ಮಾಯಾವಿಯ ಬೆನ್ನು ಹತ್ತಿದ ಶಿವಾಜಿ ; ಸೀಕ್ವೆಲ್‍ನಲ್ಲಿ ಸಿಗುತ್ತಾ ಉತ್ತರ…
2020ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ರಮೇಶ್ ಅರವಿಂದ್ ಅಭಿನಯದ ಪತ್ತೇದಾರಿ ಚಿತ್ರ ‘ಶಿವಾಜಿ ಸುರತ್ಕಲ್’ ಮುಂದುವರೆದ ಭಾಗ ‘ಶಿವಾಜಿ ಸುರತ್ಕಲ್ – ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ ಏಪ್ರಿಲ್ 14 ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಶಿವಾಜಿ ಸುರತ್ಕಲ್ 2’ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಮೂಲಕ ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ಮಿಸಿದ್ದಾರೆ. ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಮೊದಲ ಭಾಗದಂತೆಯೇ ಈ ಚಿತ್ರವು ಸಹ ಒಂದು ಮರ್ಡರ್ ಮಿಸ್ಟ್ರಿಯಾಗಿದ್ದು, ಚಿತ್ರದಲ್ಲಿ ನಡೆಯುವ ಕೊಲೆಗಳಿಗೂ, ನಾಯಕ ಶಿವಾಜಿಗೂ ಒಂದು ನಂಟಿರುತ್ತದೆ. ಆ ನಂಟೇನು? ಕೊಲೆಗಳ ಹಿಂದಿರುವ ರಹಸ್ಯವೇನು? ಮತ್ತು ಕೊಲೆಗಾರ ಯಾರು? ಎಂಬುದೇ ಈ ಚಿತ್ರದ ಹೂರಣ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಆಕಾಶ್ ಶ್ರೀವತ್ಸ, ಚಿತ್ರದಲ್ಲಿ ಅಪ್ಪ-ಮಗ,ಅಪ್ಪ-ಮಗಳು,ಗಂಡ-ಹೆಂಡತಿ ಸೆಂಟಿಮೆಂಟ್,ಎಮೋಷನ್ ಚಿತ್ರದಲ್ಲಿದೆ. ಚಿತ್ರದಲ್ಲಿ ರಮೇಶ್ ಸಾರ್ ಹೊಸ ರೀತಿಯಲ್ಲಿ ಕಾಣಸುತ್ತಿದ್ದಾರೆ.
ಚಿತ್ರ ನೋಡುವ ಮಂದಿಗೆ ರಮೇಶ್ ಅರವಿಂದ್ ಅವರದು ಎರಡು ಶೇಡ್ ಇರುವ ಪಾತ್ರವೇ ಅಥವಾ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಯೇ ಎನ್ನುವ ಕುತೂಹಲ ಇದೆ. ಚಿತ್ರದಲ್ಲಿ ಮಾಯಾವಿ ಯಾರು ಎನ್ನುವುದನ್ನು ಪತ್ತೆ ಹಚ್ಚುವ ಕೆಲಸ. ಅದನ್ನು ಚಿತ್ರದಲ್ಲಿ ನೋಡಬೇಕು.
ಚಿತ್ರ ನೋಡಿ ಹೊರ ಬರುವ ಪ್ರೇಕ್ಷಕ ವ್ಹಾ.. ಅದ್ಬುತ ಪತ್ತೆದಾರಿ ಸಿನಿಮಾ ನೋಡಿದ್ದೇವೆ ಎನ್ನುವ ಉದ್ಗಾರದೊಂದಿಗೆ ಹೊರ ಬರುತ್ತಾರೆ ಎನ್ನು ಭರವಸೆ ನೀಡಬಲ್ಲೆ. ಇತ್ತೀಚೆಗೆ ಚಿತ್ರ ನೋಡಿದ ಆಪ್ತರೂ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಚಿತ್ರ ನೋಡಿ ನಿರ್ಮಾಪಕ ಅನೂಪ್ ಗೌಡ ಅವರು ತುಂಬಾನೇ ಖುಷಿಯಾಗಿದ್ದಾರೆ. ಆರಂಭದಿಂದಲೂ ಅವರಿಗೆ ಚಿತ್ರದ ಬಗ್ಗೆ ಭರವಸೆ ಇತ್ತು.ಅದು ಇನ್ನಷ್ಟು ಭರವಸೆಯನ್ನು ಹೆಚ್ಚಿಸಿದೆ.ನಾಳೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿಯೂ ಕನ್ನಡದಲ್ಲಿಯೇ ಚಿತ್ರ ಬಿಡುಗಡೆಯಾಗಲಿದ್ದು ಇದೇ ವೇಳೆ ಅಮೇರಿಕಾ, ಕೆನಡಾ ಸೇರಿದಂತೆ ಅನೇಕ ದೇಶಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ.ಪ್ರೇಕ್ಷಕರ ಪ್ರತಿಕ್ರಿಯೆ ನೋಡು ಎದುರು ನೋಡುತ್ತಿದ್ದೇವೆ ಎನ್ನುವ ಮಾಹಿತಿ ಹಂಚಿಕೊಂಡರು.
ಮೇಘನಾ ಗಾಂವಕರ್, ಪ್ರಮುಖ ಪಾತ್ರ
‘
ಮೊದಲ ಭಾಗ ನೋಡಿದವರಿಗೆ ಈ ಚಿತ್ರವು ಖಂಡಿತಾ ಇಷ್ಟವಾಗುತ್ತದೆ. ಇಲ್ಲಿ ಕೊಲೆಗಳ ಜೊತೆಗೆ ಮನರಂಜನೆ ಮತ್ತು ಭಾವನಾತ್ಮಕ ಸನ್ನಿವೇಶಗಳು ಸಹ ಇದೆ. ಚಿತ್ರ ನೋಡುತ್ತಿದ್ದಂತೆ ಇಲ್ಲಿ ಎರಡು ಪಾತ್ರಗಳಿವೆಯೋ ಅಥವಾ ನಾಯಕನ ಮನಸ್ಸಿನಲ್ಲಿ ಆಗುವ ತಳಮಳಗಳೋ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಕಾಡುತ್ತದೆ. ಕನ್ನಡದಲ್ಲಿ ಇದೊಂದು ವಿಭಿನ್ನವಾದ ಪ್ರಯತ್ನ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.
‘ಶಿವಾಜಿ ಸುರತ್ಕಲ್ 2’ ಚಿತ್ರದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ನಾಜರ್, ರಮೇಶ್ ಭಟ್, ವೀಣಾ ಸುಂದರ್, ವಿನಾಯಕ್ ಜೋಶಿ, ಶೋಭರಾಜ್ ಮುಂತಾದ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಬೆಂಗಳೂರು, ಮೈಸೂರು, ಹೈದರಾಬಾದ್, ಸುರತ್ಕಲ್, ಕಾಪು, ಹೊನ್ನಾವರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಗುರುಪ್ರಸಾದ್ ಮತ್ತು ಮಧು ಅಂಬಟ್ ಅವರ ಛಾಯಾಗ್ರಹಣ ಹಾಗೂ ಜೂಡಾ ಸ್ಯಾಂಡಿ ಸಂಗೀತವಿದೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರೇ ಚಿತ್ರದ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.