ವಿಭಿನ್ನ ಕಥಾಹಂದರದ “ಪೆನ್ ಡ್ರೈವ್” ಚಿತ್ರೀಕರಣ ಮುಕ್ತಾಯ: ಕುತೂಹಲ ಹೆಚ್ಚಳ
ಕನಸಿನ ರಾಣಿ ಮಾಲಾಶ್ರೀ ಹಾಗೂ ” ಬಿಗ್ ಬಾಸ್” ಖ್ಯಾತಿಯ ಬೆಂಕಿ ತನಿಷಾ ಕುಪ್ಪಂಡ ಹಾಗೂ ಕಿಶನ್ ಅಭಿನಯ “ ಪೆನ್ ಡ್ರೈವ್” ಚಿತ್ರದ ಚಿತ್ರೀಕರಣ ಮತ್ತು ಡಬ್ಬಿಂಗ್ ಕಾರ್ಯ ಮುಕ್ತಾಯವಾಗಿದ್ದು ಪೆನ್ ಡ್ರೈವ್ ನಲ್ಲಿ ಏನಿರಬಹುದು ಎನ್ನುವ ಕುತೂಹಲ ಕೆರಳಿಸಿದೆ
ಆರ್ ಹೆಚ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್ ಹನುಮಂತರಾಜು ಹಾಗೂ ಲಯನ್ ಎಸ್ ವೆಂಕಟೇಶ್ ನಿರ್ಮಾಣದ, ಸೆಬಾಸ್ಟಿನ್ ಡೇವಿಡ್ ನಿರ್ದೇಶನದ ಚಿತ್ರಕ್ಕೆ ಸದ್ಯ ರೀರೆಕಾರ್ಡಿಂಗ್ ನಡೆಯುತ್ತಿದೆ.
ಕಳೆದ ಮೂರು ದಶಕಗಳಿಂದ ಚಿತ್ರರಂಗದಲ್ಲಿ ವಿವಿಧ ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಸಬಾಸ್ಟಿನ್ ಡೇವಿಡ್ ಈವರೆಗೂ ಹದಿನೈದಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಪ್ರಸ್ತುತ ವಿಭಿನ್ನ ಕಥಾಹಂದರ ಹೊಂದಿರುವ “ಪೆನ್ ಡ್ರೈವ್” ಚಿತ್ರ ನಿರ್ದೇಶಿಸಿದ್ಧಾರೆ.
“ಚಾಮುಂಡಿ”, “ದುರ್ಗಿ” ಮುಂತಾದ ಆಕ್ಷನ್ ಚಿತ್ರಗಳಲ್ಲಿ ಅಮೋಘ ಅಭಿನಯದ ಮೂಲಕ ಆಕ್ಷನ್ ಕ್ವೀನ್ ಎಂದು ಜನಪ್ರಿಯರಾಗಿರುವ ಮಾಲಾಶ್ರೀ ಹಾಗೂ “ಬಿಗ್ ಬಾಸ್” ನಂತರ ಬೆಂಕಿ ಅಂತಲೇ ಕರೆಯಲ್ಪಡುವ ತನಿಷಾ ಕುಪ್ಪಂಡ ಇಬ್ಬರು ಚಿತ್ರದಲ್ಲಿ ನಟಿಸಿದ್ದಾರೆ. ಇಬ್ಬರು ನಟಿಯರ ಸಮಾಗಮದಲ್ಲಿ ಮೂಡಿಬರುತ್ತಿರುವ ಚಿತ್ರದ ಬಗ್ಗೆ ಅಭಿಮಾನಿ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲ ಇದೆ. ಇವರ ಜೊತೆಗೆ “ಬಿಗ್ ಬಾಸ್” ಖ್ಯಾತಿಯ ಕಿಶನ್ ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ತಾರಾಗಣದಲ್ಲಿ ಮಾಲಾಶ್ರೀ, ತನಿಷಾ ಕುಪ್ಪಂಡ, ಕಿಶನ್, ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಗೀತಾ, ಭಾಗ್ಯ, ಗೀತಪ್ರಿಯ, ಕರಿಸುಬ್ಬು ಮುಂತಾದವರಿದ್ದಾರೆ
ಡಾ.ವಿ.ನಾಗೇಂದ್ರ ಪ್ರಸಾದ್ ಗೀತರಚನೆ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ನಾಗೇಶ್ ಸಂಕಲನ ಕಾರ್ಯದೊಂದಿಗೆ ಸಂಭಾಷಣೆ ಬರೆದಿದ್ದಾರೆ. ರೀರೆಕಾರ್ಡಿಂಗ್ ಮುಗಿಸಿಕೊಂಡು ಸೂಕ್ತ ಸಮಯದಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶ ನಿರ್ಮಾಪಕ, ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಅವರದು.