ನಂದಿ ಫಿಲ್ಮಂ ಅವಾರ್ಡ್‍ಗೆ ಕಿಚ್ಚ ಸುದೀಪ್ ಚಾಲನೆ: ಡಿಸೆಂಬರ್ 6ಕ್ಕೆ ಪ್ರಶಸ್ತಿ ಸಮಾರಂಭ
ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ನಂದಿ ಪ್ರಶಸ್ತಿ ಆರಂಭವಾಗಿದೆ. ಡಿಸೆಂಬರ್ ಪ್ರಶಸ್ತಿ ಸಮಾರಂಭ ನಡೆಯುತ್ತಿದ್ದು, ಅದಕ್ಕಾಗಿ ಸಕಲ ಸಿದ್ದತೆ ನಡೆದಿದೆ. ನಂದಿ ಚಲನಚಿತ್ರ ಪ್ರಶಸ್ತಿ-2023ರ ಕರ್ಟನ್ ರೈಸ್ ಗೆ ಕಿಚ್ಚ ಸುದೀಪ್ ಚಾಲನೆ ನೀಡಿ ಹೊಸ ಪ್ರಶಸ್ತಿ ಸಮಾರಂಭಕ್ಕೆ ಶುಭ ಹಾರೈಸಿದರು.
ಕಿಚ್ಚ ಸುದೀಪ್ ಮಾತನಾಡಿ, ಸಂಸ್ಥಾಪಕರಿಗೆ ಒಳ್ಳೆದಾಗಲಿ. ಅವಾಡ್ರ್ಸ್ ಕಾರ್ಯಕ್ರಮಕ್ಕೆ ಹೋಗುವುದು ಬಿಟ್ಟು 2003-2004 ಕೊನೆ. ಆ ಬಳಿಕ ಅವಾಡ್ರ್ಸ್ ಕಾರ್ಯಕ್ರಮಕ್ಕೆ ಹೋಗೇ ಇಲ್ಲ. ಅದಕ್ಕೆ ಬೇರೆ ಇತಿಹಾಸವಿದೆ. ಆದರೆ ಇಲ್ಲಿ ಆ ಅವಾಡ್ರ್ಸ್ ಮಹತ್ವ ಬೇರೆ ಕಲಾವಿದರಿಗೆ ಆಗಲಿ. ಎಲ್ಲರಿಗೂ ಎಷ್ಟು ಮುಖ್ಯ ಎನ್ನುವುದನ್ನು ನೋಡಿದ್ದೇನೆ. ಯಾರಿಗೆ ಹೋಗಬೇಕು ಅವರಿಗೆ ಹೋಗಲಿ. ಮಿಕ್ಕಿದವರೆಲ್ಲಾ ದುಡ್ಡು ಮಾಡುತ್ತಿದ್ದಾರೆ. ಅವಾರ್ಡ್, ದುಡ್ಡು ಅಂತಾ ನೋಡಿದಾಗ ಪ್ರಶಸ್ತಿ ಬಿಟ್ಟು ದುಡ್ಡಿಗೆ ಕೈ ಹಾಕುವವರು ಇದ್ದಾರೆ. ಪ್ರಶಸ್ತಿಗೆ ಗೌರವ ಕೊಟ್ಟು ಅದಕ್ಕಾಗಿ ಬಾಳಿ ಬದುಕುವವರಿಗೆ ಅವರಿಗೆ ನೀಡಿ. ನಂದಿ ಬಹಳ ಶ್ರೇಷ್ಠ. ಅದರ ಹೆಸರಲ್ಲಿ ನಡೆಸುತ್ತೀರಾ ಎಂದರೆ ಅಷ್ಟೇ ಶುದ್ಧವಾಗಿ ಇರಲಿ. ಕರ್ನಾಟಕದಲ್ಲಿ ಅವಾಡ್ರ್ಸ್ ಪ್ರೋಗ್ರಾಮ್ ನಡೆಸಲು ಬಹಳ ಕೊರತೆ ಇದೆ. ತಲೆ ಎತ್ತಿ ನೋಡುವ ಅವಾಡ್ರ್ಸ್ ಪ್ರೋಗ್ರಾಮ್ ಇಲ್ಲ. ಅಂತಹ ಪ್ರಶಸ್ತಿ ಕಾರ್ಯಕ್ರಮ ನಂದಿ ಆಗಲಿ ಎಂದು ಶುಭ ಹಾರೈಸಿದರು.
ನೆರೆಯ ಆಂಧ್ರಪ್ರದೇಶ ಮನರಂಜನಾ ಕ್ಷೇತ್ರದ ಸಾಧಕರಿಗೆ ಕೊಡುವ ರಾಜ್ಯ ಪ್ರಶಸ್ತಿಗೂ ನಂದಿ ಅವಾಡ್ರ್ಸ್ ಎಂದೇ ಹೆಸರಿದೆ. ಆದರೆ, ಆ ಪ್ರಶಸ್ತಿಗೂ ಈ ಪ್ರಶಸ್ತಿಗೂ ಸಮಬಂಧವಿಲ್ಲ. ಎರಡು ಬೇರೆ ಬೇರೆ. ಆಂಧ್ರಪ್ರದೇಶದಂತೆ ಕನ್ನಡದ ಪ್ರಶಸ್ತಿಗೂ ನಂದಿ ಅವಾರ್ಡ್ ಎಂದೇ ಕರೆಯಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ನಂದಿ ಎನ್ನುವುದು ಕನ್ನಡದ ಪಾಲಿಗೂ ಒಂದು ಪವರ್ ಫುಲ್ ಇಮೇಜ್ ಎನಿಸುವ ಲಾಂಛನ. ಆ ಕಾರಣದಿಂದಲೇ ‘ನಂದಿ’ ಎಂಬ ಹೆಸರನ್ನೇ ಕನ್ನಡದ ಪ್ರಶಸ್ತಿಗೂ ಇಡಲಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ ‘ನಂದಿ ಫಿಲ್ಮಂ ಅವಾರ್ಡ್’ ಸಂಸ್ಥಾಪರಾಗಿದ್ದಾರೆ. ಭಾ.ಮಾ.ಗಿರೀಶ್, ಹರ್ಷಿತಾ, ನಂದಿತಾ ಹಾಗೂ ಅಶೋಕ್ ಡೈರೆಕ್ಟರ್ಸ್ ಗಳಾಗಿದ್ದಾರೆ.
ನಂದಿ ಪ್ರಶಸ್ತಿಯಲ್ಲಿ ಕನ್ನಡ ಸಿನಿಮಾಗಳು, ಪ್ರಾದೇಶಿಕವಾಗಿ ಭಾಷೆಗಳಾದ ತುಳು, ಕೊಡವ, ಕೊಂಕಣಿ, ಬ್ಯಾರಿ ಹಾಗೂ ಬಂಜಾರ ಈ ಭಾಷೆಗಳಿಗೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಸಾಹಿತ್ಯ, ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಗೂ ಪ್ರಶಸ್ತಿ ನೀಡಲಾಗುತ್ತದೆ. 50ಕ್ಕೂ ಹೆಚ್ಚು ವಿಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದ ಸ್ವಂತ ಪ್ರಶಸ್ತಿ ನೀಡುವ ವೇದಿಕೆ, ಆ ಮೂಲಕ ಕನ್ನಡದ ಪ್ರತಿಭೆಗಳನ್ನು ನಾವೇ ಗುರುತಿಸಿ ಬೆನ್ನು ತಟ್ಟುವ ಪ್ರಯತ್ನ ಮಾಡಬೇಕಿದ್ದು, ನಂದಿ ಅವಾರ್ಡ್ ಘೋಷಣೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಒರಿಯನ್ ಮಾಲ್‍ನಲ್ಲಿ ಡಿಸೆಂಬರ್ 6 ರಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಭಾಗಿಯಾಗಲಿದ್ದಾರೆ.