ಭರವಸೆಯ ನಟ ನಿರೂಪ್ ಭಂಡಾರಿಗೆ ನಟಿ ಬೃಂದಾ ಆಚಾರ್ಯ ನಾಯಕಿ
ಕೌಸಲ್ಯ ಸುಪ್ರಜಾ ರಾಮ ಚಿತ್ರದಲ್ಲಿ ಶಿವಾನಿಯಾಗಿ ಮನಸೋರೆಗೊಂಡಿದ್ದ ಬೃಂದಾ ಆಚಾರ್ಯ ಅವರ ಕೈಯಲ್ಲಿ ಒಂದರ ಹಿಂದೆ ಒಂದು ಚಿತ್ರಗಳು ಸೆಟ್ಟೇರುತ್ತಿವೆ. ಇದೀಗ ಭರವಸೆಯ ನಟ ನಿರೂಪ್ ಭಂಡಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
ನಟಿ ಬೃಂದಾ ಆಚಾರ್ಯ ಅವರು ನಿರೂಪ್ ಭಂಡಾರಿಗೆ ಜೋಡಿಯಾಗಿ ನಟಿಸಲಿದ್ದಾರೆ. ಸದ್ಯದ ಮಟ್ಟಿಗೆ ಈ ಸಿನಿಮಾ ಬಗ್ಗೆ ಕೆಲವೇ ಕೆಲ ಮಾಹಿತಿಗಳು ಮಾತ್ರವೇ ಜಾಹೀರುಗೊಂಡಿವೆ. ಚಿತ್ರವನ್ನು ಸಚಿನ್ ವಾಲಿ ನಿರ್ದೇಶನ ಮಾಡಲಿದ್ದಾರೆ. ಸಿನಿಮಾ ರಂಗದಲ್ಲಿ ಹಲವಾರು ವರ್ಷಗಳಿಂದ ಸಕ್ರಿಯರಾಗಿರುವ ಸಚಿನ್ ಪಾಲಿಗಿದು ಸ್ವತಂತ್ರ ನಿರ್ದೇಶಕರಾಗಿ ಮೊದಲ ಚಿತ್ರ.
ಬೃಂದಾ ಆಚಾರ್ಯ ಪಾತ್ರದ ವಿಚಾರಕ್ಕೆ ಬರೋದಾದರೆ, ಅವರ ಪಾಲಿಗೆ ಇಲ್ಲಿಯೂ ಕೂಡಾ ಭಿನ್ನವಾದ ಪಾತ್ರವೇ ಒಲಿದು ಬಂದಿದೆ. ಕಿರುತೆರೆಯಲ್ಲಿ ಖ್ಯಾತಿ ಗಳಿಸಿಕೊಂಡಿರುವ ಅಂಕಿತಾ ಅಮರ್ ಕೂಡಾ ಈ ಚಿತ್ರದಲ್ಲಿ ರಿಪೆÇೀರ್ಟರ್ ಆಗಿ ನಟಿಸಲಿದ್ದಾರೆ. ಕೌಸಲ್ಯ ಸುಪ್ರಜಾ ರಾಮ ಚಿತ್ರದಲ್ಲಿನ ಶಿವಾನಿಯಾಗಿ ಬೃಂದಾ ಆಚಾರ್ಯ ಎಲ್ಲರಿಗೂ ಹಿಡಿಸಿದ್ದರು.
ಆ ನಂತರದಲ್ಲಿ ಒಂದರ ಹಿಂದೊಂದರಂತೆ ಮೂರು ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ, ರಾಮ ರಾಮಾ ರೇ ಖ್ಯಾತಿಯ ಸತ್ಯ ಪ್ರಕಾಶ್ ಜಿತೆಗಿನ ಎಕ್ಸ್ ಆಂಡ್ ವೈ, ಎಸ್ ನಾರಾಯಣ್ ನಿರ್ದೇಶನದ ಒಂದ್ಸಲ ಮೀಟ್ ಮಾಡೋಣ ಚಿತ್ರಗಳು ಬೃಂದಾರ ಕೈಲಿವೆ. ಇದೀಗ ಕಥೆ, ಪಾತ್ರವನ್ನು ಇಷ್ಟಪಟ್ಟು ಸದರಿ ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಒಂದು ಯಶಸ್ವೀ ಚಿತ್ರದಲ್ಲಿ ನಟಿಸಿಯಾದ ನಂತರ ಇಡುವ ಪ್ರತೀ ಹೆಜ್ಜೆಗಳು, ತೆಗೆದುಕೊಳ್ಳುವ ನಿರ್ಧಾರಗಳು ಕಲಾವಿದರ ವೃತ್ತಿ ಬದುಕನ್ನು ರೂಪಿಸುತ್ತವೆ. ಈ ನಿಟ್ಟಿನಲ್ಲಿ ನೋಡೋದಾದರೆ ಬೃಂದಾರದ್ದು ಪ್ರೌಢ ನಡೆ. ಯಾಕೆಂದರೆ, ತಾನು ನಟಿಸೋ ಪ್ರತೀ ಪಾತ್ರಗಳೂ ಕೂಡಾ ಹೊಸತನದೊಂದಿಗೆ ಪ್ರೇಕ್ಷಕರನ್ನು ತಲುಪಬೇಕೆಂಬ ಇರಾದೆ ಅವರಲ್ಲಿದೆ. ಅದೇ ಮನಃಸ್ಥಿತಿಯಲ್ಲಿ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದ ಬೃಂದಾ ನಾಲಕ್ಕನೇ ಚಿತ್ರಕ್ಕೂ ಸಹಿ ಮಾಡಿದ್ದಾರೆ.
ಈ ಚಿತ್ರದಲ್ಲಿ ಅವರು ಸೋಶಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್ ಪಾತ್ರದಲ್ಲಿ ನಟಿಸಲಿದ್ದಾರಂತೆ. ಹೊಸಾ ಆವೇಗ ಹೊಂದಿರೋ ಆ ಪಾತ್ರಕ್ಕೆ ಜೀವ ತುಂಬಲು ಎಲ್ಲ ತಯಾರಿಗಳನ್ನೂ ಈಗಾಗಲೇ ಮಾಡಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ನಾಲಕ್ಕನೇ ಸಿನಿಮಾದ ಮತ್ತಷ್ಟು ವಿವರಗಳು ಸದ್ಯದಲ್ಲಿಯೇ ಹೊರಬೀಳಲಿವೆ.