ವಿಭಿನ್ನ ಅವತಾರದಲ್ಲಿ ರಾಜ್ ಬಿ ಶೆಟ್ಟಿ: ರಿವೇಂಜ್ ಡ್ರಾಮ “ಟೋಬಿ” ಬಿಡುಗಡೆಗೆ ಸಜ್ಜು

ಕರಾವಳಿ ಭಾಗದ ಅಪರೂಪದ ಕಥೆಯನ್ನು ಒಳಗೊಂಡಿರುವ “ ಟೋಬಿ” ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿಯೂ ಕನ್ನಡದಲ್ಲಿಯೇ “ಟೋಬಿ” ಇದೇ ತಿಂಗಳ 25 ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.

“ಗರುಡ ಗಮನ ವೃಷಭ ವಾಹನ” ಚಿತ್ರಕ್ಕಿಂತ ವಿಭಿನ್ನ ಅವತಾರದಲ್ಲಿ ನಟ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದು ಅಭಿಮಾನಿಗಳನ್ನು ತುದಿಗಾಲ ಮೇಲ ನಿಲ್ಲುವಂತೆ ಟೋಬಿ ಮಾಡಿದೆ. ಇದೇ ಕಾರಣಕ್ಕೆ ಕನ್ನಡ ಭಾಷೆಯಲ್ಲಿಯೇ ಮೊದಲ ಚಿತ್ರವನ್ನು ದೇಶಾದ್ಯಂತ ಬಿಡುಗಡೆ ಮಾಡಿ ಆ ನಂತರ ಅದರ ಪ್ರತಿಕ್ರಿಯೆ ನೋಡಿಕೊಂಡು ದೇಶದ ಬೇರೆ ಬೇರೆ ಭಾಷೆಯಲ್ಲಿ ಅವರದೇ ಭಾಷೆಯಲ್ಲಿ ಚಿತ್ರ ಬಿಡುಗಡೆ ಮಾಡಲು ತಂಡ ಉದ್ದೇಶಿಸಿದೆ.
ರವಿ ರೈ ಕಳಸ, ಕಾಫಿ ಗ್ಯಾಂಗ್ ಸ್ಟುಡಿಯೋ , ಬಾಲು ಅರವಣಕರ್ ಸಹಯೋಗದಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದ್ದು ರಾಜ್ಯದಲ್ಲಿ 175 ಏಕಪರದೆಯ ಚಿತ್ರಮಂದಿರಗಳು, 60ಕ್ಕೂ ಅಧಿಕ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಇದೇ ವೇಳೆ ದೇಶದ ವಿವಿಧ ರಾಜ್ಯಗಳಲ್ಲಿ 45ಕ್ಕೂ ಅಧಿಕ ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡದಲ್ಲಿಯೇ ಚಿತ್ರ ಬಿಡುಗಡೆಯಾಗುತ್ತಿರುವುದು “ಟೋಬಿ”ಯ ವಿಶೇಷಗಳಲ್ಲಿ ಒಂದು.

ನಟ,ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು ಇದುವರೆಗೂ ಮಾಡಿರುವ ಚಿತ್ರಗಳಿಗಿಂತ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂಗಿಗೆ ದೊಡ್ಡ ಮೂಗುತಿ ಧರಿಸಿ ಹೊಡೆದಾಟದ ಸನ್ನಿವೇಶದಲ್ಲಿ ಭಾಗಿಯಾಗಿದ್ದಾರೆ. ಕುರಿ ಏರಿ ಬರುವ ಸನ್ನಿವೇಶ ಸೇರಿದಂತೆ ಚಿತ್ರದ ತುಣುಕುಗಳ ಝಲಕ್ ಒಳಗೊಂಡಿರುವ ಟ್ರೈಲರ್ 1 ಕೋಟಿ ದಾಟಿ ಮುನ್ನೆಡೆದಿದೆ. ಇದು ಸಹಜವಾಗಿ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆ ತರಲು ಸಹಕಾರಿಯಾಗಿದೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕರಲ್ಲಿ ಒಬ್ಬರಾಗಿರುವ ಬಾಲು ಅರವಣಕರ್ ಅವರು , ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ಅವರಲ್ಲದೆ ನಟಿಯರಾದ ಚೈತ್ರಾ ಆಚಾರ್, ಸಂಯುಕ್ತ ಹೊರನಾಡು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಗಮನ ಸೆಳೆದಿದ್ದಾರೆ. ಚಿತ್ರ ಬಿಡುಗಡೆಯಾದ ನಂತರ ಅವರ ಪಾತ್ರವೂ ಇಷ್ಟವಾಗಲಿದೆ ಎಂದಿದ್ಧಾರೆ

ಚಿತ್ರದಲ್ಲಿ ಖಳನಟನಾಡಿ ರಾಜ್ ದೀಪಕ್ ಶೆಟ್ಟಿ ಕಾಣಿಸಿಕೊಂಡಿದ್ದು ನಟ ರಾಜ್ ಬಿ ಶೆಟ್ಟಿ ಎದುರು ಹೊಡೆದಾಟದ ಸನ್ನಿವೇಶದಲ್ಲಿ ಭಾಗಿಯಾಗಿದ್ದಾರೆ. ಇಬ್ಬರ ಆಕ್ಷನ್ ಸನ್ನಿವೇಶಗಳು ವಿಭಿನ್ನವಾಗಿ ಮೂಡಿ ಬಂದಿವೆ. ಒಟ್ಟು ಮೂರು ಆಕ್ಷನ್ ಸನ್ನಿವೇಶ ಇದ್ದು ಅದರಲ್ಲಿ ಎರಡನ್ನು ಅರ್ಜುನ್ ರಾಮ್ ಮತ್ತು ಮತ್ತೊಂದು ಆಕ್ಷನ್ ಸನ್ನಿವೇಶವನ್ನು ರಾಜಶೇಖರ್ ಮಾಸ್ಟರ್ ಮಾಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಬೆಲ್ ಬಾಟಮ್ ಕಥೆ ಬರೆದಿದ್ದ ಟಿ.ಕೆ ದಯಾನಂದ್ ಅವರ ಮೂಲ ಕಥೆಯಲ್ಲಿ ಒಂದು ಪಾತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ನಟ ರಾಜ್ ಬಿ ಶೆಟ್ಟಿ ಅದರ ಎಳೆ ತೆಗೆದುಕೊಂಡ ಟೋಬಿ ಚಿತ್ರ ಮಾಡಿದ್ದಾರೆ. ಕರಾವಳಿ ಭಾಗದ ಕಥನ. ಚಿತ್ರ ಎಲ್ಲಿರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ಅವರದು.

ರಾಜ್ ಬಿ ಶೆಟ್ಟಿ ಅವರ ಇದುವರೆಗಿನ ಚಿತ್ರಗಳಿಗಿಂತ ಈ ಚಿತ್ರಕ್ಕೆ ಹೆಚ್ಚು ಬಂಡವಾಳ ಹಾಕಲಾಗಿದೆ. ಇದುವರೆಗೂ 11 ಕೋಟಿ ದಾಟಿದೆ, ಚಿತ್ರದಲ್ಲಿ ಆಕ್ಷನ್, ಮಾಸ್ ಸನ್ನಿವೇಶ ಸೇರಿದಂತೆ ಕರಾವಳಿ ಭಾಗದ ನೈಜ ಘಟನೆಯನ್ನು ಚಿತ್ರದ ಮೂಲಕ ಕಟ್ಟಿಕೊಡುವ ಕೆಲಸ ಮಾಡಲಾಗಿದೆ ಎಂದು ವಿವರ ನೀಡಿದ್ದಾರೆ.

ಹಿರಿಯ ಕಲಾವಿದ ಗೋಪಾಲ ಕೃಷ್ಣ ದೇಶಪಾಂಡೆ ಅವರ ಪಾತ್ರವೂ ವಿಭಿನ್ನತೆಯಿಂದ ಕೂಡಿದೆ. ಇದರ ಜೊತೆಗೆ ಚಿತ್ರದ ಹಲವು ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾತ್ರಿಯ ವೇಳೆ ಹೆಚ್ಚು ಚಿತ್ರೀಕರಣ ನಡೆದ ಹಿನ್ನೆಲೆಯಲ್ಲಿ ಕಾಲ್ ಶೀಟ್ ಹೆಚ್ಚಾಯಿತು. 40 ದಿನದ ಜೊತೆಗೆ 20 ಕಾಲ್ ಶೀಟ್ ಹೆಚ್ಚಾಯಿತು. ಚಿತ್ರ ಅಂದುಕೊಂಡದಕ್ಕಿಂತ ಚೆನ್ನಾಗಿ ಮೂಡಿ ಬಂದಿದ್ದು ಖುಷಿಯಾಗಿದೆ. ಇನ್ನೂ ಚಿತ್ರಮಂದಿರದಲ್ಲಿ ಪ್ರೇಕ್ಷಕರು ನೋಡಿ ಇಷ್ಟ ಪಟ್ಟರೆ ನಮ್ಮ ಶ್ರಮ ಸಾರ್ಥಕ ಎಂದು ಹೇಳಿದ್ದಾರೆ.

ಲೈಟರ್ ಬುದ್ಧ, ಕಾಫಿ ಗ್ಯಾಂಗ್ ಸ್ಟುಡಿಯೋ , ಸ್ಮೂತ್ ಸೇಲರ್ ಜೊತೆಯಾಗಿ ಸಿನಿಮಾಗೆ ಸಾಥ್ ನೀಡಲಾಗಿದೆ. ನಮ್ಮ ತಂಡದ ಮತ್ತೊಂದು ವಿಶೇಷತೆ ಎಂದರೆ ಪ್ರಮುಖರು ಯಾರೂ ತಮ್ಮ ಕೆಲಸಗಳಿಗೆ ಪೇಮೆಂಟ್ ತೆಗೆದುಕೊಳ್ಳುವುದಿಲ್ಲ. ಚಿತ್ರ ಬಿಡುಡಗೆಯಾದ ನಂತರ ಚಿತ್ರಕ್ಕೆ ಆದ ಖರ್ಚು ವೆಚ್ಚ ತೆಗೆದ ನಂತರ ನಾವು ಅದರಲ್ಲಿ ಹಣ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ.
ಬೇರೆ ಬೇರೆ ಭಾಷೆಗಳಿಗೂ ಚಿತ್ರ ಡಬ್ ಆಗಿದೆ. ಸದ್ಯ ಇದೇ 25 ರಂದು ಕನ್ನಡದಲ್ಲಿಯೇ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ. ಕನ್ನಡಕ್ಕೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಬೇರೆ ಬೇರೆ ಭಾಷೆಯಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ ಎಂದು ನಿರ್ಮಾಪಕರಲ್ಲಿ ಒಬ್ಬರಾಗಿರುವ ಬಾಲು ಅನ್ವೇಕರ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.