Interview | ಶಿವಣ್ಣನ ಮಾತು ಕೇಳಿ ಶಾಕ್, ಸಪ್ರೈಸ್ ಆಯ್ತು: ಆ ರಾತ್ರಿ ನಿದ್ದೆನೇ ಬರಲಿಲ್ಲ; ನಿರ್ದೇಶಕ ಸಂದೀಪ್ ಸುಂಕದ
“ಶಾಖಾಹಾರಿ ” ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ತಲೆಮಾರಿನ ನಿರ್ದೇಶಕರಲ್ಲಿ ಹೊಸ ಭರವಸೆ ಸೃಷ್ಟಿಸಿದವರು ಪ್ರತಿಭಾನ್ವಿತ ನಿರ್ದೇಶಕ ಸಂದೀಪ್ ಸುಂಕದ. ತಮ್ಮ ಎರಡನೇ ಚಿತ್ರವನ್ನು ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ” ಗೀತಾ ಪಿಕ್ಚರ್ಸ್ ” ಗೆ ನಿರ್ದೇಶಿಸುವ ಬಹುದೊಡ್ಡ ಅವಕಾಶ ಪಡೆದಿದ್ದಾರೆ.
ಹೊಸ ಚಿತ್ರವನ್ನು ಸೋದರಳಿಯ ಧೀರೇನ್ ರಾಮ್ ಕುಮಾರ್‍ಗೆ ಹಿರಿಯ ನಟ ಶಿವರಾಜ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಗೀತಾ ಪಿಕ್ಚರ್ಸ್ ನಿಂದ ಸಿಕ್ಕ ಅವಕಾಶ ಹಾಗು ಸಿನಿಮಾಯಾನದ ಕುರಿತು ನಿರ್ದೇಶಕ “ಸಂದೀಪ್ ಸುಂಕದ “ ಮಾಹಿತಿ ಹಂಚಿಕೊಂಡಿದ್ದಾರೆ.
- ಗೀತಾ ಪಿಕ್ಚರ್ಸ್ ನಿಂದ ಸಿನಿಮಾ ಅವಕಾಶ ಸಿಕ್ಕಿದ್ದು ಹೇಗೆ..?
“ಶಾಖಾಹಾರಿ” ಸಿನಿಮಾ ನೋಡಿದ್ದ ನಟ ಧೀರೇನ್, ಹಿರಿಯ ನಟ ರಂಗಾಯಣ ರಘು ಅವರಿಂದ ತಮ್ಮ ನಂಬರ್ ಪಡೆದು ಕಾಲ್ ಮಾಡಿದ್ರು. ಹೀಗೆ ಸಿನಿಮಾ ಬಗ್ಗೆ ಮಾತನಾಡುವಾಗ ಅವರಿಗೆ ಕಥೆ ಹೇಳಿದ್ದೆ. ಕಥೆ ಕೇಳಿ ಥ್ರಿಲ್ ಆಗಿದ್ದ ಧಿರೇನ್, ತಮ್ಮ ಆಪ್ತರ ಬಳಿ ತಾವು ಹೇಳಿದ್ದ ಕಥೆ ಹೇಳಿದ್ದರು. ಆ ನಂತರ ಶಿವಣ್ಣ ಅವರಿಗೆ ಕಥೆ ಹೇಳೋಣ ಎಂದು ಕರೆದುಕೊಂಡು ಹೋಗಿದ್ದರು. ಕಥೆ ಕೇಳಿ ಶಿವಣ್ಣ ತುಂಬಾ ಇಂಪ್ರೆಸ್ ಆಗಿದ್ದರಂತೆ. “ಭೈರತಿ ರಣಗಲ್ ” ಚಿತ್ರ ಬಿಡುಗಡೆಯ ಬ್ಯುಸಿಯಲ್ಲಿದ್ದರು. ಹೀಗಾಗಿ ಆಗ. ನಮಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸಿನಿಮಾ ಬಿಡುಗಡೆ ಬಳಿಕ ಒಂದು ರಾತ್ರಿ ಕಾಲ್ ಮಾಡಿ ಗೀತಾ ಪಿಕ್ಚರ್ಸ್‍ನಿಂದ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ಚೆನ್ನಾಗಿ ಸಿನಿಮಾ ಮಾಡಿ ಅಂದ್ರು. ಶಿವಣ್ಣನ ಮಾತು ಕೇಳಿ ಆರಾತ್ರಿ ನಿದ್ದೆ ಬರಲಿಲ್ಲ. ಒಂದು ಕಡೆ ಶಾಕ್, ಸಪ್ರೈಸ್, ಖುಷಿ ಜೊತೆ ಜೊತೆಯಲ್ಲಿಯೇ ಆಯ್ತು.
- ಪ್ರತಿಷ್ಠಿತ ನಿರ್ಮಾಣ ಸಂಸ್ಥೆ “ಗೀತಾ ಪಿಕ್ಚರ್ಸ್” ನಲ್ಲಿ ಕೆಲಸ ಮಾಡುವುದು ದೊಡ್ಡ ಜವಾಬ್ದಾರಿನಾ ಅಥವಾ ಅದೃಷ್ಟನಾ..
ನನ್ನ ಎರಡನೇ ನಿರ್ದೇಶನದ ಚಿತ್ರವನ್ನು ಗೀತಾ ಪಿಕ್ಚರ್ಸ್ ಸಂಸ್ಥೆಗೆ ನಿರ್ದೇಶನ ಮಾಡುವುದು ಖುಷಿ ಇದೆ.. ಕಥೆ ಒಪ್ಪಿ ಬೆನ್ನೆಲುಬಾಗಿ ನಿಲ್ಲುತ್ತೇವೆ ಮುಂದುವರಿಯಿರಿ ಎಂದು ಶಿವಣ್ಣ ಹೇಳಿದ್ದು ದೊಡ್ಡ ಜವಾಬ್ದಾರಿ. ಸಂಸ್ಥೆ ತಮ್ಮ ಮೇಲಿರುವ ನಂಬಿಕೆ ಉಳಿಸಿಕೊಳ್ಳುವ ಕಡೆಗೆ ಒತ್ತು ನೀಡುವೆ.
- ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆಯಾ.ಕಥೆ ಯಾವ ಹಂತದಲ್ಲಿದೆ
ಎರಡು ಮೂರು ವರ್ಷನ್‍ನಲ್ಲಿ ಕಥೆ ಮಾಡುತ್ತಿದ್ದೇವೆ. ಎರಡನೇ ವರ್ಷನ್ ಪೂರ್ಣಗೊಂಡಿದೆ. ಮೂರನೇ ವರ್ಷನ್ ಕಥೆ ಅಂತಿಮವಾದ ನಂತರ ಕಥೆಗೆ ಪೂರಕವಾದ ಶೀರ್ಷಿಕೆ ಇಡುತ್ತೇವೆ. ಸದ್ಯ ಮೂರ್ನಾಲ್ಕು ಶೀರ್ಷಿಕೆ ಮನಸ್ಸಿನಲ್ಲಿದೆ. ಕಥೆ ಅಂತಿಮ ರೂಪಕ್ಕೆ ಬಂದ ನಂತರವೇ ಟೈಟಲ್ ಪಕ್ಕಾ ಮಾಡಲಾಗುವುದು.
- ಯಾವ ಜಾನರ್ ಸಿನಿಮಾ. ಯಾವಾಗಿನಿಂದ ಚಿತ್ರೀಕರಣ..
ಕ್ರೈಮ್ ,ಥ್ರಿಲ್ಲರ್ ಜಾನರ್,ಅಡ್ವೆಂಚರ್ ಸಿನಿಮಾ. ಸ್ಕ್ರಿಪ್ಟ್ ಇನ್ನೂ ಅಂತಿಮವಾಗಬೇಕಾಗಿದೆ. ಪ್ರೀಪೆÇ್ರಡಕ್ಷನ್ ಕೆಲಸ ನಡೆಯುತ್ತಿವೆ. ಹೀಗಾಗಿ ದೇಶದ ನಾಲ್ಕು ಕಡೆ ಚಿತ್ರೀಕರಣ ಮಾಡಬೇಕು ಅಂದಿಕೊಂಡಿದ್ದೇವೆ. ಕಥೆ ಅಂತಿಮವಾದ ನಂತರವೇ ಚಿತ್ರೀಕರಣ ಸ್ಥಳದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಚಿತ್ರೀಕರಣ ಆರಂಭಕ್ಕೆ ಕನಿಷ್ಠ ಮೂರರಿಂದ ನಾಲ್ಕು ತಿಂಗಳು ಬೇಕಾಗಬಹುದು.
- ಮಹೂರ್ತದ ದಿನವೇ ಚಿತ್ರ ಬಿಡುಗಡೆಯ ದಿನಾಂಕ ಪ್ರಕಟಿಸುವ ಟ್ರೆಂಡ್ ಆರಂಭವಾಗುತ್ತದೆ. ನಿಮ್ಮ ಚಿತ್ರ ಯಾವಾಗ ಬಿಡುಗಡೆ
ಮೊದಲೇ ಹೇಳಿದ ಹಾಗೆ ಕಥೆ ಅಂತಿಮವಾಗಬೇಕು. ಮುಹೂರ್ತದ ದಿನ ಅಥವಾ ಚಿತ್ರೀಕರಣದ ಸಮಯದಲ್ಲಿ ಚಿತ್ರ ಯಾವಾಗ ಬಿಡುಗಡೆ ಮಾಡಬೇಕು ಎನ್ನುವುದನ್ನು ನಿರ್ಮಾಣ ಸಂಸ್ಥೆ ನಿರ್ಧರಿಸುತ್ತೆ. ಸದ್ಯ ಕಥೆ ಅಂತಿಮ ಮಾಡಿಕೊಂಡು ಟೈಟಲ್ ಬಿಡುಗಡೆ ಕಡೆಗೆ ಗಮನ ಹರಿಸಿದ್ದೇವೆ.
- ನಟ ಧೀರೇನ್ ಸೇರಿದಂತೆ ಚಿತ್ರದಲ್ಲಿ ಯಾರೆಲ್ಲಾ ಕಲಾವಿದರು ಇದ್ದಾರೆ. ಕಲಾವಿದರ ಆಯ್ಕೆ ಪೂರ್ಣಗೊಂಡಿದೆಯಾ?
ಸದ್ಯ ನಾಯಕ ನಟನಾಗಿ ಧೀರೇನ್ ಅವರನ್ನು ಆಯ್ಕೆ ಮಾಡಲಾಗಿದೆ. ಕಥೆಗೆ ಪೂರಕವಾಗಿ ಕಲಾವಿದರನ್ನು ಆಯ್ಕೆ ಮಾಡಲಾಗುವುದು. ಒಂದಷ್ಟು ಮಂದಿ ಕಲಾವಿದರ ಹೆಸರು ಪರಿಶೀಲನೆಯಲ್ಲಿದೆ. ಸ್ಕ್ರಿಪ್ಟ್ Àರ್ಕ್ ಪೂರ್ಣಗೊಂಡ ನಂತರ ಅದಕ್ಕೆ ತಕ್ಕಂತೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಸಹಾಯಕ, ಸಹ ನಿರ್ದೇಶಕನಾಗಿದ್ದ ದಿನದಿಂದಲೇ ಕಲಾವಿದರ ಆಯ್ಕೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತೇನೆ. ಈ ಚಿತ್ರದಲ್ಲಿಯೂ ಕೂಡ.
• ಶಾಖಾಹಾರಿ ಸಿನಿಮಾ ಶಿವಣ್ಣ ನೋಡಿದ್ರಾ..
ಶಾಖಾಹಾರಿ ಸಿನಿಮಾವನ್ನು ಶಿವಣ್ಣ ನೋಡಿರಬೇಕು.. ಗೀತಕ್ಕ ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಕಥೆ ಕೇಳಿ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದೀರಿ ಇನ್ನಷ್ಟು ಚೆನ್ನಾಗಿ ಮಾಡಿ ಎಂದು ಗ್ರೀನ್‍ಸಿಗ್ನಲ್ ನೀಡಿದರು. ಇದೀಗ ಉತ್ತಮ ಚಿತ್ರ ಮಾಡುವ ಕಡೆಗೆ ಗಮನ ಹರಿಸಲಾಗಿದೆ.
• ಶಾಖಾಹಾರಿ ಸಿನಿಮಾಗೆ ಇಂಡಸ್ಟ್ರಿ ಕಡೆಯಿಂದ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು..
ಚಿತ್ರ ಬಿಡುಗಡೆಯಾದ ಸಮಯದಲ್ಲಿ ವಾರಕ್ಕೆ 8ರಿಂದ 10 ಕನ್ನಡ ಸಿನಿಮಾ ಬಿಡುಗಡೆಯಾಗುತ್ತಿದ್ದವು. ಬೆಂಗಳೂರು ಸೇರಿದಂತೆ ಬಿಡುಗಡೆಯಾದ ಎಲ್ಲಾ ಕಡೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. ವಾರಕ್ಕೆ 10 ಕ್ಕೂ ಹೆಚ್ಚು ಚಿತ್ರ ಬಿಡುಗಡೆಯಾಗುತ್ತಿದ್ದರಿಂದ ಹೆಚ್ಚಿನ ಶೋ ಹಾಕಲು ಸಾದ್ಯವಾಗಲಲ್ಲ. ಆ ಕೊರಗು ಕೂಡ ಇದೆ. ಆದರೆ ಚಿತ್ರ ಯಾವಾಗ ಒಟಿಟಿಗೆ ಬಂತೋ ರಡು ಮೂರು ವಾರದಲ್ಲಿ ಜನರಿಂದ 5 ಮಿಲಿಯನ್‍ಗೂ ಹೆಚ್ಚು ಮಂದಿ ವೀಕ್ಷಿಸಿದರು. ಇದರಿಂದ ಒಂದಷ್ಟು ಹೆಮ್ಮೆ ಮತ್ತು ಖುಷಿ ಇದೆ.
- ಶಾಖಾಹಾರಿ ಬಳಿಕ ನಿಮಗೆ ಸಿಕ್ಕ ಪ್ರತಿಕ್ರಿಯೆ ಹೇಗಿದೆ.
ಮೊದಲ ಚಿತ್ರದ ಬಳಿಕ ನಿರ್ಮಾಪಕರ ಹುಡುಕಾಟದ ಸಮಯದಲ್ಲಿ ನಿರ್ಮಾಪಕರಿಗೆ ಪರಿಚಯಿಸಿಕೊಳ್ಳಲು ” ಶಾಖಾಹಾರಿ” ಒಂದು ರೀತಿ “ವಿಸಿಟಿಂಗ್ ಕಾರ್ಡ್” ರೀತಿ ಇದೆ. ನಾಲ್ಕೈದು ಕಥೆ ಮಾಡಿಕೊಂಡಿದ್ದೇನೆ. ನಿರ್ಮಾಪಕರ ಹುಡುಕಾಟದಲ್ಲಿ ಶಾಖಾಹಾರಿ ಉಪಯೋಗಕ್ಕೆ ಬಂದಿದೆ. ಅದರಿಂದಲೇ ಗೀತಾ ಪಿಕ್ಚಸ್ ನಿಂದ ಸಿನಿಮಾ ನಿರ್ದೇಶನ ಮಾಡುವ ಅವಕಾಶ ದೊರೆತಿದೆ.
• ನಿಮ್ಮ ಹಿನ್ನಲೆ ಏನು. ಎಲ್ಲಿಯವರು ನೀವು
ಮೂಲ ಶಿವಮೊಗ್ಗ, ಎಲೆಕ್ಟ್ರಾನಿಕ್ ವಿಭಾಗದಲ್ಲಿ ಇಂಜಿನಿಯರ್ ಪದವಿ ಪಡೆದಿದ್ದೇನೆ. ಕಾಲೇಜು ದಿನಗಳಿಂದಲೂ ಸಿನಿಮಾ, ನಾಟಕದ ಅಭಿರುಚಿ ಇತ್ತು. ಎರಡು ನಾಟಕ ನಿರ್ದೇಶನ ಮಾಡಿದ್ದೇನೆ ಜೊತೆಗೆ ನಟಿಸಿದ್ದೇನೆ ಕೂಡ. ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಬಳಿಕ ಕಂಪನಿಯೊಂದರಲ್ಲಿ ನಾಲ್ಕು ವರ್ಷ ಅಟೋಮೇಷನ್ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಕೆಲಸದಲ್ಲಿ ಇದ್ದ ಸಮಯದಲ್ಲಿ ವಿಶ್ವ ಸಿನಿಮಾ ನೋಡುತ್ತಿದ್ದೆ. ಆ ಸಿನಿಮಾ ಈ ಸಿನಿಮಾ ಎನ್ನುವ ಯಾವುದೇ ತಂಟೆ ತಕಾರು ಇರಲಿಲ್ಲ. ಅವುಗಳ ಬಗ್ಗೆ ಅವಲೋಕನ ಮಾಡುತ್ತಿದ್ದೆ. ಅಂದ್ರೆ ಆಸೆ ಇತ್ತು ಹಾಗಂತ ಹುಚ್ಚು ಇರಲಿಲ್ಲ ಕೆಲಸ ಮಾಡುತ್ತಲೇ .ಕಥೆ ,ಸಂಭಾಷಣೆ ಬರೆದು ಮಾಡಿದ್ದ ಸಿನಿಮಾ “ಕಾಗುಣಿತ”
ಶಿವಮೊಗ್ಗದಲ್ಲಿ ಆಪ್ತರಿಗಾಗಿ ” ಕಾಗುಣಿತ “ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.. 100 ನಿಮಿಷದ ಚಿತ್ರ ಹತ್ತಾರು ಶೋ ಕಂಡು ಪ್ರಶಂಸೆಯ ಸುರಿಮಳೆಯ ವ್ಯಕ್ತವಾಗಿತ್ತು ಆ ನಂತರ ನಾಲ್ಕೈದು ಕಿರುಚಿತ್ರಗಳಲ್ಲಿ ಕೆಲಸ ಮಾಡಿದ ಬಳಿಕ ಸೀಜರ್, ಮಹಿರಾ ಚಿತ್ರಗಳಿಗೆ ಸಹ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವೂ ಇದೆ.. ಇದರ ಜೊತೆ 2- 3 ಸಿನಿಮಾಗಳಿಗೆ ಬರವಣಿಗೆಯಲ್ಲಿಯೂ ಕೈ ಜೋಡಿಸಿದ್ದೆ. ಬೆಂಗಳೂರಿನ ವಿಜಯ ನಗರದಲ್ಲಿ ” ಹೊಟ್ಟೆ ಪಾಡು ಕಿಚನ್ ” ಮೂಲಕ ಹೋಟೆಲ್ ಉದ್ಯಮದಲ್ಲಿಯೂ ತೊಡಗಿಸಿದ್ದೇನೆ ಎಂದರು ಸಂದೀಪ್ .