ದಶಕದ ಬಳಿಕ ಮತ್ತೆ “ಬಹದ್ದೂರ್” ಚಿತ್ರ ಮರುಬಿಡುಗಡೆ
ಆರ್ ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್ ಶ್ರೀನಿವಾಸ್ ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಿಸಿರುವ, ಚೇತನ್ ಕುಮಾರ್ ನಿರ್ದೇಶನದ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕ ಹಾಗೂ ರಾಧಿಕಾ ಪಂಡಿತ್ ನಾಯಕಿಯಾಗಿ ನಟಿಸಿದ್ದ ಸೂಪರ್ ಹಿಟ್ “ಬಹದ್ದೂರ್” ಚಿತ್ರ 2014 ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಈಗ ಹತ್ತು ವರ್ಷಗಳ ನಂತರ ಜೂನ್ 21 ರಂದು ಈ ಚಿತ್ರ ಮರು ಬಿಡುಗಡೆಯಾಗುತ್ತಿದೆ.
ಗೋಕುಲ್ ಫಿಲಂಸ್ ಅವರು ಅದ್ದೂರಿಯಾಗಿ ಅನೇಕ ಚಿತ್ರಮಂದಿರಗಳಲ್ಲಿ ಚಿತ್ರವನ್ನು ರೀ ರಿಲೀಸ್ ಮಾಡುತ್ತಿದ್ದಾರೆ. “ಬಹದ್ದೂರ್” ಚಿತ್ರಕ್ಕೆ ಪುನೀತ್ ರಾಜಕುಮಾರ್ ಅವರು ಧ್ವನಿ ನೀಡಿದ್ದರು. ಪುನೀತ್ ಅವರು ತಮ್ಮ ಅಭಿನಯದ ಚಿತ್ರವನ್ನು ಹೊರತುಪಡಿಸಿ ಧ್ವನಿ ನೀಡಿದ ಮೊದಲ ಚಿತ್ರ “ಬಹದ್ದೂರ್”. ಚಿತ್ರದ ಮೊದಲ ಸನ್ನಿವೇಶಕ್ಕೆ ರವಿಚಂದ್ರನ್ ಅವರು ಕ್ಲ್ಯಾಪ್ ಮಾಡಿ ಹಾರೈಸಿದ್ದರು.
ಪುನೀತ್ ರಾಜಕುಮಾರ್ ಅವರೆ ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದ್ದರು. ವಿ.ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಇಂದಿಗೂ ಜನಪ್ರಿಯ. “ಬಹದ್ದೂರ್ ” ಬಿಡುಗಡೆಯಾದ ಹತ್ತು ವರ್ಷಗಳಲ್ಲಿ ನೂರಾರೂ ಸಲ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದೆ.
ಈ ಚಿತ್ರ ಪ್ರಸಾರವಾದಗಲೆಲ್ಲ ಉತ್ತಮ ಟಿ.ಆರ್.ಪಿ ಬರುತ್ತಿರುವುದು ವಿಶೇಷ. ಧ್ರುವ ಸರ್ಜಾ ಹಾಗು ರಾಧಿಕಾ ಪಂಡಿತ್ ಅವರ ಅದ್ಭುತ ಅಭಿನಯ ಈ ಚಿತ್ರದ ಹೈಲೆಟ್. ಇದು ಧ್ರುವ ಸರ್ಜಾ ಅಭಿನಯದ ಎರಡನೇ ಚಿತ್ರ. ಹತ್ತು ವರ್ಷಗಳ ಮೇಲೆ ಈ ಚಿತ್ರ ಮರು ಬಿಡುಗಡೆಯಾಗುತ್ತಿರುವುದು ಸಂತೋಷವಾಗಿದೆ ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್.