I gave up the Telugu film Pushpa-2 for the film Tobi : Cinema is My ration, fashion, profession too

Raj Deepak Shetty Interview :”ಟೋಬಿ “ಗಾಗಿ ತೆಲುಗಿನ ಪುಷ್ಪ- 2 ಚಿತ್ರ ಕೈ ಬಿಟ್ಟೆ : ಸಿನಿಮಾ ರೇಷನ್, ಫ್ಯಾಶನ್, ಪ್ರೋಫೆಶನ್ ಕೂಡ - CineNewsKannada.com

Raj Deepak Shetty Interview :”ಟೋಬಿ “ಗಾಗಿ ತೆಲುಗಿನ ಪುಷ್ಪ- 2 ಚಿತ್ರ ಕೈ ಬಿಟ್ಟೆ : ಸಿನಿಮಾ ರೇಷನ್, ಫ್ಯಾಶನ್, ಪ್ರೋಫೆಶನ್ ಕೂಡ

ಕಳೆದ ವಾರ ಬಿಡುಗಡೆಯಾಗಿ ಬಾರಿ ಸದ್ದು ಮಾಡುತ್ತಿರುವ “ಟೋಬಿ” ಚಿತ್ರದಲ್ಲಿ ಆನಂದನ ಪಾತ್ರ ಮಾಡಿರುವ ಕರಾವಳಿ ಮತ್ತೊಂದು ಪ್ರತಿಭೆ ರಾಜ್ ದೀಪಕ್ ಶೆಟ್ಟಿ ಖಳ ನಟನ ಪಾತ್ರದಲ್ಲಿ ಮಿಂಚಿದ್ದಾರೆ. ಟೋಬಿ ಪಾತ್ರ ಮಾಡಿರುವ ರಾಜ್ ಬಿ ಶೆಟ್ಟಿ ಮೂಗನ ಪಾತ್ರದಲ್ಲಿ ಗಮನ ಸೆಳೆದರೆ ರಾಜ್ ದೀಪಕ್ ಶೆಟ್ಟಿ ತಮ್ಮ ಅಭಿನಯದಿಂದಲೇ ಪ್ರೇಕ್ಷಕರಿಗೆ ಇಷ್ಟವಾಗಿದ್ದಾರೆ.

Raj Deepak Shetty

“ಟೋಬಿ” ಚಿತ್ರಕ್ಕೆ ಸಿಗುತ್ತಿರುವ ಯಶಸ್ಸು, ಜೊತೆಗೆ ತಮ್ಮ ಪಾತ್ರಕ್ಕೆ ಜನರಿಂದ ಸಿಕ್ಕ ಪ್ರತಿಕ್ರಿಯೆಯನ್ನು ಎಂಜಾಯ್ ಮಾಡುತ್ತಿರುವ ರಾಜ್ ದೀಪಕ್ ಶೆಟ್ಟಿ ಅವರು, ಏಕತಾನತೆಯ ಪಾತ್ರ ಬೇಡ ಎನ್ನುವ ಕಾರಣಕ್ಕೆ ಎರಡು ವರ್ಷಗಳ ಕಾಲ ಬಂದ ಅನೇಕ ಚಿತ್ರಗಳನ್ನು ತಿರಸ್ಕರಿಸುತ್ತಾ ಬಂದಿದ್ದರಂತೆ. ಇದೀಗ “ಟೋಬಿ” ಮತ್ತೊಂದು ಬಗೆಯ ಖುಷಿಗೆ ಕಾರಣವಾಗಿದೆ.

ಅನಿರೀಕ್ಷಿತವಾಗಿ ಮಾತಿಗೆ ಸಿಕ್ಕ ರಾಜ್ ದೀಪಕ್ ಶೆಟ್ಟಿ ಅವರು ಟೋಬಿಯ ಯಶಸ್ಸು, ತೆಲುಗು, ತಮಿಳು ಚಿತ್ರಗಳಲ್ಲಿನ ಅನುಭವ ಮತ್ತು ಮಲೆಯಾಳಂ ಚಿತ್ರರಂಗದಿಂದ ಬಂದಿರುವ ಅವಕಾಶ ಹೀಗೆ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಂಡರು.

#RajDeepakShetty

• “ಟೋಬಿ” ಚಿತ್ರದ ಪಾತ್ರ ಸಿಕ್ಕ ಬಗೆ ಹೇಗೆ?

ಕರಾವಳಿ ಭಾಗದವನಾಗಿದ್ದರೂ ಶೆಟ್ಟರ ಗ್ಯಾಂಗ್‍ನಲ್ಲಿ ಸಿನಿಮಾ ಮಾಡಲು ಕಾಲ ಕೂಡಿ ಬಂದಿರಲಿಲ್ಲ. ನನ್ನ ಸ್ವಭಾವ ಹೇಗೆ ಅಂದರೆ ಅವಕಾಶ ಕೊಡಿ ಎಂದು ಯಾರ ಬಳಿಯೂ ಹೋಗಿ ಕೇಳುವ ಜಾಯಮಾನ ನನ್ನದಲ್ಲ. ಹಾಗಂತ ಅಹಂಕಾರವೂ ಅಲ್ಲ. ನನಗೆ ಸೂಕ್ತವಾಗುವ ಪಾತ್ರ ಸಿಕ್ಕರೆ ಅವರೇ ಕರೆದುಕೊಡುತ್ತಾರೆ. ಅದನ್ನು ಬಿಟ್ಟು ನನಗೆ ಪಾತ್ರ ಕೊಡಿ ಎಂದು ಕೇಳುವುದು, ಅದರಲ್ಲಿ ನನಗೆ ಪಾತ್ರ ಸಿಗದೆ ಇರುವುದು ಇವೆಲ್ಲಾ ಬೇಸರ ಬೇಡ ಎಂದು ಸುಮ್ಮನಿದ್ದೆ. ಒಮ್ಮೆ ರಾಜ್ ಬಿ ಶೆಟ್ಟಿ ಅವರ ಕಚೇರಿಯಿಂದ ಕರೆ ಬಂತು. ಆಫೀಸಿಗೆ ಹೋಗಿದ್ದೆ.

ರಾಜ್ ಬಿ ಶೆಟ್ಟಿ ಚಿತ್ರಗಳನ್ನು ನೋಡಿದ್ದರಿಂದ ನನಗೆ ಯಾವ ಪಾತ್ರ ಕೊಡ್ತಾರೆ ಎಂದು ಅಳುಕು ಮನಸ್ಸಿನಲ್ಲಿಯೇ ಅಂದುಕೊಂಡು ತೆರಳಿದ್ದೆ. ಅವರ ತಂಡ ಹೇಗೆ ಅಂದರೆ ಮಾತಿಗೆ ಕುಳಿತ ಐದೇ ನಿಮಿಷದಲ್ಲಿ ಎಲ್ಲರ ಮನಸ್ಸು ಗೆದ್ದು ಬಿಡ್ತಾರೆ, ನಿರ್ಮಾಪಕರಾದ ರವಿ ರೈ ಕಳಸ, ಬಾಲು ಅರವಣಕರ್ ಸೇರಿದಂತೆ ಇಡೀ ತಂಡ ಎಲ್ಲರ ಮನಗೆದ್ದು ಬಿಡುತ್ತದೆ. ಅಂತಹ ಆಕರ್ಷಣೆ ಅವರಲ್ಲಿದೆ. ಚಿತ್ರದಲ್ಲಿ ಆನಂದ ಮತ್ತು ಸಂತೋಷ ಎನ್ನುವ ಎರಡು ಪಾತ್ರಗಳನ್ನು ಮುಂದಿಟ್ಟು ಯಾವ ಪಾತ್ರವನ್ನಾದರೂ ಆಯ್ಕೆ ಮಾಡಿಕೊಳ್ಳಿ ಎಂದರು. ಎರಡೂ ಸಂತೋಷ ಕೊಡುವ ಪಾತ್ರವೇ. ಹೀಗಾಗಿ ಆನಂದ ನನ್ನು ಆಯ್ಕೆ ಮಾಡಿಕೊಂಡೆ.

#RajDeepakShetty

• ಆನಂದನ ಪಾತ್ರದ ಬಗ್ಗೆ ಹೇಳುವುದಾದರೆ ?

ಆನಂದನ ಪಾತ್ರ ಆರಂಭದಲ್ಲಿ ಪುಕ್ಕಲು ಸ್ವಭಾವದನ, ಆದರೆ ಅವನ ವರ್ತನೆ, ಸ್ವಭಾವ ಬದಲಾಗಿ ಬಿಡುತ್ತದೆ. ಹೀಗಾಗಿ ಪಾತ್ರವನ್ನು ಆಯ್ಕೆ ಮಾಡಿಕೊಂಡೆ, ಜೊತೆಗೆ ಪಾತ್ರಕ್ಕಾಗಿ ಒಗ್ಗಿಕೊಳ್ಳಲು ಒಂದು ವಾರಗಳ ಕಾಲ ವರ್ಕ್‍ಶಾಪ್‍ನಲ್ಲಿ ಭಾಗಿಯಾಗಿದ್ದೆ. ಚಿತ್ರ ಬಿಡುಗಡೆಯಾದ ಮೇಲೆ ಸಿಕ್ಕ ಪ್ರತಿಕಿಯೆಗೆ ಖುಷಿಯಾಗಿದ್ದೇನೆ. ಆವೇಶ, ಆಕ್ರೋಶ ಇದ್ದರೂ ಅದನ್ನು ತೋರಿಸಿಕೊಳ್ಳದೆ ಸೇಡು ತೀರಿಸಿಕೊಳ್ಳುವ ಪಾತ್ರ. ಆನಂದನ ಪಾತ್ರ ಮಾಹದಾನಂದ ನೀಡಿದೆ. ಆನಂದನ ಪಾತ್ರ ನೋಡಿದ ಮೇಲೆ ಇನ್ನಷ್ಟು ಸುಧಾರಿಸಬಹುದು ಎಂದು ನನಗೆ ಅನ್ನಿಸಿದುಂಟು. ಆದರೂ ಶಕ್ತಿ ಮೀರಿ ನಟಿಸಿದ್ದೇನೆ. ಜನ ಇಷ್ಟಪಟ್ಟಿದ್ದಾರೆ. ಇದು ಖುಷಿಯ ಸಂಗತಿ.

• ಟೋಬಿ ಚಿತ್ರಕ್ಕಾಗಿ ತೆಲುಗಿನ “ಪುಷ್ಪ-2” ಚಿತ್ರ ಬಿಟ್ಟೀದ್ದೀರಂತೆ ಹೌದಾ?

ಹೌದು. ಟೋಬಿ ಚಿತ್ರದ ಪಾತ್ರವನ್ನು ಇಷ್ಟಪಟ್ಟು ಒಪ್ಪಿಕೊಂಡಿದ್ದರಿಂದ ಅಲ್ಲು ಅರ್ಜುನ್ ನಟನೆಯ ತೆಲುಗಿನ ಪುಷ್ಪ-2 ಚಿತ್ರದ ಅವಕಾಶವನ್ನು ಬಿಟ್ಟುಕೊಟ್ಟೆ. ನಾನು ಪುಷ್ಪ ಚಿತ್ರದಲ್ಲಿ ನಟಿಸಿದ್ದರೆ ಟೋಬಿ ಚಿತ್ರದ ಚಿತ್ರೀಕರಣ ಮುಂದೂಡುವಂತಾಗಿತ್ತು. ವಿನಾಕಾರಣ ಚಿತ್ರೀಕರಣ ನನ್ನಿಂದ ಮುಂದೂಡುವುದು ಇಷ್ಟವಿರಲಿಲ್ಲ. ಹೀಗಾಗಿ ಪುಷ್ಪ-2 ಚಿತ್ರದ ಡೇಟ್ಸ್ ಸಮಸ್ಯೆಯಿಂದ ಬಿಟ್ಟುಕೊಟ್ಟೆ ಎನ್ನುವ ಮಾಹಿತಿ ಹಂಚಿಕೊಂಡರು.

#RajDeepakShetty

• ಎರಡು ವರ್ಷಗಳ ಕಾಲ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ ಯಾಕೆ?

ತಂದೆಯ ಪಾತ್ರ ಸೇರಿದಂತೆ ಒಂದೇ ರೀತಿಯ ಪಾತ್ರಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಯಾವುದೇ ಪಾತ್ರವನ್ನು ಒಪ್ಪಿಕೊಳ್ಳಲಿಲ್ಲ. ಚಿತ್ರರಂಗದಲ್ಲಿ ಹೇಗೆಂದರೆ ಒಂದು ಪಾತ್ರಕ್ಕೆ ಸೂಟ್ ಆಗಿ ಬಿಟ್ಟರೆ ಅದೇ ಪಾತ್ರಕ್ಕೆ ಫಿಕ್ಸ್ ಮಾಡಿಬಿಡ್ತಾರೆ. ಅದರಿಂದ ಹೊರಬರಬೇಕು ಎನ್ನುವ ಕಾರಣಕ್ಕೆ ಕಳೆದ ಎರಡು ವರ್ಷಗಳ ಕಾಲ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಟೋಬಿ ಚಿತ್ರದಲ್ಲಿ ವಿಭಿನ್ನ ಕಥೆ ಪಾತ್ರ ಸಿಕ್ಕಿದರಿಂದ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ.

• ನಿಮ್ಮ ದೃಷ್ಠಿಯಲ್ಲಿ ಸಿನಿಮಾ ಎಂದರೆ ಏನು?

ರೇಷನ್ ಮತ್ತು ಫ್ಯಾಶನ್. ಕೆಲವು ಸಿನಿಮಾಗಳನ್ನು ನಾವು ರೇಷನ್‍ಗಾಗಿ ಮಾಡುತ್ತೇವೆ ಕೆಲವು ಸಿನಿಮಾಗಳು ನಮ್ಮ ಫ್ಯಾಶನ್ ಗಾಗಿ ಮಾಡುತ್ತೇವೆ. ದುಡ್ಡು ಮತ್ತು ಫ್ಯಾಶನ್ ಎರಡೂ ಮುಖ್ಯವೇ. ಸಿನಿಮಾ ನನ್ನ ಪ್ರೊಫೆಷಶನ್ ಕೂಡ. ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸುವುದು, ನಿರ್ದೇಶಕರು ಹೇಳಿದ ರೀತಿ ನಟಿಸುವುದು ನನ್ನ ಉದ್ದೇಶ. ಆ ಕೆಲಸವನ್ನು ನಾನು ಮಾಡುತ್ತೇನೆ. ನಾನು ನಿರ್ದೇಶಕರ ನಟ.

• ನಿಮ್ಮ ಸಿನಿಮಾ ಜರ್ನಿ ಬಗ್ಗೆ ಹೇಳುವುದಾದರೆ?

ವಿನು ಬಳಂಜ ನಿರ್ದೇಶನದ “ಲವಲವಿಕೆ” ಧಾರಾವಾಹಿಯಲ್ಲಿ ನಟಿಸಿದ್ದೆ. ಅದರಲ್ಲಿ ತಂದೆಯ ಪಾತ್ರ. ಧಾರಾವಾಹಿಯೂ ಯಶಸ್ಸು ಕಂಡಿತು. ಜೊತೆಗೆ ಪಾತ್ರವೂ ಕೂಡ. ಹೀಗಾಗಿ ಬಣ್ಣದ ಬದುಕಿನ ಯಾನ ಆರಂಭವಾಯಿತು. ಶಿವಧ್ವಜ್ ನಿರ್ದೇಶನದ “ನೀನೇ ನೀನೇ” ಚಿತ್ರದ ಮೂಲಕ ಸಿನಿಮಾರಂಗದಲ್ಲಿ ನಟನೆ ಆರಂಭಿಸಿದೆ. ಆ ಬಳಿಕ ತರುಣ್ ಸುಧೀರ್, ನಂದ ಕಿಶೋರ್ ಅವರ ಜೊತೆಗೆ ಶ್ರೀಕಂಠ, ಭರ್ಜರಿ, ಟೈಗರ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಇಲ್ಲಿಯ ತನಕ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಎಲ್ಲ ಪಾತ್ರವನ್ನು ಇಷ್ಟಪಟ್ಟು ಮಾಡಿದ್ದೇನೆ.

• ಪರಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದೀರಾ ಅದರ ಬಗ್ಗೆ ಮಾಹಿತಿ ನೀಡುವುದಾದರೆ?

ಈಗಾಗಲೇ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದೇನೆ. ಅಲ್ಲಿಯೂ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಮಲೆಯಾಳಂ ಭಾಷೆಯಿಂದಲೂ ಚಿತ್ರಕ್ಕೆ ಅವಕಾಶ ಬಂದಿದೆ ಅದರ ಕುರಿತು ಮಾತುಕತೆ ನಡೆಯಿತ್ತಿದೆ. ಒಳ್ಳೆಯ ಪಾತ್ರಗಳ ಮೂಲಕ ಜನರನ್ನು ರಂಜಿಸಬೇಕು ಎನ್ನವುದು ನನ್ನ ಉದ್ದೇಶ. ಆ ಕೆಲಸ ಮಾಡುತ್ತಿದ್ದೇನೆ.

• ಬೆಂಗಳೂರಿನಲ್ಲಿ ಇದ್ದೀರಾ ಅಥವಾ ಮಂಗಳೂರಿನಲ್ಲಿ ನೆಲೆಸಿದ್ದೀರಾ.

ಕೋವಿಡ್ ಸೋಂಕು ಕಾಣಿಸಿಕೊಳ್ಳುವದಕ್ಕೂ ಮುನ್ನ ಬೆಂಗಳೂರಿನಲ್ಲಿಯೇ ಇದ್ದೆ. ಕೋವಿಡ್ ಸೋಂಕು ಕಾಣಿಸಿಕೊಂಡ ನಂತರ. ಅನಿಶ್ಚಿತತೆ ಎಷ್ಟು ದಿನವೋ ಎನ್ನುವ ಕಾರಣದಿಂದ ಮಂಗಳೂರಿಗೆ ಹೋದೆ. ಈ ನಡುವೆ ಮದುವೆ ಆಯಿತು. ನನ್ನ ಹೆಂಡತಿ ಅಮ್ಮನ ಆರೋಗ್ಯವೂ ಸರಿ ಇರಲಿಲ್ಲ. ಈ ಕಾರಣಕ್ಕಾಗಿಯೇ ಮಂಗಳೂರು ಬಿಟ್ಟು ಬೇರೆ ಯಾವುದೇ ಜಾಗದಲ್ಲಿ ಸಿನಿಮಾ ಇದ್ದರೂ ಹೋಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕಾರಣಕ್ಕೆ ಅನೇಕ ಚಿತ್ರಗಳನ್ನು ಬಿಡುವಂತಾಯಿತು.
ಟೋಬಿ ಚಿತ್ರವನ್ನು ಮಂಗಳೂರು ಸುತ್ತ ಮುತ್ತವೇ ಚಿತ್ರೀಕರಣ ಮಾಡಿದ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಳಕ್ಕೆ ಹೋಗಿ ಬರಲು ಯಾವುದೇ ಸಮಸ್ಯೆ ಆಗಲಿಲ್ಲ, ಹೀಗಾಗಿ ಟೋಬಿ ಒಪ್ಪಿಕೊಳ್ಳಲು ಇದೂ ಕೂಡ ಕಾರಣ ಎನ್ನುವ ಮಾಹಿತಿ ಹಂಚಿಕೊಂಡರು.


• ಸಿನಿಮಾಕ್ಕೆ ಬರುವ ಮುನ್ನ ತರಬೇತಿ ಪಡೆದಿದ್ದೀರಾ.

ಇಲ್ಲ, ಯಾವುದೇ ತರಬೇತಿಯನ್ನೂ ಪಡೆದಿಲ್ಲ. ಸಾಪ್ಟ್‍ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದವನು ನಾನು ಬಣ್ಣದ ಜಗತ್ತಿಗೆ ಬರುವಂತಾಯಿತು. ಆರಂಭದಲ್ಲಿ ಕಾದಂಬರಿ ಧಾರಾವಾಹಿಯಲ್ಲಿ ನಟಿಸುವ ವಿಷಯವನ್ನು ತಾಯಿಗೆ ಹೇಳಿರಲಿಲ್ಲ. ಹೇಳಿದರ ನಟಿಸಲು ಎಲ್ಲಿ ಬಿಡುವುದಿಲ್ಲವೋ ಎನ್ನುವ ಭಯದಿಂದ ಅವರಿಗೆ ಮಾಹಿತಿ ನೀಡಿರಲಿಲ್ಲ, ಧಾರಾವಾಹಿ ನೋಡಿದ ನಂತರ ಅಮ್ಮ ಏನೂ ಹೇಳಲಿಲ್ಲ, ಹೀಗಾಗಿ ನಟಿಸಲು ಮುಂದಾದೆ. ಈ ನಡುವೆ ದುಬೈಗೆ ಕೆಲಸಕ್ಕೆ ಹೋಗಿದ್ದೆ.ಅಲ್ಲಿ ನಾಲ್ಕೈದು ವರ್ಷ ಅಲ್ಲಿದ್ದೆ.ಮತ್ತೆ ಬಣ್ಣದ ಸೆಳೆತ ತನ್ನತ್ತ ಆಕರ್ಷಿಸಿತು. ಕಾಲೇಜಿನ ನಟನೆಯ ಬಗ್ಗೆ ಆಸಕ್ತಿ ಇತ್ತು. ನಾಟಕದಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ಅದೂ ಕೂಡ ನಟನೆಯ ಕಡೆ ಒಲವು ಬೆಳಸಿಕೊಳ್ಳಲು ಕಾರಣ.

• ಕಲಾವಿದನಾದ ಬಗೆ ಹೇಗೆ?

ಚಿಕ್ಕಂದಿನಿಂದಲೇ ಸಿನಿಮಾ ನೋಡುವ ಗೀಳು ಹೆಚ್ಚಿತ್ತು. ನಮ್ಮ ಕುಟುಂಬದಲ್ಲಿ ಮಹಿಳೆಯರೇ ಹೆಚ್ಚು ಮುಂಬೈ ಸೇರಿದಂತೆ ವಿವಿಧೆಡೆ ಇಂದ ಬಂದ ಕುಟುಂಬದ ಸದಸ್ಯರು ಚಿತ್ರಕ್ಕೆ ಕರೆದುಕೊಂಡು ಹೋಗುತ್ತಿದ್ದರು.ಅದರಲ್ಲಿಯೂ ಡಾ. ವಿಷ್ಣುವರ್ಧನ್, ರವಿಚಂದ್ರನ್ ಅವರ ಸಿನಿಮಾಗಳೆಂದರೆ ಹೆಚ್ಚು ಇಷ್ಟ. ಅವರನ್ನು ನೋಡಿಕೊಂಡು ನಾನು ನಾಯಕನಾಗಬೇಕು ಅನ್ನಿಸಿತು. ಅದರಲ್ಲಿಯೂ ರವಿಚಂದ್ರನ್ ಅವರ ಪ್ರೇಮಲೋಕ ಚಿತ್ರ ನನಗೆ ಹೆಚ್ಚು ಪ್ರೇರಣೆ ಆಯಿತು.

#RajDeepakShetty

• ಪ್ರೇಮಲೋಕ ಚಿತ್ರ ಪ್ರೇರಣೆ ಅಂದ್ರಿ ಯಾವ ರೀತಿ?

ಪ್ರೇಮಲೋಕ ಚಿತ್ರದಲ್ಲಿ ರವಿಚಂದ್ರನ್ ಅವರು ಬೈಕ್ ಓಡುಸುವ ರೀತಿ, ಅದನ್ನು ತಿರುಗಿಸುವ ರೀತಿಗೆ ಫಿದಾ ಆಗಿದ್ದೆ. ನಾನು ಅದೇ ರೀತಿ ಬೈಕ್ ಓಡಿಸಬೇಕು ಎನ್ನುವ ಆಸೆ. ಅದಕ್ಕೆಂದೆ ಮನೆಯಲ್ಲಿ ಸೈಕಲ್ ತೆಗೆದುಕೊಂಡು ಊಟ, ತಿಂಡಿ ಎಲ್ಲವನ್ನು ಅದರ ಮೇಲೆ ಮಾಡುತ್ತಿದ್ದೆ. ಹೀಗೆ ಸಿನಿಮಾಗೆ ಬರಲು ರವಿಚಂದ್ರನ್ ಅವರೂ ಕಾರಣ ಎಂದರೆ ತಪ್ಪಲ್ಲ. ನಾವು ಏನೇ ಆಗಬೇಕು ಅಂದರೆ ಅದು ಹಣೆಬರೆದಲ್ಲಿ ಬರೆದಿರಬೇಕು ದೈವಾನುಗ್ರಹ ಜೊತೆಗೆ ನಮ್ಮ ಪ್ರಯತ್ನವೂ ಇರಬೇಕು ಎಂದರು.

• ಟೋಬಿ ಯಶಸ್ಸಿನ ನಂತರ ಬೇರೆ ಅವಕಾಶಗಳು ಕನ್ನಡದಲ್ಲಿ ಬಂದಿದೆಯಾ?

ಕಳೆದ ಎರಡು ಮೂರು ದಿನಗಳಿಂದ ಟೋಬಿ ನೋಡಿದ ಮಂದಿ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅವಕಾಶಗಳೂ ಬರುತ್ತಿವೆ. ಸದ್ಯಕ್ಕೆ ಚಿತ್ರದ ಬಗ್ಗೆ ಪ್ರೇಕ್ಷಕರು ವ್ಯಕ್ತಪಡಿಸುವ ಭಾವನೆ ಕಂಡು ಖುಷಿಯಾಗಿದ್ದೇನೆ. ಆನಂತರ ಒಪ್ಪಿಕೊಳ್ಳುತ್ತೇನೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin