ಟಕ್ಕರ್ ಮನೋಜ್ ಹೊಸ ಸಿನಿಮಾಗೆ ಆರ್ಯ ಮಹೇಶ್ ನಿರ್ದೇಶಕ
ಕೋಲಾರ, ಇಂಗ್ಲಿಷ್ ಮಂಜ ಸೇರಿ ಹಲವು ಚಿತ್ರ ನಿರ್ದೇಶನ ಮಾಡಿದ್ದ ಆರ್ಯ ಮಹೇಶ್. ರಾ ಸಬ್ಜೆಕ್ಟ್ ನ್ನು ತೆರೆಗೆ ಕಟ್ಟಿ ಕೊಡುವಲ್ಲಿ ಸಿದ್ದ ಹಸ್ತರು.ಯಾವುದೇ ಇಮೇಜ್ ಇಲ್ಲದ, ಕಮರ್ಷಿಯಲ್ ಅಂಶಗಳಿಗೂ ಒಗ್ಗುವ ನಾಯಕನಟನನ್ನು ಬಯಸಿದ್ದ ನಿರ್ದೇಶಕರಿಗೆ ಈಗ ಹೇಳಿಮಾಡಿಸಿದಂತಾ ಹೀರೋ ಸಿಕ್ಕಿದ್ದಾರೆ. ಅದುವೇ ಟಕ್ಕರ್ ಮನೋಜ್

ಅಂಬರೀಶ ಮತ್ತು ಚಕ್ರವರ್ತಿ ಮೊದಲಾದ ಚಿತ್ರಗಳಲ್ಲಿ ನಟಿಸಿ ನಂತರ ಟಕ್ಕರ್ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟವರು ಮನೋಜ್. ಸದ್ಯ ಮನೋಜ್ ನಟನೆಯ ಬಿಗ್ ಬಜೆಟ್ಟಿನ ʻಧರಣಿʼಅಂತಿಮ ಹಂತದ ಚಿತ್ರೀಕರಣದಲ್ಲಿದೆ. ಅನಂತು ವರ್ಸಸ್ ನುಸ್ರತ್ ಖ್ಯಾತಿಯ ಸುಧೀರ್ ಶ್ಯಾನುಭೋಗ್ ನಿರ್ದೇಶನದ ʻಧರಣಿʼ ಕೂಡಾ ಕನ್ನಡಕ್ಕೆ ಹೊಸ ಕಥಾವಸ್ತುವನ್ನು ಹೊತ್ತು ತರುತ್ತಿದೆ. ಧರಣಿ ಪೂರ್ತಿ ಮುಗಿಯುವ ಮುಂಚೆಯೇ ಮನೋಜ್ ʻಗಾರ್ಡನ್ʼಗೆ ಕಾಲಿಟ್ಟಿದ್ದಾರೆ.

ನಿರ್ದೇಶಕ ಆರ್ಯ ಮಹೇಶ್ ಮಾತನಾಡಿ ʻʻಕಣ್ಮುಂದೆ ಕಾಣುವ ವಿಚಾರಗಳು, ಕ್ಯಾರೆಕ್ಟರುಗಳನ್ನೇ ಯಥಾವತ್ತಾಗಿ ಕಥೆಯ ರೂಪದಲ್ಲಿ ಕಟ್ಟುವುದು ಶೈಲಿ. ಸಿನಿಮಾದ ಮೂಲಕ ಯಾರೂ ಹೇಳದ ನೈಜವಾದ ವಿಚಾರಗಳನ್ನು ತೋರಿಸಬೇಕು ಎನ್ನುವುದು ನನ್ನ ಬಯಕೆ. ಮಾಡಿಕೊಂಡಿರುವ ಕಥೆಗೆ ಪೂರಕವಾಗಿ ಮನೋಜ್ ಜೊತೆಯಾಗಿದ್ದಾರೆ. ಚಿತ್ರದ ನಿರ್ಮಾಪಕರಾಗಿರುವ ಜಿ. ಮುನಿರಾಜು ಸಾಥ್ ನೀಡಿದ್ದಾರೆ ಎಂದರು
ನಟ ಮನೋಜ್ ಮಾತನಾಡಿ ಹಿಂದೆ ನಟಿಸಿದ್ದ ಟಕ್ಕರ್ ಸೈಬರ್ ಕ್ರೈಮ್ ಕಥಾವಸ್ತುವನ್ನು ಹೊಂದಿತ್ತು. ಸದ್ಯ ಚಿತ್ರೀಕರಣದಲ್ಲಿರುವ ಧರಣಿಯ ಜಗತ್ತೇ ಬೇರೆ. ಕೋಳಿ ಕಾಳಗ ಸೇರಿದಂತೆ ಪಕ್ಕಾ ಈ ನೆಲದ ಕಥಾವಸ್ತುವನ್ನು ಅದು ಹೊಂದಿದೆ. ಈ ಹೊತ್ತಿನಲ್ಲಿ ಈ ಎರಡೂ ಚಿತ್ರಕ್ಕಿಂತಾ ಭಿನ್ನ ಅಂಶಗಳಿರುವ, ಪಕ್ಕಾ ಬೆಂಗಳೂರು ಲೋಕಲ್ ಕಥೆ ಮತ್ತು ಭಾಷೆಯನ್ನು ಹೊಂದಿರುವ ʻಗಾರ್ಡನ್ʼ ಒಪ್ಪಿದ್ದೇನೆ. ನಿರ್ದೇಶಕ ಆರ್ಯ ಮಹೇಶ್ ಮೇಲೆ ಅಪಾರ ಭರವಸೆ ಹೊಂದಿದ್ದೇನೆ ಎಂದು ಹೇಳಿದರು.

ಎಂ.ಆರ್. ಸಿನಿಮಾಸ್ ಬ್ಯಾನರ್ ಮೂಲಕ ಜಿ. ಮುನಿರಾಜು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸಾಯಿಬಾಬಾ ದೇವಸ್ಥಾನದಲ್ಲಿ ಸರಳವಾಗಿ ಸ್ಕ್ರಿಪ್ಟ್ ಪೂಜೆ ಮಾಡುವ ಮೂಲಕ ʻಗಾರ್ಡನ್ʼ ಚಿತ್ರವನನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸೆಪ್ಟೆಂಬರ್ ತಿಂಗಳಿನಿಂದ ಬೆಂಗಳೂರಿನ ಸುತ್ತಮುತ್ತ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

