The story of an engineer boy - Tragedy: 'Royal Mech'

ಇಂಜಿನಿಯರ್ ಹುಡುಗನ ಕಥೆ – ವ್ಯಥೆ :’ರಾಯಲ್ ಮೆಕ್’ - CineNewsKannada.com

ಇಂಜಿನಿಯರ್ ಹುಡುಗನ ಕಥೆ – ವ್ಯಥೆ :’ರಾಯಲ್ ಮೆಕ್’

ಚಂದನವನಕ್ಕೆ ಪ್ರತಿಭಾವಂತರು, ವಿದ್ಯಾವಂತರು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆ ಆಗಿದೆ. ಅದೇ ಸಾಲಿಗೆ ಭದ್ರಾವತಿ ಮೂಲದ ಧನುಷ್ ಸದ್ಯ ಎಂಎನ್‌ಸಿ ಕಂಪೆನಿಯಲ್ಲಿ ಟೆಕ್ಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಮಾಡ್‌ಲಿಂಗ್‌ದಲ್ಲಿ ಗುರುತಿಸಿಕೊಂಡು, ಹಿರಿಯ ನಟಿ ರೇಖಾದಾಸ್ ಗರಡಿಯಲ್ಲಿ ಅಭಿನಯದ ತರಭೇತಿಯನ್ನು ಪಡೆದುಕೊಂಡಿದ್ದಾರೆ.

ಇವೆಲ್ಲಾದರ ಪರಿಣಾಮ ’ರಾಯಲ್ ಮೆಕ್’ ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಾಯಕನಾಗಿ ಪರಿಚಯಗೊಂಡಿದ್ದಾರೆ. ಒಂದಷ್ಟು ಸ್ನೇಹಿತರು ಗೆಳೆಯನ ಸಲುವಾಗಿ ಶಬರಿ ಫಿಲಿಂಸ್ ಮುಖಾಂತರ ಬಂಡವಾಳ ಹೂಡಿದ್ದಾರೆ. ನಾಗಭೂಷಣ್.ಜೆ.ಹೆಚ್.ಎಂ ಮತ್ತು ಡಾ.ಜಯದೇವಹಾಸನ್ ಜಂಟಿಯಾಗಿ ಆಕ್ಷನ್ ಕಟ್ ಹೇಳಿದ್ದಾರೆ. ’ಲೈಫ್ ಅಂದ್ಕೊಂಡಷ್ಟು ರಾಯಲ್ ಅಲ್ಲ’ ಅಂತ ಅಡಿಬರಹ ಇರಲಿದೆ.

ಪ್ರಚಾರದ ಮೊದಲ ಹಂತವಾಗಿ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಮಾಜಿ ಸಚಿವ ರೇಣುಕಚಾರ್ಯ ಮತ್ತು ರೇಖಾದಾಸ್ ಆಗಮಿಸಿ ತಂಡಕ್ಕೆ ಶುಭಹಾರೈಸಿದರು.
ಚಿತ್ರದ ಕುರಿತು ಹೇಳುವುದಾದರೆ ಅವನು ಇಂಜಿನಿಯರ್. ಗೆಳಯನಿಂದ ಮೋಸ, ಮನೆಯಲ್ಲಿ ನಡೆಯುವ ಘಟನೆಗಳಿಂದ ವಿಚಲಿತನಾಗಿ ಹೊರಬಂದು ಫುಡ್ ಡಿಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಆದರೆ ಮನದೊಳಗೆ ತಾನು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಕಾಡುತ್ತಿರುತ್ತದೆ. ಒಂದು ಹಂತದಲ್ಲಿ ಒಬ್ಬ ವ್ಯಕ್ತಿಯಿಂದ ಪ್ರೇರಣೆ ಸಿಗುತ್ತದೆ. ಇದನ್ನೆ ಗಂಭೀರವಾಗಿ ತೆಗೆದುಕೊಂಡಿದ್ದರಿಂದ ಗುರಿ ತಲುಪಲು ಅನುಕೂಲವಾಯಿತಾ? ಈತನ ಬದುಕಿನಲ್ಲಿ ಬಂದಿದ್ದ ಇಬ್ಬರ ಹುಡುಗಿಯರ ಪೈಕಿ ಯಾರು ಒಲಿಯುತ್ತಾರೆ? ಕೊನೆಗೆ ಎಲ್ಲವನ್ನು ಗೆದ್ದ ಮೇಲೆ ಏನು ಮಾಡ್ತಾನೆ ಎಂಬುದನ್ನು ಅರ್ಥಪೂರ್ಣ ಸನ್ನಿವೇಶಗಳ ಮೂಲಕ ತೋರಿಸಲಾಗಿದೆ. ಶೀರ್ಷಿಕೆಯು ಕಥೆಗೆ ಸಂಬಂಧ ಪಡುವುದರಿಂದ ಇದನ್ನೆ ಇಡಲಾಗಿದೆ.

ನಿರ್ದೇಶಕನ ಪಾತ್ರದಲ್ಲಿ ರಾಘವೇಂದ್ರರಾಜ್‌ಕುಮಾರ್, ನಾಯಕನಿಗೆ ಹುರಿದುಂಬಿಸುವ ಶ್ರಾವ್ಯರಾವ್, ಕಾಲೇಜು ವಿದ್ಯಾರ್ಥಿಯಾಗಿ ಗೌತಮಿಜಯರಾಂ ನಾಯಕಿಯರು. ಇವರೊಂದಿಗೆ ಪೋಷಕರಾಗಿ ರಮೇಶ್‌ಭಟ್-ವಿನಯಪ್ರಸಾದ್, ಖಳನಾಗಿ ನೀನಾಸಂ ಅಶ್ವಥ್, ನಗಿಸಲು ಕುರಿಪ್ರತಾಪ್, ಪವನ್‌ಕುಮಾರ್, ರೇಖಾದಾಸ್ ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಉಡುಪಿ, ಕುಂದಾಪುರ, ಕಾಪು ಬೀಚ್, ಚಿಕ್ಕಮಗಳೂರು, ಕ್ಯಾತಮಕ್ಕಿ ಬೆಟ್ಟ ಸುಂದರತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಪ್ರಮೋದ್‌ಮರವಂತೆ-ದೇವಪ್ಪಹಾಸನ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ರಿಜ್ವಾನ್‌ಅಹ್ಮದ್ ಸಂಗೀತ ಸಂಯೋಜಿಸಿದ್ದಾರೆ. ಚಂದ್ರಮೌಳಿ ಛಾಯಾಗ್ರಹಣ, ರುತ್ವಿಕ್‌ಶೆಟ್ಟಿ-ನವೀನ್‌ಶೆಟ್ಟಿ ಸಂಕಲನ, ಫಯಾಜ್‌ಖಾನ್-ಅಶೋಕ್ ಸಾಹಸ, ನೃತ್ಯ ಸ್ಟೀಫನ್ ಅವರದಾಗಿದೆ. ಸೆನ್ಸಾರ್ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿ ಯುಎ ಪ್ರಮಾಣ ಪತ್ರ ನೀಡಿದೆ. ಅಂದುಕೊಂಡಂತೆ ಆದರೆ ಸೆಪ್ಟಂಬರ್‌ದಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin