ಮಾದಕ ವಸ್ತು ವಿರುದ್ದದ ಹೋರಾಟದ “ ನೋ ಕೊಕೇನ್” ಚಿತ್ರ ಆರಂಭ; ಕೌರವ ವೆಂಕಟೇಶ್ ನಿರ್ದೇಶನ
ಬಿ.ಸಿ.ಪಾಟೀಲ್ ನಿರ್ಮಾಣ, ಅಭಿನಯದ ‘ಕೌರವ’ ಚಿತ್ರದ ಮೂಲಕ ಸಾಹಸ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ, ಬೆಂಗಳೂರಿನ ಕೌರವ ವೆಂಕಟೇಶ್ ಇಲ್ಲಿಯವರೆಗೂ 1600ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ಸಂಯೋಜಕರಾಗಿ, ದಕ್ಷಿಣ ಭಾರತದ ಹೆಸರಾಂತ ಫೈಟ್ ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದಾರೆ.
ಇದೀಗ ‘ಕೊಕೇನ್’ ಚಿತ್ರದ ಮೂಲಕ ಕೌರವ ವೆಂಕಟೇಶ್ ನಿರ್ದೇಶಕರಾಗಿ ಬಡ್ತಿ ಪಡೆದಿದ್ಧಾರೆ. ಸಾಹಸ ಮತ್ತು ಆಕ್ಷನ್ ಕಟ್ ಹೇಳುತ್ತಿದ್ದಾರೆ. ದ ಡಫಿನಿಷನ್ ಆಫ್ ಪ್ಯಾಟ್ರಿಯಾಟಿಸಮ್ ಎಂಬ ಅಡಿಬರಹವಿದೆ. ಅಯೋಧ್ಯರಾಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಪುನೀತ್ ನಿರ್ಮಾಣ ಮಾಡುತ್ತಿದ್ದಾರೆ.
ನಿರ್ದೇಶಕರ ಹುಟ್ಟುಹಬ್ಬದಂದು ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಮುಹೂರ್ತ ಸಮಾರಂಭ ನಡೆಯಿತು. ಮೊದಲ ದೃಶ್ಯಕ್ಕೆ ಬಿ.ಸಿ.ಪಾಟೀಲ್ ಕ್ಲಾಪ್ ಮಾಡಿದರೆ, ಹಿರಿಯ ನಿರ್ದೇಶಕ ಓಂ ಪ್ರಕಾಶ್‍ರಾವ್ ಕ್ಯಾಮಾರ ಆನ್ ಮಾಡಿದರು. ಚಿತ್ರದಲ್ಲಿ ಬಿ.ಸಿ.ಪಾಟೀಲ್ ಕೇಂದ್ರ ಸಚಿವ ಹಾಗೂ ಓಂ ಪ್ರಕಾಶ್‍ರಾವ್ ಇನ್ಸ್‍ಪೆಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ನಿರ್ದೇಶಕ ಕೌರವ ವೆಂಕಟೇಶ್, ನಟ ಪ್ರಥಮ್ ಅವರು ಕಥೆ,ಚಿತ್ರಕಥೆ ಬರೆದು ನಾಯಕನಾಗಿ ಅಭಿನಯಿಸುತ್ತಿದ್ದಾರೆ. ನಾಲ್ಕು ಹಾಡುಗಳು, ಐದು ಫೈಟ್ ಇರುತ್ತದೆ. ಪ್ರತಿಯೊಂದು ಸನ್ನಿವೇಶಗಳು ಊಹಿಸಲಾಗದಂತೆ ಬರುತ್ತದೆ. ಬೆಂಗಳೂರು, ಮಂಗಳೂರು, ಹಾಡುಗಳಿಗೆ ರಷ್ಯಾಗೆ ಹೋಗುವ ಇರಾದೆ ಇದೆ. ಕಾಮಿಡಿ, ಮಾಸ್, ರೋಮಾನ್ಸ್ ಇರುವುದರಿಂದ ನೋಡುಗರಿಗೆ ಬೋರ್ ಅನಿಸುವುದಿಲ್ಲ. ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಅಲ್ಲದೆ ತೂಕದ ಸಂದೇಶ ಇರುತ್ತದೆ ಎಂದರು.
ನಟ ಪ್ರಥಮ್ ಮಾತನಾಡಿ, ಇದೊಂದು ಪ್ಯಾನ್ ದಿಕ್ಕಿನಕಡೆಯ ಕನ್ನಡ ಸಿನಿಮಾ ಎನ್ನಬಹುದು. ಎಲ್ಲರೂ ನಮ್ಮ ಕಡೆ ತಿರುಗಲಿ ಎಂಬ ಅಭಿಲಾಷೆ. ದೇಶಪ್ರೇಮ ಸಾರುವ ಮಹಿಳಾ ಪ್ರಧಾನ ಚಿತ್ರವಾಗಿರುತ್ತದೆ. ಟ್ರಾವೆಲ್ಸ್ ನಡೆಸುತ್ತಿದ್ದು, ನೈಜಿರಿಯಾದಿಂದ 1000 ಕೋಟಿ ಮೌಲ್ಯದ ಕಂಟೈನರ್ ಬರುತ್ತದೆ. ಅದನ್ನು ಬೆಂಗಳೂರಿನಿಂದ ಗೋವಾಗೆ ಸಾಗಿಸಲು ದುರುಳರು ಯೋಜನೆ ಹಾಕಿಕೊಂಡಿರುತ್ತಾರೆ. ಯಾವುದೇ ಕಾರಣಕ್ಕೂ ಅದು ತಲುಪಬಾರದು ಎನ್ನುವ ಧೋರಣೆ ನನ್ನದು.
ಇದರ ಮಧ್ಯೆ ಇಂಟರ್‍ಪೂಲ್‍ನವರಿಂದಲೂ ಟಾಸ್ಕ್ ಆಗದೆ ಇದ್ದಾಗ, ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಳ್ಳುತ್ತದೆ. ಕೊನೆಗೆ ನಾಯಕ ಮತ್ತು ನಾಯಕಿ ಇಬ್ಬರು ಚಾಣಾಕ್ಷತನದಿಂದ ಅದನ್ನು ಯಾವ ರೀತಿ ನಾಶ ಮಾಡುತ್ತಾರೆ ಎಂಬುದನ್ನು ಹಾಸ್ಯ, ಆಕ್ಷನ್‍ನಿಂದ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಆಯುಕ್ತರುಗಳಾಗಿ ಶಶಿಕುಮಾರ್, ರವಿಕಾಳೆ ಇರುತ್ತಾರೆ. ನಿಮ್ಮಗಳ ಬೆಂಬಲ ಸದಾ ಇರಲಿ ಎಂದು ಕೋರಿದರು.
ಬಳ್ಳಾರಿ ಮೂಲದ ಆರನ, ಪತ್ರಕರ್ತೆಯಾಗಿ ಅನ್ವಿತಿಶೆಟ್ಟಿ ನಾಯಕಿಯರು. ಉಳಿದಂತೆ ಗೋಕುಲ್, ಮುನಿ, ಕಾಮಿಡಿಕಿಲಾಡಿಗಳು ಖ್ಯಾತಿಯ ಸಂತು, ರವೀಂದ್ರನಾಥ್ ಮುಂತಾದವರು ನಟಿಸುತ್ತಿದ್ದಾರೆ.
ಯೋಗರಾಜಭಟ್-ಭರ್ಜರಿ ಚೇತನ್ ಸಾಹಿತ್ಯದ ಗೀತೆಗಳಿಗೆ ಡಿ.ಆರ್.ಕಲ್ಕಿ ಅಭಿಷೇಕ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಸಾಮ್ರಾಟ್, ಸಂಕಲನ ರಘು ಅವರದಾಗಿದೆ.