Yogi dances in the presence of Anjaneya for the film Raja Rani

ರಾಜ ರಾಣಿ ಚಿತ್ರಕ್ಕೆ ಆಂಜನೇಯನ ಸನ್ನಿಧಿಯಲ್ಲಿ ಯೋಗಿ ನೃತ್ಯ - CineNewsKannada.com

ರಾಜ ರಾಣಿ ಚಿತ್ರಕ್ಕೆ ಆಂಜನೇಯನ ಸನ್ನಿಧಿಯಲ್ಲಿ ಯೋಗಿ ನೃತ್ಯ

‘ವಜ್ರಕಾಯ’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಜೊತೆ ಸ್ಟಾರ್ ಕಲಾವಿದರು ದೇವರ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಇದರಿಂದ ಪ್ರೇರಿತಗೊಂಡ ‘ರಾಜರಾಣಿ’ ಚಿತ್ರದ ನಾಯಕ ಮತ್ತು ನಿರ್ದೇಶಕ ಬಳ್ಳಾರಿಯ ರಣಧೀರ್ ಇದೇ ತರಹದ ಗೀತೆಯನ್ನು ಸೃಷಿಸಿದ್ದಾರೆ. ‘ಇಟ್ಟಿಗೆ ಗೂಡಿನಲ್ಲಿ ರಾಜರಾಣಿ’ ಎಂಬ ಅಡಿಬರಹವಿದೆ.

ರಾಜನಕುಂಟೆ ಬಯಲು ಭೂಮಿಯಲ್ಲಿ ಬೃಹದಕಾರದ ಕಲರ್‍ಫುಲ್ ಸೆಟ್‍ನಲ್ಲಿ ಹತ್ತು ಅಡಿ ಎತ್ತರದ ಆಂಜನೇಯನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗಿತ್ತು. ಮಾಧ್ಯಮದವರು ಸೆಟ್‍ಗೆ ಭೇಟಿ ನೀಡಿದಾಗ ರವಿತಪಸ್ವಿ ಸಾಹಿತ್ಯ, ಪ್ರಭು ನೃತ್ಯ ಸಂಯೋಜನೆಯಲ್ಲಿ ಲೂಸ್‍ಮಾದ ಯೋಗಿ ಹಾಗೂ ರಣಧೀರ್ ನೃತ್ಯಕಲಾವಿದರೊಂದಿಗೆ ‘ತಳ ತಳ, ಎಲ್ಲಾ ಕಡೆ ನಿನ್ನ ಹಾಡೇ, ತುಂಬೋಗಿರೆ ನಾಡು ನಾಡೇ, ಏನಿಟ್ಟರೇ ನಿನ್ನ ಕಡೆ, ನಿತ್ಯಾ ಜನ ನಿನ್ನಾ ಎಡೆ’ ಸಾಲಿನ ಗೀತೆಗೆ ಮಾರುತಿ ಎದುರು ಹೆಜ್ಜೆ ಹಾಕುತ್ತಿದ್ದರು. ಬಿಡುವು ಮಾಡಿಕೊಂಡು ತಂಡವು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿತು.

ನಾಯಕ ಕಮ್ ನಿರ್ದೇಶಕ ರಣಧೀರ ಮಾತನಾಡಿ ನಾನು ಮೂಲತ: ಫೋಟೋಗ್ರಾಫರ್ ಒಂದು ಸಂದರ್ಭದಲ್ಲಿ ಕಿರುಚಿತ್ರಕ್ಕೆ ನಟಿಸುವ ಅವಕಾಶ ಸಿಕ್ಕಿತು. ಅಲ್ಲಿ ಸೈಕಲ್ ಹೊಡೆದುದರಿಂದ ಅವಮಾನವಾಯಿತು. ಇದನ್ನೆ ಛಾಲೆಂಜ್ ಆಗಿ ತೆಗೆದುಕೊಂಡಿದ್ದರಿಂದಲೇ ಮುಂದೆ ‘ಪುದಿಯವರುಗಳ್’ ತಮಿಳು ಚಿತ್ರಕ್ಕೆ ನಾಯಕನಾಗಿ ಅವಕಾಶ ಒದಗಿ ಬಂತು. ನಂತರ ಕನ್ನಡದಲ್ಲಿ ಮೂರು ಚಿತ್ರಗಳಲ್ಲಿ ಅಭಿನಯಸಿದೆ. ಇದರ ಅನುಭವದಿಂದಲೇ ಈ ಸಿನಿಮಾಕ್ಕೆ ಕಥೆ,ಚಿತ್ರಕಥೆ ಬರೆದು ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಯೋಗಿ ಸರ್ ಅವರನ್ನು ಕೇಳಿಕೊಂಡಾಗ ಸಂತೋಷದಿಂದ ಒಪ್ಪಿಕೊಂಡಿದ್ದು ಅಲ್ಲದೆ, ತುಂಬಾ ಸಹಕಾರ ನೀಡುತ್ತಿದ್ದಾರೆ. ವಿರಾಮದ ತರುವಾಯ ಹೀರೋ ಪರಿಚಯದ ಗೀತೆಯಲ್ಲಿ ಇವರು ಕಾಣಿಸಿಕೊಳ್ಳುವರು. ಇನ್ನಿಬ್ಬರು ಹೀರೋಗಳು ಬರುವರಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ತಿಳಿಸಲಾಗುವುದು. ಇದು ಮುಗಿದರೆ ಕುಂಬಳಕಾಯಿ ಒಡೆಯಲಾಗುವುದು ಎಂದರು

ಹದಿನೈದು ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದಂತ ಸತ್ಯ ಘಟನೆಯನ್ನು ಚಿತ್ರರೂಪಕ್ಕೆ ತರಲಾಗಿದೆ. ಇಬ್ಬರು ನಾಯಕರುಗಳ ನಡುವೆ ಕಾಣೆಯಾದ ಹುಡುಗಿಯ ಸುತ್ತ ಚಿತ್ರವು ಸಾಗುತ್ತದೆ. ಸೆಸ್ಪೆನ್ಸ್ ಹಾಗೂ ಪ್ರೀತಿಯನ್ನು ಒಳಗೊಂಡ ಕುಟುಂಬ ಸಮೇತ ನೋಡಬಹುದಾದ ದೃಶ್ಯಗಳು ಇರಲಿದೆ. ಕಾಣೆಯಾದವಳು ಯಾರಿಗೆ ಒಲಿಯುತ್ತಾಳೆ ಎನ್ನುವ ನಿಗೂಢ ಅಂಶಗಳು ಇರಲಿದೆ. ಬೆಂಗಳೂರು, ಮಾಲೂರು, ಕೋಲಾರ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ ಕಡೆಗಳಲ್ಲಿ 56 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಮಂಡ್ಯ ಮೂಲದ ರಿತನ್ಯಶೆಟ್ಟಿ ನಾಯಕಿ. ಜೀವನ್ ಉಪನಾಯಕ. ಉಳಿದಂತೆ ಗಿರಿಜಾಲೋಕೇಶ್, ಶೋಭರಾಜ್, ಬಿರಾದಾರ್, ಕಿಲ್ಲರ್‍ವೆಂಕಟೇಶ್, ಗಿರೀಶ್‍ಜತ್ತಿ, ಮಂಜುಳಾನಾಯ್ಡು, ಚಂದ್ರಪ್ರಭ ಮುಂತಾದವರು ನಟಿಸಿದ್ದಾರೆ. ನಮ್ಮ ಕೆಲಸ ಮುಗಿದಿದೆ. ಮಾಧ್ಯಮದವರ ಸಹಕಾರ ಬೇಕು ಎಂದರು.

ನಟ ಲೂಸ್ ಮಾದ ಯೋಗಿ ಮಾತನಾಡಿ ಹಾಡಿನಲ್ಲಿ ಮಾತ್ರ ಬರುತ್ತೇನೆ. ನಿರ್ದೇಶಕರು ಬಂದು ಸನ್ನಿವೇಶ ತಿಳಿಸಿದರು. ಎಲ್ಲದಕ್ಕಿಂತ ಹೆಚ್ಚಾಗಿ ಒಬ್ಬರಿಗೊಬ್ಬರು ಆಗಬೇಕು. ಆಗ ತಾನೆ ಉದ್ಯಮ ಬೆಳೆಯುತ್ತದೆ. ನಮಗೂ ಇನ್ನೋಬ್ಬರ ಸಪೆÇೀರ್ಟ್ ಅಗತ್ಯ ಇರುತ್ತದೆ. ಇದು ಒಳ್ಳೆಯ ಬೆಳವಣಿಗೆ ಎನ್ನಬಹುದು. ಗೆಳೆಯ ಪ್ರಭು, ನಾನು ಚಿತ್ರರಂಗಕ್ಕೆ ಬಂದಾಗಿನಿಂದಲೂ ಪರಿಚಯ. ಅವರ ಸಲುವಾಗಿ ಬಂದಿರುವೆ. ನನ್ನ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದರಿಂದ ಅದೇ ತರಹದ ಸ್ಟೆಪ್ಸ್ ಹಾಕಿಸುತ್ತಾರೆ. ‘ಸಿದ್ಲಿಂಗು-2’ಗೆ ಅಣಿಯಾಗುತ್ತಿದ್ದೇನೆ. ಗ್ಯಾಪ್‍ನಲ್ಲಿ ಇದನ್ನು ಮುಗಿಸಿಕೊಡುತ್ತಿರುವೆ ಎಂದು ಹೇಳಿದರು.

ಹದಿನೈದು ವರ್ಷಗಳ ನಂತರ ಯೋಗಿ ಅವರೊಂದಿಗೆ ನಟಿಸುತ್ತಿರುವ ಪುಂಗ ಖಳನ ಪಾತ್ರ ನಿಭಾಯಿಸುತ್ತಿರುವೆ ಎಂದರು.

ರಣಧೀರ್ ಅವರೊಂದಿಗಿನ ಸ್ನೇಹಕ್ಕಾಗಿ ಬಂಡವಾಳ ಹೂಡುತ್ತಿದ್ದೇನೆ ಅಂತಾರೆ ನೇತ್ರಾವತಿ ಮಲ್ಲೇಶ್. ಒಟ್ಟು ನಾಲ್ಕು ಗೀತೆಗಳ ಪೈಕಿ ಎರಡು ಹಾಡು ಬರೆದು ಸಂಗೀತ ಒದಗಿಸಿರುವುದು ಸುಧನ್‍ಪ್ರಕಾಶ್. ಛಾಯಾಗ್ರಹಣ ಮಧು-ಶರತ್, ಸಾಹಸ ಥ್ರಿಲ್ಲರ್‍ಮಂಜು, ಸಂಕಲನ ನಿಶಿತ್‍ಪೂಜಾರಿ ಅವರದಾಗಿದೆ. ಶ್ರೀ ಚಾಮುಂಡೇಶ್ವರಿ ಮೂವಿ ಮೇಕರ್ಸ್ ಅಡಿಯಲ್ಲಿ ವಿಜಯ್‍ಬಳ್ಳಾರಿ ಪಾಲುದಾರರಾಗಿದ್ದಾರೆ. ಇವರೊಂದಿಗೆ ಮಧುಸುದನ್, ಲೀಲಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin