“ಪರ್ಯಾಯ” ಮಾರ್ಗ ಹುಡುಕಿಕೊಂಡವರ ಕಥೆ..
ಮಮತಾ ಕ್ರಿಯೇಶನ್ಸ್ ಮೂಲಕ ರಾಜಕುಮಾರ್ ಹಾಗೂ ಶ್ರೀಮತಿ ಇಂದುಮತಿ ರಾಜ್ ಕುಮಾರ್ ಅವರ ನಿರ್ಮಾಣದ, ಮೂವರು ವಿಭಿನ್ನ ಮನಸ್ಥಿತಿಯುಳ್ಳ ವಿಶೇಷ ಚೇತನರು ಬದುಕು ಕಟ್ಟಿಕೊಳ್ಳುವಲ್ಲಿ ಮಾಡುವ ಪ್ರಯತ್ನಗಳು, ಜನರ ಬೆಂಬಲ ಸಿಗದಿದ್ದಾಗ ಅವರು ಹುಡುಕಿಕೊಳ್ಳುವ ಪರ್ಯಾಯ ಮಾರ್ಗಗಳ ಸುತ್ತ ನಡೆಯೋ ಕಥೆಯನ್ನು ಹೇಳುವ ಪರ್ಯಾಯ ಚಿತ್ರ ಸೆಪ್ಟೆಂಬರ್ 8 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಅಂಧ, ಮೂಗ ಮತ್ತು ಕಿವುಡ ಈ ಮೂರು ಪಾತ್ರಗಳನ್ನಿಟ್ಟುಕೊಂಡು ರಮಾನಂದ ಮಿತ್ರ ಅವರು ಅಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ನಿರ್ಮಾಪಕ ರಾಜ್ ಕುಮಾರ್ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ರಮಾನಂದ ಮಿತ್ರಾ ನಮ್ಮ ಚಿತ್ರ ಬಿಡುಗಡೆಯ ಹಂತ ತಲುಪಿದೆ, ಒತ್ತಡ, ಖುಷಿ, ಕಾತುರವೂ ಇದೆ. ಪ್ರೇಕ್ಷಕರ ನಾಡಿಮಿಡಿತ ಅರಿಯುವ ಕೆಲಸ ಮಾಡಿದ್ದೇನೆ. ಉತ್ತರ ಕರ್ನಾಟಕದಲ್ಲಿ ನಮ್ಮ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೂರು ಪಾತ್ರದ ಮೂಲಕ ಸಂದೇಶ ಹೇಳುವ ಪ್ರಯತ್ನ ಮಾಡಿದ್ದೇನೆ. ಪ್ರತಿ ಪಾತ್ರದಲ್ಲೂ ತಿರುವುಗಳಿವೆ. ಹೊಸಬರ ಬಳಿ ಪಾತ್ರ ಮಾಡಿಸಿದ್ದು ಸವಾಲಿನಿಂದ ಕೂಡಿತ್ತು. ಮೊದಲ ದಿನ ಸ್ವಲ್ಪ ಕಷ್ಟ ಆಯಿತು. ಆನಂತರ ಸುಲಭವಾಯಿತು. ಮಾಮುಲಿ ಪ್ಯಾಟ್ರನ್ ಗಿಂತ ಬೇರೆರೀತಿ ಪ್ರಯತ್ನಿಸಿದ್ದೇವೆ. ಎಲ್ಲ ಕಲಾವಿದರೂ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಕಲಾವಿದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪರೀಕ್ಷೆ ಬರೆದಿದ್ದೇನೆ. ಫಲಿತಾಂಶಕ್ಕೆ ನಾವೆಲ್ಲ ಕಾಯುತ್ತಿದ್ದೇವೆ. ಉತ್ತರ ಕರ್ನಾಟಕದ ಹೆಚ್ಚಿನ ಥೇಟರುಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದರು.
ನಿರ್ಮಾಪಕ ಕಮ್ ನಟ ರಾಜ್ ಕುಮಾರ್, ಮಾತನಾಡಿ ನಾವೆಲ್ಲ ಅಪ್ಪುಅವರ ಅಭಿಮಾನಿಗಳು, ನಾನು ಕುರುಡನ ಪಾತ್ರ ಮಾಡಿದ್ದೇನೆ. ಬದುಕು ಕಟ್ಟಿಕೊಳ್ಳುವ ಹೋರಾಟದಲ್ಲಿ ಏನೇನೆಲ್ಲ ಆಗುತ್ತೆ ಅನ್ನೋದೇ ಈ ಕಥೆ. ನಿರ್ದೇಶಕರ ಬೆಂಬಲದಿಂದ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ ಎಂದರು.
ರಂಜನ್ ಕುಮಾರ್ ಮಾತನಾಡಿ, ಚಿತ್ರದಲ್ಲಿ ನನ್ನದು ಮೂಗನ ಪಾತ್ರ, ಒಂದೊಳ್ಳೆಯ ಸಿನಿಮಾ ಮಾಡಿದ್ದೇವೆ ಎಂದು ಹೇಳಿದರು
ನಟಿ ಅರ್ಚನಾ ಶೆಟ್ಟಿ ಮಾತನಾಡಿ, ಒಂದಷ್ಟು ಸೀರಿಯಲ್ ಗಳಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕರು ಕಥೆ ಹೇಳಿಲ್ಲ, ಕಿವುಡನ ಹೆಂಡತಿ ಪಾತ್ರ ಮಾಡಿದ್ದೇನೆ ಎಂದರು.
ಕಿವುಡನ ಪಾತ್ರ ಮಾಡಿರುವ ಮುರುಗೇಶ್ ಬಿ ಶಿವಪೂಜೆ ಮಾತನಾಡಿ, ಹಿಂದೆ ಕೊನೆಯಪುಟ, ಬೆಳಕಿನ ಕನ್ನಡಿ ಸೇರಿ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಹಾರರ್, ಕಾಮಿಡಿ, ಮನರಂಜನೆಯಂಥ ಎಲ್ಲಾ ಅಂಶಗಳು ನಮ್ನ ಚಿತ್ರದಲ್ಲಿವೆ ಎಂದರು.
ವಿತರಕ ನವರತ್ನ ಪ್ರಸಾದ್ ಅವರು ಈ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ ಎ.ಟಿ ರವೀಶ್ ಮಾತನಾಡಿ, ಆರ್.ಆರ್.ಮಾಡುವಾಗ ಚಿತ್ರ ನೋಡಿದ್ದೇನೆ. ತುಂಬಾ ಚೆನ್ನಾಗಿ ಬಂದಿದೆ.ಸಙಗೀತಕ್ಕೆ ಹೆಚ್ಚು ಸ್ಕೋಪ್ ಇದೆ ಎಂದು ಹೇಳಿದರು.
ಬೆಳಗಾವಿ ನಗರ ಅಲ್ಲದೆ ಹೆಚ್ಚಾಗಿ ಕೊಂಕಣಿ ಮಾತಾಡುವ ಚಿಗುಳೆ ಎಂಬ ಹಳ್ಳಿಯಲ್ಲಿ ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ನಡೆಸಲಾಗಿದೆ.
ಜಿ.ರಂಗಸ್ವಾಮಿ ಅವರು ಚಿತ್ರದ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಜೀವನ್ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದ್ದು, ಜಯಂತಿ ರೇವಡಿ, ಅರ್ಚನಾಶೆಟ್ಟಿ, ಪ್ರಿಯಾ ಕೊಠಾರಿ, ಭೀಮಾನಾಯಕ್, ಸುರೇಶ್ ಬೆಳಗಾವಿ, ರೋಹನ್ ಕುಬ್ಸದ್ ಮುಂತಾದವರು ಪರ್ಯಾಯ ಚಿತ್ರದಲ್ಲಿ ನಟಿಸಿದ್ದಾರೆ.