``Saaramsha'' Trailer Released: The film hits the screens on February 15

`ಸಾರಾಂಶ’ ಚಿತ್ರ ಟ್ರೈಲರ್ ಬಿಡುಗಡೆ: ಫೆಬ್ರವರಿ 15ಕ್ಕೆ ಚಿತ್ರ ತೆರೆಗೆ - CineNewsKannada.com

`ಸಾರಾಂಶ’ ಚಿತ್ರ ಟ್ರೈಲರ್ ಬಿಡುಗಡೆ: ಫೆಬ್ರವರಿ 15ಕ್ಕೆ ಚಿತ್ರ ತೆರೆಗೆ

ಸೂರ್ಯ ವಸಿಷ್ಠ ನಿರ್ದೇಶನದ `ಸಾರಾಂಶ’ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಆ ಮೂಲಕ ಸಿನಿಮಾ ಮೇಲೆ ಮೂಡಿಕೊಂಡಿದ್ದ ಕುತೂಹಲ ತಣಿಸುವಂತೆ ಇದೀಗ ಟ್ರೈಲರ್ ಬಿಡುಗಡೆಗೊಂಡಿದೆ.

ಸಪ್ತಸಾಗರದಾಚೆ ಎಲ್ಲೋ ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ ಸಾರಾಂಶ ಟ್ರೈಲರ್ ಬಿಡುಗಡೆಗೊಳಿಸಿದ್ದಾರೆ. ಈ ಟ್ರೈಲರ್ ಮೂಡಿ ಬಂದಿರುವ ರೀತಿಯನ್ನು ಮೆಚ್ಚಿಕೊಳ್ಳುತ್ತಾ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಅಂದಹಾಗೆ, ಈ ಚಿತ್ರ ಇದೇ ಫೆಬ್ರವರಿ 15ರಂದು ತೆರೆಗೆ ಬರಲಿದೆ.

`ಸಾರಾಂಶ’ದ ಬಗೆಗಿನ ಒಂದಷ್ಟು ವಿಚಾರಗಳನ್ನು ಚಿತ್ರತಂಡ ಹಂತ ಹಂತವಾಗಿ ಜಾಹೀರು ಮಾಡಿತ್ತು. ಇದೀಗ ಒಂದಿಡೀ ಸಿನಿಮಾದ ಆಂತರ್ಯವನ್ನು ತೆರೆದಿಡುವಂಥಾ ಟ್ರೈಲರ್ ಲಾಂಚ್ ಆಗಿದೆ. ವರ್ಷಾಂತರಗಳ ಹಿಂದೆ ಬಿಡುಗಡೆಗೊಂಡು, ಇಂದಿಗೂ ಆ ಪ್ರಭೆ ಉಳಿಸಿಕೊಂಡಿರುವ ಲೂಸಿಯಾ ಚಿತ್ರತಂಡದ ಸದಸ್ಯರು ಈ ಪತ್ರಿಕಾಗೋಷ್ಠಿಯ ಪ್ರಮುಖ ಆಕರ್ಷಣೆಯಾಗಿದ್ದರು.

ಶ್ರುತಿ ಹರಿಹರನ್, ಹೇಮಂತ್ ರಾವ್ ಮಾತ್ರವಲ್ಲದೇ ಈ ಚಿತ್ರದ ನಿರ್ದೇಶಕರಾದ ಸೂರ್ಯ ವಸಿಷ್ಠ ಕೂಡಾ ಲೂಸಿಯಾ ಭಾಗವಾಗಿದ್ದವರೆ. ಇವರೆಲ್ಲರ ಸಮ್ಮುಖದಲ್ಲಿ ಸಾರಾಂಶ ಟ್ರೈಲರ್ ಬಿಡುಗಡೆಗೊಂಡಿದೆ.

ಪತ್ರಿಕಾ ಗೋಷ್ಠಿಯಲ್ಲಿ ಶ್ರುತಿ ಹರಿಹರನ್, ದೀಪಕ್ ಸುಬ್ಮಣ್ಯ, ಸೂರ್ಯ ವಸಿಷ್ಠ, ಸಂಗೀತ ನಿರ್ದೇಶಕ ಉದಿತ್ ಹರಿತಾಸ್, ರವಿ ಭಟ್, ಶ್ವೇತಾ ಗುಪ್ತ ಮುಂತಾದವರು ಹಾಜರಿದ್ದರು. ಅಂದಹಾಗೆ, ಇದು ಈ ದಿನಮಾನಕ್ಕೆ ಅತ್ಯಂತ ಅಪರೂಪವೆಂಬಂಥಾ ಗುಣ ಲಕ್ಷಣಗಳನ್ನು ಒಳಗೊಂಡಿರುವ ಚಿತ್ರ. ನಿರ್ದೇಶಕ ಸೂರ್ಯ ವಸಿಷ್ಠ ಅವರೇ ಪ್ರಧಾನ ಪಾತ್ರಗಳಲ್ಲೊಂದಕ್ಕೆ ಜೀವ ತುಂಬಿದ್ದಾರೆ. ದೀಪಕ್ ಸುಬ್ರಮಣ್ಯ ವಿಶಿಷ್ಟ ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಶ್ರುತಿ ಹರಿಹರನ್ ಮಾಯಾ ಎಂಬ ಪಾತ್ರವನ್ನು ಒಳಗಿಳಿಸಿಕೊಂಡಿದ್ದಾರೆ. ಈ ಎಲ್ಲ ಪಾತ್ರಗಳ ಝಲಕ್ಕುಗಳು ಸದರಿ ಟ್ರೈಲರ್ ನಲ್ಲಿ ಕಾಣಿಸಿಕೊಂಡಿವೆ.

ಈ ಸಿನಿಮಾದ ಎಲ್ಲ ಪಾತ್ರಗಳೂ ವಿಶೇಷವಾಗಿವೆ ಎಂಬುದಕ್ಕೆ ಈ ಟ್ರೈಲರ್ ನಲ್ಲಿ ಪುರಾವೆಗಳು ಸಿಗುತ್ತವೆ. ಅದರಲ್ಲೊಂದು ಪಾತ್ರವನ್ನು ಶ್ವೇತಾ ಗುಪ್ತ ನಿರ್ವಹಿಸಿದ್ದಾರೆ. ಕನ್ನಡತನದ ಬಗ್ಗೆ ಅತೀವ ಪ್ರೀತಿ ಆಸಕ್ತಿ ಇಟ್ಟುಕೊಂಡಿರೋ ಕನ್ನಡೇತರ ಬುಕ್ ಪಬ್ಲಿಷರ್ ಪಾತ್ರವಿದೆ.

ಟ್ರೈಲರ್‍ನಲ್ಲಿ ಪ್ರಧಾನವಾಗಿ ಎರಡು ಬೊಂಬೆ ಪಾತ್ರಗಳು ನೋಡುಗರನ್ನು ಸೆಳೆದುಕೊಂಡಿವೆ. ಅದನ್ನು ರಾಮ್ ಪ್ರಸಾದ್ ಬಾಣಾವರ ಮತ್ತು ಸತೀಶ್ ಕುಮಾರ್ ನಿರ್ವಹಿಸಿದ್ದಾರೆ. ಅದು ಟ್ರೈಲರ್ ನ ಪ್ರಮುಖ ಆಕರ್ಷಣೆಯಾಗಿಯೂ ಗಮನ ಸೆಳೆಯುವಂತಿದೆ.

ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ಸ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣವಿದೆ.

ಉದಿತ್ ಹರಿತಾಸ್ ಸಂಗೀತ ನಿರ್ದೇಶನ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ಸಾರಾಂಶದ ಮೂಲಕ ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕ ಪರಿಚಯವಾಗುತ್ತಿದ್ದಾರೆ. ಅವರ ಛಾಯಾಗ್ರಹಣ ಕೂಡಾ ಸಾರಾಂಶದ ಶಕ್ತಿಯಂತಿದೆ ಎಂಬುದು ಚಿತ್ರತಂಡದ ಭರವಸೆ…

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin