UI Review : ಸಮಾಜದ ವ್ಯವಸ್ಥೆಗಳಿಗೆ ಕನ್ನಡಿ ಹಿಡಿದ ಚಿತ್ರ “ಯುಐ”

ಚಿತ್ರ: ಯುಐ
ನಿರ್ದೇಶನ; ಉಪೇಂದ್ರ
ತಾರಾಗಣ: ಉಪೇಂದ್ರ, ರೀಷ್ಮಾ ನಾಣಯ್ಯ, ಅಚ್ಯುತ್ ಕುಮಾರ್, ರವಿಶಂಕರ್, ಸಾಧುಕೋಕಿಲಾ, ನಿಧಿ ಸುಬ್ಬಯ್ಯ, ಕಾಕ್ರೋಚ್ ಸುಧಿ ಮತ್ತಿತರರು
ರೇಟಿಂಗ್ : *** 3.5/ 5
ನಟ, ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಚಿತ್ರಗಳು ಎಂದರೆ ಅಲ್ಲೊಂದು ವಿಶೇಷತೆ ಇರುತ್ತದೆ. ಸಮಾಜದ ನೈಜ ಘಟನೆಗಳ ಸತ್ಯದ ಅನಾವರಣ, ಸಮಸ್ಯೆಗಳಿಗೆ ಕೈಗನ್ನಡಿ, ವಯಕ್ತಿಕ ಮತ್ತು ಸಮಾಜದ ಬದಲಾವಣೆ, ವ್ಯಂಗ್ಯ,ವಿಡಂಬನೆ ಸೇರಿದಂತೆ ಸತ್ಯದ ದರ್ಶನ ಅನಾವರಣವಿರುತ್ತದೆ.
ಬರೋಬ್ಬರಿ 9 ವರ್ಷಗಳ ನಂತರ ಉಪೇಂದ್ರ ನಿರ್ದೇಶನ ಮಾಡಿರುವ “ಯುಐ” ಚಿತ್ರದಲ್ಲಿ ಇಂತಹ ಸೂಕ್ಷ್ಮ ವಿಷಯಗಳನ್ನು ಮುಂದಿಟ್ಟುಕೊಂಡು ಜನರಿಗೆ ನೈಜತೆಯ ಅನಾವರಣ ಮಾಡಿದ್ದಾರೆ. ಸಮಾಜ,ವ್ಯವಸ್ಥೆ ಹೀಗುರುತ್ತದೆ ನೋಡಿ, ಅದನ್ನು ತಿಳಿದು ಮುನ್ನೆಡೆಯಿರಿ ಎನ್ನುವ ಸಾಮಾಜಿಕ ಕಳಕಳಿಯೂ ಇದೆ.
ಸಮಾಜದ ಸಮಸ್ಯೆಗಳನ್ನು ಚಿತ್ರದಲ್ಲಿ ರೂಪಕಗಳಾಗಿ ಉಪೇಂದ್ರ ಅವರು ಬಳಸಿಕೊಳ್ಳುವ ರೀತಿಗೆ ಉಪೇಂದ್ರಗೆ ಉಪೇಂದ್ರರೇ ಸಾಟಿ. ಕಥೆಯನ್ನು ಬಿಟ್ಟುಕೊಡೆ ಕುತೂಹಲ ಹೆಚ್ಚಿಸುತ್ತಲೇ ಪ್ರೇಕ್ಷಕರ ತಲೆಗೆ ಹುಳ ಬಿಡುವ ಕಲೆ ಕರಗತ ಮಾಡಿಕೊಂಡಿದ್ಧಾರೆ. ಈ ಕಾರಣಕ್ಕಾಗಿಯೇ ಉಪೇಂದ್ರ ನಿರ್ದೇಶನ ಅಂದರೆ ಅಲ್ಲೊಂದು ವಿಶೇಷತೆ ಇರುತ್ತದೆ.
ಎಲ್ಲದಕ್ಕಿಂತ ಮಿಗಿಲಾಗಿ ಚಿತ್ರರಂಗ ಕಾತುರದಿಂದ ಕಾಯುವಂತೆ ಮಾಡುತ್ತಾರೆ. ಅದು “ಯುಐ” ಚಿತ್ರದಲ್ಲಿಯೂ ಅದೇ ಕಾತುರತೆ ,ಕುತೂಹಲ ಹೆಚ್ಚಿಸಿದ್ದಾರೆ
ಸಮಾಜದ ವ್ಯಂಗ್ಯ, ವಿಡಂಬನೆ, ಸಮಸ್ಯೆಗಳನ್ನು ತಮ್ಮದೇ ರೀತಿಯಲ್ಲಿ ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ತೆರೆಯ ಮೇಲೆ ತರುತ್ತಾರೆ. ಈ ಕಾರಣಕ್ಕಾಗಿಯೇ ಸಿನಿಮಾ ಒಂದು ಬಾರಿಗೆ ಅರ್ಥವಾಗುವುದಿಲ್ಲ, ಅದನ್ನು ಮತ್ತೊಮ್ಮೆ ಮಗದೊಮ್ಮೆ ನೋಡಿದಾಗಲೇ ಅದರ ತಿರುಳು ತಿಳಿಯಲು ಸಾಧ್ಯವಾಗುತ್ತೆ.
ಚಿತ್ರದಲ್ಲಿ ನಾಯಕ, ಆತನನ್ನು ಇಷ್ಟಪಡುವ ನಾಯಕಿ, ನಾಯಕ, ನಾಯಕಿ ಇದ್ದ ಮೇಲೆ ವಿಲನೂ ಕೂಡ ಇದ್ದಾನೆ. ಸೆಂಟಿಮೆಂಟ್‍ಗೆ ತಾಯಿ, ಹೀಗೆ ಒಂದೊಂದೇ ಪದರಗಳು ಅನಾವರಣವಾಗುತ್ತವೆ. ತಾಯಿಯ ರೂಪದ ಪ್ರಕೃತಿ. ನಾಯಕನ ಕಲ್ಕಿ ಅವತಾರ. ಸಮಾಜದ ವ್ಯವಸ್ಥೆ, ಅಧಿಕಾರ ಹೀಗೆ ಹಲವು ಪಾತ್ರಗಳ ರೂಪಕವನ್ನು ತೆರೆಯ ಮೇಲೆ ಅನಾವರಣ ಮಾಡಿದ್ದಾರೆ
ಜಾತಿ.ಧರ್ಮ,ಪ್ರಕೃತಿ ನಾಶ, ಭ್ರಷ್ಟಾಚಾರ,ಅಸಮಾನತೆ, ಬುದ್ಧ, ಬಸವ, ಸತ್ಯ ಯುಗ, ಪ್ರಜಾಪ್ರಭುತ್ವ, ಸೋಷಿಯಲ್ ಮೀಡಿಯಾ, ಜಾತಿ ಗಣತಿ ಹೀಗೆ ಹತ್ತು ಹಲವು ವಿಷಯಗಳನ್ನು ಚಿತ್ರದ ಮೂಲಕ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಚಿತ್ರದಲ್ಲಿ ಮನರಂಜನೆಯ ಜೊತೆ ಜೊತೆಗೆ ಸಮಾಜ, ಜವಾಬ್ದಾರಿ ಮತ್ತಿತರ ವಿಷಯ ಹೇಳಿದ್ದಾರೆ
ಸೂಪರ್ ಚಿತ್ರದಲ್ಲಿ 2030ರ ಭಾರತ ಹೇಗಿರಲಿದೆ ಎನ್ನುವುದನ್ನು ತೋರಿಸಿದ್ದ ಉಪೇಂದ್ರ ಯುಐನಲ್ಲಿ 2024ರ ಭಾರತದ ಸ್ಥಿತಿಗತಿ ಹೀಗೂ ಇರುತ್ತಾ, ನಾವೇನು ಮಾಡಬೇಕು, ಮಾಡಬಾರದು ಎನ್ನುವುದನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ, ಉಪೇಂದ್ರ ತಮ್ಮ ಪಾತ್ರಗಳಿಗೆ ಜೀವತುಂಬಿದ್ದಾರೆ. ಬರವಣೆಯಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ನಿರ್ದೇಶನದಲ್ಲಿಯೂ ಗೆದ್ದಿದ್ದಾರೆ. ರವಿಂಶಕರ್ ಸೇರಿದಂತೆ ರೀಷ್ಮಾ ನಾಣಯ್ಯ, ಅಚ್ಯುತ್ ಕುಮಾರ್, ರವಿಶಂಕರ್, ಸಾಧುಕೋಕಿಲಾ, ನಿಧಿ ಸುಬ್ಬಯ್ಯ, ಕಾಕ್ರೋಚ್ ಸುಧಿ ಹಲವು ಕಲಾವಿದರಿದ್ಧಾರೆ.
ಅಜನೀಶ್ ಲೋಕನಾಥ್, ವೇಣು ಛಾಯಾಗ್ರಹಣ, ಶಿವಕುಮಾರ್ ಕಲಾ ನಿರ್ದೇಶನ ಚಿತ್ರದ ಅಂದ.ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ.
ರೇಟಿಂಗ್ : ಕಳೆಪೆ – * / ಅಷ್ಟಕಷ್ಟೆ – ** / ಪರವಾಗಿಲ್ಲ – ***/ ಉತ್ತಮ – **** / ಅತ್ಯುತ್ತಮ – *****