, ನವನೀತ್ ನಿರ್ದೇಶನದಲ್ಲಿ ಶರಣ್ ನಾಯಕರಾಗಿ ನಟಿಸಿರುವ “ಛೂ ಮಂತರ್” ಚಿತ್ರದ ಟೈಟಲ್ ಟ್ರ್ಯಾಕ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಅವರು ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ
ಈ ವೇಳೆ ಮಾತಿಗಿಳಿದ ಕ್ರೇಜಿಸ್ಟಾರ್ ರವಿಚಂದ್ರನ್, ಚಿತ್ರತಂಡದವರ ಮಾತು ಕೇಳಿದಾಗ ಈ ತಂಡದಿಂದ ಒಳ್ಳೆಯ ಚಿತ್ರ ಬರುವ ಎಲ್ಲಾ ಲಕ್ಷಣಗಳು ಇದೆ ಶರಣ್ ಒಬ್ಬ ಒಳ್ಳೆಯ ನಟ. ಆತನ ಚಿತ್ರದಲ್ಲಿ ಎರಡು ಹಾಡುಗಳು ಹಿಟ್ ಆಗೆ ಆಗುತ್ತದೆ. ಚಂದನ್ ಶೆಟ್ಟಿ ಸಂಗೀತದಲ್ಲಿ ಮೂಡಿ ಬಂದಿರುವ ಈ ಹಾಡು ಕೂಡ ಚೆನ್ನಾಗಿದೆ. ನಿರ್ಮಾಪಕ ತರುಣ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
ನಟ ಶರಣ್ ಮಾತನಾಡಿ ನಾನು ನಾಯಕನಾಗಲು ರವಿಚಂದ್ರನ್ ಅವರೆ ಕಾರಣ. ನಾನು ಅವರೊಂದಿಗೆ “ಹಠವಾದಿ” ಚಿತ್ರದಲ್ಲಿ ಅಭಿನಯಿಸಬೇಕಾದರೆ, ನೀನು ಇನ್ನು ನಾಯಕನಾಗಿಲ್ವಾ ಎಂದು ಕೇಳಿದರು. ಆಮೇಲೆ ನಾಯಕನಾಗಬೇಕು ಎಂದು ಯಾವತ್ತೂ ಅಂದುಕೊಂಡಿರದ ನಾನು, ಅವರು ಹೇಳಿದ ಎರಡು ವರ್ಷಗಳಲ್ಲೇ ನಾಯಕನಾದೆ. ಅಷ್ಟು ಒಳ್ಳೆಯ ಮನಸ್ಸು ರವಿ ಸರ್ ಅವರದು. ಇಂದು ನಮ್ಮ ಚಿತ್ರದ ಹಾಡನ್ನು ಅವರು ಬಿಡುಗಡೆ ಮಾಡಿದ್ದು ಖುಷಿಯಾಗಿದೆ. ಇನ್ನೂ ಇಂದು ಬಿಡುಗಡೆಯಾಗಿರುವ ಹಾಡಿನ ಬಗ್ಗೆ ಹೇಳಬೇಕಾದರೆ, ಚಂದನ್ ಶೆಟ್ಟಿ ಅಮೋಘವಾಗಿ ಸಂಗೀತ ನೀಡಿ ಹಾಡಿದ್ದಾರೆ. ವಿಜಯ್ ಈಶ್ವರ್ ಈ ಹಾಡನ್ನು ಬರೆದಿದ್ದು, ದರ್ಶಿನಿ ನೃತ್ಯ ಸಂಯೋಜನೆ ಮಾಡಿದ್ದಾರೆ. ನಾನು, ಚಿಕ್ಕಣ್ಣ ಹಾಗೂ ಅದಿತಿ ಪ್ರಭುದೇವ ಅಭಿನಯಿಸಿದ್ದೇವೆ ಎಂದು ನಾಯಕ ಶರಣ್ ತಿಳಿಸಿದರು.
ನಿರ್ಮಾಪಕ ತರುಣ್ ಶಿವಣ್ಣ, ನಾನು, ರವಿ ಸರ್ ಅವರಿಗೆ ಕೆಲವು ದಿನಗಳ ಹಿಂದೆ ಟೀಸರ್ ತೋರಿಸಿದ್ದೆ. ಟೈಟಲ್ ಟ್ರ್ಯಾಕ್ ಅನ್ನು ನೀವೇ ಬಿಡುಗಡೆ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದೆ. ಇಂದು ರವಿಚಂದ್ರನ್ ಸರ್ ಬಂದು ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ರವಿ ಸರ್ ಅವರಿಗೆ, ಈ ಚಿತ್ರದ ಟೈಟಲ್ ನೀಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹಾಗೂ ಕಥೆ ಮೆಚ್ಚಿ ಪ್ರೋತ್ಸಾಹ ನೀಡಿದ ತರುಣ್ ಸುಧೀರ್ ಅವರಿಗೆ ಈ ಸಂದರ್ಭದಲ್ಲಿ ನಾನು ಧನ್ಯವಾದ ತಿಳಿಸುತ್ತೇನೆ. ಇಂದು ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಟ್ರೇಲರ್ ಸಹ ಬರಲಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹ ವಿರಲಿ ಎಂದರು
ನಿರ್ದೇಶಕ ನವನೀತ್ ಮಾತನಾಡಿ ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಹಾಗೂ ಆಗಮಿಸಿದ ಗಣ್ಯರಿಗೆ ಧನ್ಯವಾದ ಎಂದರು.
ಹಾಡಿನ ಬಗ್ಗೆ ಸಂಗೀತ ನಿರ್ದೇಶಕ ಹಾಗೂ ಗಾಯಕ ಚಂದನ್ ಶೆಟ್ಟಿ ಮಾಹಿತಿ ನೀಡಿದರು.
ನಟಿಯರಾದ ಅದಿತಿ ಪ್ರಭುದೇವ ಹಾಗೂ ಮೇಘನಾ ಗಾಂವ್ಕರ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಅನೂಪ್, ಹಾಡು ಬರೆದಿರುವ ವಿಜಯ್ ಈಶ್ವರ್, ನೃತ್ಯ ಸಂಯೋಜಕಿ ದರ್ಶಿನಿ ಮುಂತಾದವರು ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಸಾಹಸ ಸಂಯೋಜಕ ರವಿವರ್ಮ, ನಿರ್ಮಾಪಕ ಸಂಜಯ್ ಗೌಡ ಸೇರಿದಂತೆ ಅನೇಕ ಗಣ್ಯರು ಹಾಡು ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು.