ಸಹರಾ ಮಹಿಳಾ ಕ್ರಿಕೆಟ್ ಸಾಧಕಿಯ ಕಥೆ
ಅಂತರಾಷ್ಟ್ರೀಯ ಕ್ರೀಡೆಯಾದ ಕ್ರಿಕೆಟ್ ಆಟಕ್ಕೆ ಸಂಬಂಧಪಟ್ಟಂತೆ ಹಲವಾರು ಚಲನಚಿತ್ರಗಳು ಹಲವಾರು ಭಾಷೆಗಳಲ್ಲಿ ಈಗಾಗಲೇ ತೆರೆಮೇಲೆ ಬಂದುಹೋಗಿವೆ. ಆದರೆ ಒಬ್ಬ ಮಹಿಳಾ ಕ್ರಿಕೆಟ್ ಆಟಗಾರ್ತಿಯ ಸಾಧನೆಯ ಕುರಿತಂತೆ ಕಥೆ ಇಟ್ಟುಕೊಂಡು ಯಾವುದೇ ಚಿತ್ರ ನಿರ್ಮಾಣವಾಗಿಲ್ಲ. “ಸಹರಾ” ಎನ್ನುವ ಚಿತ್ರದ ಮೂಲಕ ಯುವ ಚಿತ್ರ ತಂಡವೊಂದು ಅಂಥ ಪ್ರಯತ್ನ ಮಾಡಹೊರಟಿದೆ. ಕನ್ನಡದಲ್ಲಿ ಮೊದಲ ಮಹಿಳಾ ಕ್ರಿಕೆಟ್ ಪ್ರಧಾನ ಸಿನಿಮಾ ಇದಾಗಿದೆ.
ಕಳೆದ ೮ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಮಂಜೇಶ್ ಭಗವತ್ ಅವರು ಇದೇ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತು ಈ ಚಿತ್ರವನ್ನು ಹೊರತರುತ್ತಿದ್ದಾರೆ.
ಮಾ ಕ್ರಿಯೆಷನ್ಸ್ ಪ್ರಥಮ ನಿರ್ಮಾಣದ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ – ಚಿತ್ರಕಥೆ – ಸಂಭಾಷಣೆ ರಚಿಸಿದ್ದಾರೆ.
ಈಗಾಗಲೇ ಸಹರಾ ಚಿತ್ರಕ್ಕೆ ಮೈಸೂರು – ನಂಜನಗೂಡು – ಬೆಂಗಳೂರು ಚಿಕ್ಕಮಗಳೂರು – ಮೂಡಿಗೆರೆ – ಸಕಲೇಶಪುರ ಸುತ್ತಮುತ್ತ ಶೇ, ೯೫ರಷ್ಟು ಭಾಗದ ಚಿತ್ರೀಕರಣವನ್ನು ಸಹ ಮುಗಿಸಿರುವ ನಿರ್ದೇಶಕರು ಕ್ಲೈಮ್ಯಾಕ್ಸ್ ಹಂತದ ಶೂಟಿಂಗ್ ಮಾತ್ರವೇ ಬಾಕಿ ಉಳಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ನಾಯಕಿಯಾಗಿ ಮೈಸೂರಿನ ಸಾರಿಕಾರಾವ್ ಅವರು ಅಭಿನಯಿಸಿದ್ದಾರೆ. ಚಿತ್ರದ ಪಾತ್ರಕ್ಕಾಗಿಯೇ ಸಾರಿಕಾ ಅವರು ರಣಜಿ ಆಟಗಾರರಾದ. ಕೆ.ಬಿ. ಪವನ್ ಅವರ ಬಳಿ ಕ್ರಿಕೆಟ್ ಆಟದ ಬಗ್ಗೆ ತರಬೇತಿ ಪಡೆದುಕೊಂಡು ಬಂದು ನಂತರ ಪಾತ್ರಕ್ಕೆ ಬಣ್ಣ ಹಚ್ಚಿ ದ್ದಾರೆ. ನಿರ್ದೇಶಕ ಮಂಜೇಶ್ ಭಾಗವತ್ ಹಾಗೂ ನಾಯಕಿ ಸಾರಿಕಾರಾವ್ ಇಬ್ಬರೂ ಮೈಸೂರಿನವರೆ ಆಗಿರುವುದು ಚಿತ್ರದ ಮತ್ತೊಂದು ವಿಶೇಷ. ಅತಿಥಿ ಪಾತ್ರದಲ್ಲಿ ಡೇವಿಡ್ ಜಾನ್ಸನ್ ಮತ್ತು ರಘುರಾಮ್ ಭಟ್
( ಭಾರತ ತಂಡ ಪ್ರತಿನಿಧಿಸಿದ ಕರ್ನಾಟಕದ ಮಾಜಿ ಆಟಗಾರರು ) ಕಾಣಿಸಿಕೊಂಡಿದ್ದಾರೆ.
ಇನ್ನು ಈ ಚಿತ್ರದ ಉಳಿದ ತಾರಾಬಳಗದಲ್ಲಿ ಮಂಜುನಾಥ ಹೆಗಡೆ, ಕುರಿ ಸುನಿಲ್, ಅಂಕುಶ್ ರಜತ್, ರಂಜನ್, ಮಂಜುಳಾ ರೆಡ್ಡಿ, ಪ್ರಕಾಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ.
ವಿನ್ಸೆಂಟ್ ಅಂಥೋಣಿ ರೂಥ್ ಅವರ ಛಾಯಾಗ್ರಹಣ, ಸೂರಜ್ ಜೋಯಿಸ್ ಅವರ ಸಂಗೀತ ಸಂಯೋಜನೆ,
ಜೇಮ್ಸ್ ಚೇತನ್ – ಸಿಂಪಲ್ ಸುನೀ – ರತೀಶ್ ಜಯನ್
ಮಂಜೇಶ್ ಭಗವತ್ ಅವರ ಸಾಹಿತ್ಯವಿದ್ದು, ರಾಜೇಶ್ ಕೃಷ್ಣನ್ – ಚಂದನ್ ಶೆಟ್ಟಿ – ವ್ಯಾಸರಾಜ್ , ನವೀನ್ ಸಜ್ಜು – ಸಿದ್ದಾರ್ಥ ಬಲ್ಮಾ
ಸುಪ್ರೀಯಾರಾಮ್ ಹಾಡುಗಳಿಗೆ ದನಿಯಾಗಿದ್ದಾರೆ. ಸಂತೋಷ್ ಅವರ ನೃತ್ಯ ಸಂಯೋಜನೆ, ಥ್ರಿಲ್ಲರ್ ಮಂಜು ಅವರ ಸಾಹಸ, ವಿಜಯ್ . ಎಂ ಕುಮಾರ್ ಅವರ ಸಂಕಲನ, ಕೃಷ್ಣ ಮೂರ್ತಿ ಕನಕಪುರ ಅವರ ಪ್ರಸಾಧನ ಈ ಚಿತ್ರಕ್ಕಿದೆ.