ರಂಗಾಯಣ ರಘು ನನ್ನ ಮಾನಸಗುರು
ನಟನಾಗಿ ಇನ್ನಷ್ಟು ಕಲಿಯುವ ಹಂಬಲ
ಚಿತ್ರರಂಗದಲ್ಲಿ ನಿರ್ದೇಶಕನಾಗಲು ಬಂದು, ಕಥೆಗಾರನಾಗಿ,ಹಾಸ್ಯ ಕಲಾವಿದನಾಗಿ ವಿಜಯ್ ಚೆಂಡೂರ್ ಗುರುತಿಸಿಕೊಂಡ ಬಗೆ ಮಾದರಿ. 13 ವರ್ಷಗಳ ಸಿನಿಮಾ ವೃತ್ತಿ ಜೀವನದಲ್ಲಿ 70ಕ್ಕೂ ಅಧಿಕ ಚಿತ್ರಗಳಲ್ಲಿ ವಿಭಿನ್ನ ಬಗೆ ಪಾತ್ರಗಳಲ್ಲಿ ಕಾಣಸಿಕೊಳ್ಳುವ ಮೂಲಕ ಏಳು ಬೀಳು ಕಂಡಿದ್ದಾರೆ. ನಟನೆಯಲ್ಲಿಯೇ ಸಾಧಿಸುವ ಛಲ ಕೂಡ ಹೊಂದಿದ್ದಾರೆ. ಈ ಕುರಿತು ಚಿತ್ರರಂಗದ ಅನುಭವ ಹಂಚಿಕೊಂಡಿದ್ದಾರೆ.
• 13 ವರ್ಷಗಳ ಚಿತ್ರರಂಗದ ಯಾನ ತಿರುಗಿ ನೋಡಿದರೆ ಏನನ್ನಿಸಲಿದೆ?
ನಿಜಕ್ಕೂ ಖುಷಿ ಇದೆ. 13ವರ್ಷಗಳ ಬಣ್ಣದ ಬದುಕಿನ ಯಾನದಲ್ಲಿ ವಿಭಿನ್ನ ಬಗೆಯ ಪಾತ್ರ ಮಾಡಿದ್ದೇನೆ. ಜೊತೆ ಜೊತೆಗೆ ಬೆಳವಣಿಗೆ ಕಂಡಿದ್ದೇನೆ. ಒಂದಷ್ಟು ಕಲಿತಿದ್ದೇನೆ, ಸಿನಿಮಾವನ್ನು ತಾಂತ್ರಿಕವಾಗಿ ಇನ್ನಷ್ಟು ಆಳವಾಗಿ ಅಧ್ಯಯನ ಮಾಡುವ ಮತ್ತು ತಿಳಿದುಕೊಳ್ಳುವ ಪ್ರಯತ್ನ ಮತ್ತು ಉದ್ದೇಶವಿದೆ.
• ಸಿನಿಮಾ ರಂಗಕ್ಕೆ ಬಂದದ್ದು ಹೇಗೆ?
ಬಾಗೇಪಲ್ಲಿಯ ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದ ಸಮಯ. ಏಡ್ಸ್ ಕುರಿತು ನಾಟಕ ಬರೆದು ಅಭಿನಯ ಮಾಡುವ ಅವಕಾಶ ಸಿಕ್ಕಿತ್ತು.ಅಷ್ಟೇ ಅಲ್ಲ ನಾಟಕಕ್ಕೆ ಪ್ರಶಸ್ತಿ ಕೂಡ ಬಂದಿತ್ತು. ಮತ್ತೊಂದು ಅಚ್ಚರಿ ಏನು ಗೊತ್ತಾ . ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಹಿರಿಯ ಕಲಾವಿದ ಮಾನು ಆಗಮಿಸಿದ್ದರು. ನಾಟಕಕ್ಕೆ ಪ್ರಶಸ್ತಿ ಬಂದ ನಂತರ ನಾನೂ ಕೂಡ ಬರವಣಿಗೆ ಮಾಡಬಲ್ಲೆ ಎನ್ನುವ ಆತ್ಮ ವಿಶ್ವಾಸ ನನ್ನಲ್ಲಿ ಮೂಡಿಸಿತು. ಅಲ್ಲಿಂದ ಬೆಂಗಳೂರಿಗೆ ಬಂದು ಫಿಲ್ಮ್ ಟೆಕ್ನಾಲಿಜಿಯಲ್ಲಿ ಡಿಪ್ಲಮೋ ಮಾಡಿದೆ. ಆ ಬಳಿಕ ಭೂಪತಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡೆ.
• ಸಹ ನಿರ್ದೇಶಕರಾಗಿ ಎಷ್ಟು ಚಿತ್ರಗಲ್ಲಿ ಕೆಲಸ ಮಾಡಿದ್ದೀರಿ, ಯಾರೆಲ್ಲರ ಜೊತೆ?
ಫಿಲ್ಮ್ ಟೆಕ್ನಾಲಿಜಿಯಲ್ಲಿ ಡಿಪ್ಲಮೋ ಮುಗಿದ ಬಳಿಕ ಪುನೀತ್ ರಾಜ್ ಕುಮಾರ ಅವರ “ಅಪ್ಪು” ಚಿತ್ರದಲ್ಲಿ ಅಂಪ್ರಟೀಸ್ ಆಗಿ ತೆಲುಗಿನ ಖ್ಯಾತ ನಿರ್ದೇಕ ಪೂರಿ ಜಗನ್ನಾಥ್ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಎಸ್. ಗೋವಿಂದು ನಿರ್ದೇಶನ “ಭೂಪತಿ” ಮೊದಲ ಸಿನಿಮಾ,ಕಥೆಯ ಥಾಟ್ ನನ್ನದು.ಆದರೆ ಅದನ್ನು ವಿಸ್ತರಿಸಿ ಮಾಡಿದ್ದು ನಿದೇಶಕರು. ಅದಾದ ಬಳಿಕ ಸ್ವಯಂ ಕೃಷಿ ಚಿತ್ರದಲ್ಲಿ ಕತೆ, ಚಿತ್ರಕಥೆಯಲ್ಲಿ ಭಾಗಿಯಾಗಿದ್ದೆ.ಉಯ್ಯಾಲೆ ಚಿತ್ರಕ್ಕೆ ಕಥೆ ಮಾಡಿದೆ. “ಆ ದಿನಗಳು” ಸಹ ನಿರ್ದೇಶಕನಾಗಿ ಕೆಲಸ ಮಾಡಿದೆ.
• ಯಶ್ ನಟನೆಯ ರಾಕಿ ಚಿತ್ರಕ್ಕೆ ಕಥೆ ನಿಮ್ಮದೇ ಆ ಬಗ್ಗೆ ಹೇಳಿ
ಹೌದು. ರಾಕಿ ಚಿತ್ರದ ಕಥೆ ನನ್ನದೇ. ಮೊದಲ ಬಾರಿಗೆ ಕಥೆಗಾರನಾಗಿ ಗುರುತಿಸಿಕೊಂಡ ಚಿತ್ರ ಇದು. ನಿರ್ದೇಶಕ ನಾಗೇಂದ್ರ ಅರಸ್ ಅವಕಾಶ ಮಾಡಿಕೊಟ್ಟಿದ್ದರು. ಹರಿಶೃಂಗ ಸಂಭಾಷಣೆ ಬರೆದಿದ್ದರು. ಈ ಮೂಲಕ ಕಥೆಗಾರನಾಗಿ ಗುರುತಿಸಿಕೊಳ್ಳುವಂತಾಯಿತು. ಇದಲ್ಲದೆ ಅನೇಕ ನಿರ್ದೇಶಕ ಜೊತೆಗೆ ಕಥೆಯ ಚರ್ಚೆಯಲ್ಲಿ ಭಾಗಿಯಾಗಿದ್ದೇನೆ.
• ನಟನಾದದ್ದು ಹೇಗೆ?
ಸ್ವಯಂ ಕೃಷಿ ಚಿತ್ರದಲ್ಲಿ ನಿರ್ದೇಶಕರ ಜೊತೆ ಕಥೆ,ಚಿತ್ರಕಥೆ ರಚನೆಯಲ್ಲಿ ತೊಡಗಿಸಿಕೊಂಡಿದ್ದೆ. ಪಾತ್ರದ ನರೇಷನ್ ರೀತಿ, ಮೈಮ್ ಮಾಡುವ ಬಗೆ ಕಂಡ ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಅವರು, ನಟನೆ ಆರಂಭದಿದ್ದಾರೆ, ಪಾತ್ರ ಮೈಮ್ ಮಾಡುತ್ತಿದೆ ಅಭಿಮಾನ್ ರಾಯ್, ನಿರ್ದೇಶಕರೇ ಈ ಪಾತ್ರವನ್ನು ವಿಜಯ್ ಅವರೇ ಮಾಡಬಹುದಲ್ಲ ಎಂದು ಹೇಳಿದ್ದರು. ಆ ಮೂಲಕ ಪಾತ್ರವೂ ಸಿಕ್ಕಿತು. ಅಲ್ಲಿಂದ ನಟನೆ ಯಾನ ಆರಂಭವಾಯಿತು. ನಟನೆ ಅರಂಭಕ್ಕೆ ಅಭಿಮಾನ್ ರಾಯ್ ಒಂದು ರೀತಿಯಲ್ಲಿ ಕಾರಣ.
- ಲಕ್ಕಿಯಲ್ಲಿ ಅವಕಾಶ ಸಿಕ್ಕ ಬಗೆ ಹೇಳಿ?
ರಾಕಿ ಚಿತ್ರದಲ್ಲಿ ಕಥೆ ಬರೆದಿದ್ದೆ.ಈಗಾಗಿ ನಟ ಯಶ್ ಅವರ ಪರಿಚಯವಿತ್ತು. ಸ್ವಯಂ ಕೃಷಿ ಚಿತ್ರದ ತುಣುಕನ್ನು ಫೇಸ್ ಬುಕ್‍ನಲ್ಲಿ ಹಾಕಿಕೊಂಡಿದ್ದೆ, ಅದನ್ನು ನೋಡಿದ ಯಶ್, ಕರೆ ಮಾಡಿ ನಟನೆಯನ್ನೂ ಮಾಡುತ್ತೀಯೇನೋ ಹಾಗದರೆ ನಮ್ಮ ಸಿನಿಮಾದಲ್ಲಿಯೂ ಪಾತ್ರ ಮಾಡು ಎಂದು ಲಕ್ಕಿ ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟರು. ಆದಾದ ನಂತರ ಅಶೋಕ ಅಭಿನಯದ. 6-5=2 ಅಶೋಕ, ನವನೀತ್ ಅಭಿಯನದ ಕರ್ವ ಚಿತ್ರದಲ್ಲಿ ಅವಕಾಶ ಬಂತು. ಅಲ್ಲಿಂದ ಒಳ್ಳೆಯ ಪಾತ್ರ ಅದರಲ್ಲಿಯೂ ಹಾರರ್ ಪಾತ್ರಗಳು ಹೆಚ್ಚು ಸಿಗುತ್ತಾ ಹೋದವು.
• ನಿಮ್ಮನ್ನು ಗುರುತಿಸಿದ ಚಿತ್ರಗಳಾವುದು?
6-5=2 , ಕರ್ವ, ಕೃಷ್ಣ ಲೀಲಾ, ಹಂಬಲ್ ನಾಗರಾಜ್ ಪೊಲಿಟಿಶೀಯನ್, ಕೃಷ್ಣ ರುಕ್ಕು, ಇತ್ತೀಚೆಗೆ ಬಿಡುಗಡೆಯಾದ “ ಸೌತ್ ಇಂಡಿಯನ್ ಹೀರೋ ಹೀಗೆ ಹಲವು ಚಿತ್ರಗಳು ಯಶಸ್ಸು ತಂದುಕೊಟ್ಟಿವೆ. ಜೊತೆಗೆ ಮನಸ್ಸಿಗೆ ಮುದ ಕೂಡ ನೀಡಿವೆ.ತಿಂಗಳಿಗೆ 3-4 ಚಿತ್ರಗಳಲ್ಲಿ ನಟಿಸಿದೆ. ಆಗ ಎಲ್ಲಾ ಚಿತ್ರಗಳು ಕನಿಷ್ಠ 50 ದಿನ ಓಡುತ್ತಿದ್ದವು.ಈಗ ಬಿಡಿ ಎಂದರು ನಕ್ಕರು.
• ಸೌಥ್ ಇಂಡಿಯನ್ ಹೀರೋದಲ್ಲಿ ಅವಕಾಶ ಸಿಕ್ಕ ಬಗೆ ಹೇಗೆ?
ಒಮ್ಮೆ ನಿರ್ದೇಶಕ ನರೇಶ್ ಕುಮಾರ್ ಕರೆದು, ಇದುವರೆಗೂ ಮಾಡದ ಪಾತ್ರ ಕೊಡುವೆ. ಅದಕ್ಕಾಗಿ ನೀವು ಗಡ್ಡ ಬಿಡಬೇಕು ಎಂದರು. ಮೂರು ನಾಲ್ಕು ಚಿತ್ರಗಳು ಕೈಯಲ್ಲಿವೆ. ಗಡ್ಡ ಬಿಟ್ಟರೆ ಆ ಚಿತ್ರಗಳ ಪಾತ್ರ ಕೈತಪ್ಪಲಿವೆ. ಬೇರೆ ರೀತಿಯಲ್ಲಿ ಮಾಡಬಹುದಾ ನೋಡಿ ಎಂದು ನಿರ್ದೇಶಕರಿಗೆ ಹೇಳಿದ್ದೆ. ಅದಕ್ಕೆ ಅವರು ಈ ಪಾತ್ರ ಮಾಡಿ ನಿಮಗೆ ಬೇರೆ ರೀತಿಯ ಹೆಸರು ಬರುತ್ತದೆ ಎಂದಿದ್ದರು ಮನಸ್ಸು ಮಾಡಿ ಗಡ್ಡ ಬಿಟ್ಟೆ. ಅದರ ಪರಿಣಾಮ ಕೈಯಲ್ಲಿದ್ದ ಎರಡು ಮೂರು ಚಿತ್ರ ಬಿಟ್ಟೆ. ಮತ್ತೊಂದು ಸಂಗತಿ ಏನು ಗೊತ್ತಾ ನಿರ್ದೇಶಕರು ಕಥೆ ಹೇಳುವಾಗ ಇಲ್ಲಿ ವಿಶಲ್ ಬೀಳುತ್ತೆ. ಇಲ್ಲಿ ಜನ ಹುಚ್ಚೆದ್ದು ಕುಣಿಯುತ್ತಾರೆ ಎಂದು ಹೇಳಿದ ರೀತಿಯೇ ಆಯಿತು. ಪಾತ್ರ ಜನಕ್ಕೆ ಇಷ್ಟವಾಯಿತು ಎಂದರು.
• ಕಥೆಗಾರರಾಗಿ, ಸಹ ನಿರ್ದೇಶಕ,ನಟನಾಗಿ ಗುರುತಿಸಿಕೊಂಡಿದ್ದೀರಾ. ನಿರ್ದೇಶಕನಾಗುವ ಆಸೆ ಇದೆಯಾ?
ಆಸೆ ಇದೆ. ಸದ್ಯಕಂತೂ ಇಲ್ಲ. ನಿರ್ದೇಶಕನಾಗಲು ಬಂದೆ, ಕಥೆಗಾರನಾದೆ, ನಟನಾದೆ. ಈಗ ನಟನಾಗಿ ಈ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಗುರುತಿಸಿಕೊಳ್ಳುವ ಜೊತೆಗೆ ಇನ್ನಷ್ಟು ಕಲಿಯಲು ನಿರ್ದರಿಸಿದ್ದೇನೆ.ನಟನೆಯಲ್ಲಿ ರಂಗಾಯಣ ರಘು ಸ್ಪೂರ್ತಿ. ಅವರಿಂದ ಕಲಿಯುತ್ತಿದ್ದೇನೆ. ಹಾಗಂತ ಅವರನ್ನು ಕಾಪಿ ಮಾಡುತ್ತಿಲ್ಲ. ಬದಲಾಗಿ ಅವರನ್ನು ಅನುಸರಿಸುತ್ತಿದ್ದೇನೆ. ನನಗೆ ಒಂದು ರೀತಿ ಮಾನಸ ಗುರು, ಅವರ ಒಂದೂ ಸಿನಿಮಾ ಬಿಡದೆ ನೋಡಿದ್ದೇನೆ. ಇನ್ನೂ ಕಲಿಯುತ್ತಿದ್ದೇನೆ.
• ಕಥೆಗಾರಗಿದ್ದವರು ನಿಮ್ಮ ಕಥೆ ಬೇರೆಯರ ಹೆಸರಲ್ಲಿ ಬಂದಿದೆಯಾ?
ಕಂಡಿತಾ ಇಲ್ಲ. ಕಥೆಗಾರನಾಗಿ ರಾಕಿ ಚಿತ್ರಕ್ಕೆ ಕಥೆ ಬರೆದಿದ್ದೆ. ಆದಾದ ನಂತರ ಹಲವು ನಿರ್ದೇಶಕರ ಜೊತೆ ಕಥೆಯ ಚರ್ಚೆ ವಿಸ್ತರಣೆಯಲ್ಲಿ ಕುಳಿತುಕೊಂಡಿದ್ದೇನೆ. ಆ ರೀತಿಯ ಅನುಭವ ಆಗಿಲ್ಲ
• ಸದ್ಯದ ಪ್ರಾಜೆಕ್ಟ್ ಬಗ್ಗೆ ಹೇಳಿ?
ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತ, ಫುಲ್ ಮೀಲ್ಸ್ ನಟಿಸುತ್ತಿದ್ದೇನೆ. ಭಘೀರ ಚಿತ್ರದಲ್ಲಿಯೂ ಒಳ್ಳೆಯ ಪಾತ್ರವಿದೆ ಇನ್ನೂ ಆರಂಭವಾಗಿಲ್ಲ. ಈ ನಡುವೆ ಇಸಿಲಾ ಚಿತ್ರದಲ್ಲಿ ನಟಿಸುತ್ತಿದ್ದೇನೆ ಥ್ರಿಲ್ಲರ್ ಜಾನರ್ ಇರುವ ಸಿನಿಮಾ. ಬಾಣದ ದಾರವನ್ನು ಎಳೆದು ಬಿಡುವುದಕ್ಕೆ ಇಸಿಲಾ ಎನ್ನುತ್ತಾರೆ. ಇದೊಂದು ಹೊಸ ಲವ್ ಸ್ಟೋರಿ. ಇದಲ್ಲದೆ ಬಿಡುಗಡೆಗೆ ಪ್ರಭುತ್ವ ಸಿದ್ದವಾಗಿದೆ.ಅಲ್ಲದೆ ಹಲವು ಚಿತ್ರಗಳು ಕೈಯಲ್ಲಿವೆ.
• ಹಾರರ್ ಸ್ಟಾರ್ ಅನ್ನುತ್ತಾರೆ ಈ ಬಗ್ಗೆ ಹೇಳುವುದಾದರೆ?
ಹೆಚ್ಚಾಗಿ ಹಾರರ್ ಚಿತ್ರಗಳಲ್ಲಿ ನಟಿಸಿದ್ದರಿಂದ ಹಾರರ್ ಸ್ಟಾರ್ ಎಂದು ಕರೆಯುತ್ತಾರೆ. ಜನ ಯಾವುದಾದರೂ ರೀತಿಯಲ್ಲಿ ಗುರುತಿಸುತ್ತಾರಲ್ಲ. ಅದು ಖುಷಿಯ ಸಂಗತಿ, ಯಾವುದೇ ಚಿತ್ರದಲ್ಲಿ ನಟಿಸುವಾಗ ಪಾತ್ರಕ್ಕೆ ಜೀವ ತುಂಬಬೇಕು ಎಂದು ಬಯಸುತ್ತೇನೆ. ಹೀಗಾಗಿ ಹಾರರ್ ಚಿತ್ರಗಳು ನನ್ನ ಪಾಲಿಗೆ ಹೆಚ್ಚಾಗಿ ಬಂದವು.
• ನಾಯಕನಾಗುವ ಆಸೆ ಇದೆಯಾ?
ಕಂಟೆಂಟ್ ಆಧಾರಿತ ಪಾತ್ರದಲ್ಲಿ ಕಾಣಿಸಿಕೊಳ್ಳುವಾಸೆ. ಆದರೆ ನಾಯಕ ಅಂತೇನಿಲ್ಲ, ಪಾತ್ರಕ್ಕೆ ಪ್ರಾಮುಖ್ಯತೆಇದ್ದರೆ ಕಂಡಿತಾ ನಟಿಸುತ್ತೇನೆ. ಮುಂದೆ ಅಂತಹ ನಿರ್ದೇಶಕರು ಸಿಗಬಹುದು, ನೋಡೋಣ ನಾನಂತೂ ಆಶಾವಾದಿ.
• ಒಂದೇ ರೀತಿ ಪಾತ್ರ ಮಾಡುವಾಗ ಬೇಜಾರಾಗುವುದಿಲ್ಲವೇ?
ಕಂಡಿತಾ ಆಗುತ್ತದೆ. ಏನು ಮಾಡೋದು ಬದುಕು ಕೂಡ ನಡೆಯಬೇಕಲ್ಲವೆ. ಬರವಣಿಗೆ, ನಿರ್ದೇಶನ ಗೀಳು, ನಟನೆ ನನ್ನ ಬಾಳು, ಈ ಗೀಳು ಮತ್ತು ಬಾಳನ್ನು ಹೊಂದಾಣಿಕೆ ಮಾಡಿಕೊಂಡು ಸಾಗುವುದೇ ಜೀವನ ಹೀಗಾಗಿ ಬಂದ ಪಾತ್ರವನ್ನು ಒಪ್ಪಿಕೊಂಡು ಅಚ್ಚುಕಟ್ಟಾಗಿ ನಟಿಸುತ್ತೇನೆ.ನಿರ್ದೇಶಕರು ಹೇಳಿದಕ್ಕಿಂತ ಚೆನ್ನಾಗಿ ಮಾಡಬೇಕು ಎನ್ನುವುದು ನನ್ನ ಉದ್ದೇಶ
• ಆರ್ಥಿಕವಾಗಿ ಸಧೃಡವಾಗಿದ್ದೀರಾ?
ಇನ್ನೂ ಇಲ್ಲ. ಹೆಸರಿಗೆ 70 ಫ್ಲಸ್ ಚಿತ್ರ. ಕೆಲವರು ನಾನೇ ಬೇಕು ಎಂದು ಆಯ್ಕೆ ಮಾಡಿಕೊಳ್ಳುತ್ತಾರೆ. ಆಗ ಸಂಭಾವನೆ ತುಸು ಹೆಚ್ಚೇ ಇರುತ್ತದೆ. ಇನ್ನೂ ಕೆಲವು ಕಡೆ ಸಾವಿರ ಹೂಗಳ ಮಧ್ಯೆ ನನ್ನದೂ ಒಂದು ಹೂ ಎನ್ನುವಂತೆ ಇರುತ್ತದೆ ಅಂತಹ ಕಡೆ ಕಡಿಮೆ ಸಂಭಾವನೆ ಇರಲಿದೆ. ಪಾತ್ರ ಯಾವುದೇ ಆಗಿದ್ದರೂ ಅದಕ್ಕೆ ಜೀವ ತುಂಬುವುದಷ್ಟೇ ನನ್ನ ಗುರಿ.
.