“ಗುಮ್ಮ” ಚಿತ್ರದ ಮೂಲಕ ಮಲನಾಡ ಬೆಡಗಿ ಅಮೃತಶ್ರೀ
ಚಂದನವನಕ್ಕೆ ನಾಯಕಿಯರ ಆಗಮನ ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ಶಿವಮೊಗ್ಗದ ನೀರೆ ಅಮೃತಶ್ರೀ ಸೇರ್ಪಡೆ. ಮಿಸ್ ಕರ್ನಾಟಕ 2021′ ಆಯ್ಕೆಯಾದ ನಂತರ ಒಂದಷ್ಟು ರ್ಯಾಂಪ್ ವಾಕ್‍ನಲ್ಲಿ ಪಾಲ್ಗೊಂಡು, ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ.ತೆಲುಗುದಲ್ಲಿ ‘ಆರಾಮ ಪುರಂಲೋ’ ‘ವ್ಯಾನ್’ ಕನ್ನಡದಲ್ಲಿ ‘ಗುಮ್ಮ’ ಚಿತ್ರಗಳಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಕಾಲೇಜು ದಿನಗಳಿಂದಲೇ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. ತಂದೆ ನಿವೃತ್ತ ಇಂಜಿನಿಯರ್. ಗೃಹಿಣಿ ತಾಯಿಗೆ ತಾನು ನಟಿಯಾಗಬೇಕೆಂಬ ಆಸೆ ಈಡೇರಲಿಲ್ಲ. ಮಗಳಿಗೆ ಬಣ್ಣ ಹಚ್ಚಿಸಿ ತನ್ನ ಬಯಕೆಯನ್ನು ಸಾರ್ಥಕ ಗೊಳಿಸಿಕೊಂಡಿದ್ದಾರೆ. ತಾತ ರಂಗಭೂಮಿ ಕಲಾವಿದರಾಗಿ ಹಲವು ನಾಟಕಗಳಲ್ಲಿ ಪಾರ್ಟ್ ಮಾಡಿದ್ದರು. ಅದರಂತೆ ಅಭಿನಯ ಎನ್ನುವುದು ರಕ್ತಗತವಾಗಿ ಬಂದಿದೆ. ‘
ಈ ಪೈಕಿ ಎರಡು ಭಾಷೆಯಲ್ಲಿ ತಲಾ ಒಂದೊಂದು ಚಿತ್ರವು ಬಿಡುಗಡೆಗೊಂಡಿದೆ. ಸಾಫ್ಟ್ವೇರ್ ಇಂಜಿನಿಯರ್ ಆಗಿ ಎಂಎನ್ಸಿದಲ್ಲಿ ಕೆಲಸ ಮಾಡುತ್ತಾ, ಬಿಡುವಿನ ವೇಳೆಯನ್ನು ನಟನೆಗೆ ಸಮಯ ಮೀಸಲಿಟ್ಟಿದ್ದಾರೆ. ಸದ್ಯ ಹೆಸರಿಡದ ಎರಡು ಚಿತ್ರಗಳಿಗೆ ಸಹಿ ಮಾಡಿದ್ದು, ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆಯಂತೆ.
ಎಲ್ಲಾ ನಟಿಯರು ಬಯಸುವಂತೆ ನೈಜ ಘಟನೆಯ ಕಥೆಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಹಂಬಲವಿದೆ. ಅದರಲ್ಲೂ ಡಾನ್ ಪೂಲನ್ದೇವಿ ಇರುವಂತ ಪಾತ್ರ, ‘ಹಸೀನಾ ಪಾರ್ಕರ್’ ಚಿತ್ರದಲ್ಲಿ ಭೂಗತಲೋಕದ ಪಾತಕಿ ದಾವೂದ್ ಇಬ್ರಾಹಿಂ ತಂಗಿಯಾಗಿ ಶ್ರದ್ದಾಕಪೂರ್ ನಿರ್ವಹಿಸಿದಂತ ರೋಲ್ ಮಾಡುವಾಸೆ. ಹಾರರ್, ಥ್ರಿಲ್ಲರ್ ಅಂಶಗಳು ಇಷ್ಟವಾದ ಕಾರಣ, ಇಂತಹ ಚಿತ್ರದಲ್ಲಿ ಅವಕಾಶ ಬಂದರೆ ಖಂಡಿತ ನಟಿಸುತ್ತೇನೆ. ಅದಕ್ಕೆ ಕಾಲ ಕೂಡಿ ಬರಬೇಕು. ರಾಕಿಂಗ್ ಸ್ಟಾರ್ ಯಶ್, ಗತಕಾಲದ ಸರಿತಾ ಇಷ್ಟದ ಕಲಾವಿದರಂತೆ.
ಒಳ್ಳೆ ಬ್ಯಾನರ್, ಉತ್ತಮ ಕಥೆ ಇದ್ದರೆ ಯಾವುದೇ ಪಾತ್ರ ಮಾಡಲು ಸಿದ್ದ. ಮೊದಲು ಅಪ್ಪನಿಗೆ ಕಥೆ ಹೇಳಿ, ತರುವಾಯ ಆಯಾ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಗೆ ಸೂಚಿಸುತ್ತಾರೆ. ಬಾಲಿವುಡ್, ಕಾಲಿವುಡ್ ಕಡೆಯಿಂದ ಇನ್ನು ಕರೆ ಬಂದಿಲ್ಲ. ಅದೃಷ್ಟ ಒಲಿದು ಬಂದರೆ, ಅಲ್ಲಿಯೂ ಹೆಜ್ಜೆ ಇಡಬಹುದು ಎನ್ನುತ್ತಾರೆ ಅಮೃತಶ್ರೀ.