‘ಇಂಟರ್ ವಲ್’ ಚಿತ್ರಕ್ಕೆ ಇಪ್ಪತ್ತೈದರ ಸಂಭ್ರಮ: ಪವನ್ ಒಡೆಯರ್ ಸಾಥ್
ಒಂದೇ ಹೆಸರಿನ ಮೂವರು ಸ್ನೇಹಿತರು ಶಾಲೆಯಲ್ಲಿ ಮಾಡುವ ಕಿತಾಪತಿ, ಇಂಜಿನಿಯರಿಂಗ್ ಓದುವಾಗ, ನಂತರ ಕೆಲಸ ಹುಡುಕುವಾಗ ನಡೆಯುವ ಘಟನೆಗಳನ್ನು ಹಾಸ್ಯಮಿಶ್ರಿತವಾಗಿ ಹೇಳಿರುವ ಚಿತ್ರ “ಇಂಟರ್ ವಲ್ ” ಚಿತ್ರ 25 ದಿನ ಪೂರೈಸಿದೆ.

ಭರತವರ್ಷ್ ಪಿಚ್ಚರ್ಸ್ ಅಡಿಯಲ್ಲಿ ಸುಖೇಶ್ ಹಾಗೂ ಭರತ್ ವರ್ಷ ಸೇರಿ ನಿರ್ಮಿಸಿರುವ ಹಾಗೂ ಭರತ್ ವರ್ಷ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಯೂಥ್ ಫುಲ್ ಎಂಟರ್ ಟೈನರ್ ಚಿತ್ರಕ್ಕೆ ರಾಜ್ಯದಾದ್ಯಂತ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ.
ಪ್ರತಿಯೊಬ್ಬರ ಜೀವನದಲ್ಲೂ ಒಂದು ಇಂಟರ್‍ವಲ್ ಅನ್ನೋದು ಬಂದೇ ಬರುತ್ತದೆ. ಅದೇ ರೀತಿ ನಾಯಕನ ಜೀವನದಲ್ಲಿ ಬಂದ ಇಂಟರ್‍ವಲ್ ಆತನ ಲೈಫಲ್ಲಿ ಏನೇನೆಲ್ಲ ತಿರುವುಗಳಿಗೆ ಕಾರಣವಾಯಿತು ಅನ್ನೋದನ್ನು ಕುತೂಹಲಕರವಾಗಿ ನಿರ್ದೇಶಕರು ಈ ಚಿತ್ರದಲ್ಲಿ ಹೇಳಿದ್ದಾರೆ.
ಇಂಟರ್ ವಲ್ ಚಿತ್ರದ 25ರ ಸಂಭ್ರಮದ ಕ್ಷಣಗಳಿಗೆ ನಿರ್ದೇಶಕ ಪವನ್ ಒಡೆಯರ್ ಸಾಕ್ಷಿಯಾದರು. ಚಿತ್ರತಂಡಕ್ಕೆ ಸ್ಮರಣ ಫಲಕ ವಿತರಿಸಿ ಮಾತನಾಡಿ ಈ ಸಿನಿಮಾ ಬಗ್ಗೆ ತುಂಬಾ ಕೇಳಿದ್ದೇನೆ. ಎಂಜಿನಿಯರ್ ಗಳೇ ಸೇರಿ ಮಾಡಿರುವ ಚಿತ್ರ. ಮಾರ್ಕೆಟಿಂಗ್ ಮಾಡುವಲ್ಲಿ ಈ ತಂಡ ಗೆದ್ದಿದೆ. ಪ್ರೇಕ್ಷಕರು ಹೊಸಬರ ಸಿನಿಮಾಗಳಿಗೆ ಹೆಚ್ಚು ಆದ್ಯತೆ ಕೊಡಬೇಕು ಎಂದು ಸಲಹೆ ನೀಡಿದರು.
ನಿರ್ದೇಶಕ ಭರತ್ ವರ್ಷ ಮಾತನಾಡಿ ನಮಗೆ ಪುನೀತ್ ರಾಜ್ ಕುಮಾರ್ ಅವರ ಆಶೀರ್ವಾದ ಸಿಕ್ಕಿದೆ. ಅಲ್ಲದೆ ಅಶ್ವಿನಿ ಮೇಡಂ, ಶ್ರೀಮುರಳಿ, ದ್ರುವ ಸರ್ಜಾ ಅವರೂ ನಮಗೆ ಸಪೋರ್ಟ್ ಮಾಡಿದ್ದು ಚಿತ್ರದ ಗೆಲುವಿಗೆ ಸಹಕಾರಿಯಾಯ್ತು ಎಂದರು.

ನಟ ಸಖೀ ಮಾತನಾಡಿ ಫೈನಾನ್ಷಿಯಲಿ ಅನ್ನೋದಕ್ಕಿಂತ, ಮೆಂಟಲಿ ಚಿತ್ರ ನಮಗೆ ತೃಪ್ತಿ ತಂದುಕೊಟ್ಟಿದೆ. 22 ಸಾವಿರ ಜನ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಮಾಧ್ಯಮಗಳ ಸಹಕಾರವೂ ತುಂಬಾ ದೊಡ್ಡದು. ಸಿನಿಮಾ ಮಾಡೋವಾಗ ಮೊದಲು ಸ್ಕ್ರಿಪ್ಟ್ ಮಾಡೋದು, ನಂತರ ಜನರನ್ನು ಥೇಟರಿಗೆ ಕರೆತರೋದು ಈ ಎರಡು ಸ್ಟೆಪ್ಸ್ ಕಷ್ಟ. ಅದನ್ನುಬಿಟ್ಟು ಉಳಿದೆಲ್ಲವನ್ನೂ ಸುಲಭವಾಗಿ ಮಾಡಬಹುದು ಎಂದು ತನ್ನ ಅನುಭವಗಳನ್ನು ಬಿಚ್ಚಿಟ್ಟರು.
ಉಳಿದಂತೆ ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ, ನಾಯಕಿಯರಾದ ಸಹನಾ ಆರಾಧ್ಯ, ಚರಿತ್ರಾರಾವ್ ಎಲ್ಲರೂ ಚಿತ್ರದ ಗೆಲುವಿನ ಸಂತಸ ಹಂಚಿಕೊಂಡರು.
ಚಿತ್ರದಲ್ಲಿ ವಿಕಾಸ್ ವಸಿಷ್ಠ ಸಂಗೀತ ಸಂಯೋಜನೆಯ ಹಾಡುಗಳಿಗೆ ವಿಜಯ್ ಪ್ರಕಾಶ್, ಚಂದನ್ ಶಟ್ಟಿ, ಆಲ್ ಓಕೆ ಅಲೋಕ್, ಸುನಿಧಿ ಗಣೇಶ್, ವಾಣಿ ಹರಿಕೃಷ್ಣ ದನಿಯಾಗಿದ್ದಾರೆ. ರಾಜ್‍ಕಾಂತ್ ಛಾಯಾಗ್ರಹಣ, ಚಂದ್ರು ಬಂಡೆ ಸಾಹಸ ನಿರ್ದೇಶನ, ಶಶಿಧರ್ ಸಂಕಲನ ಈ ಚಿತ್ರಕ್ಕಿದೆ.

