“ಗತವೈಭವ” ಸಿನಿಮಾಕ್ಕೆ ಅತ್ಯುತ್ತಮ ಚಿತ್ರ,ನಟ, ನಟಿ, ರಾಷ್ಟ್ರೀಯ ಪ್ರಶಸ್ತಿ: ನಿರ್ಮಾಪಕರ ಘೋಷಣೆ
“ಹೆತ್ತವರಿಗೆ ಹೆಗ್ಗಣ ಕೂಡ ಮುದ್ದು”.. ಅದು ಸಹಜ ಕೂಡ, ವಿಷಯ ಹೀಗ್ಯಾಕೆ ಅಂತೀರಾ.. ಚಿತ್ರದ ನಿರ್ದೇಶಕ, ನಿರ್ಮಾಪಕ, ನಾಯಕ ಆದಿಯಾಗಿ ಎಲ್ಲರೂ ಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮÀ ನಾಯಕಿ, ನಾಯಕ, ಅತ್ಯುತ್ತಮ ಚಿತ್ರ ಸೇರಿ ಹಲವು ಪ್ರಶಸ್ತಿ ಬರಲಿದೆ ಎನ್ನುವುದೂ ಸೇರಿದಂತೆ ನಾನಾ ರೀತಿಯ ಕನಸು ಕಂಡಿದ್ದಾರೆ.ನಿರೀಕ್ಷೆ, ಭರವಸೆ ಇಟ್ಟುಕೊಂಡಿದ್ದಾರೆ.
ಅದು ಯಾವ ಚಿತ್ರ ಅಂತೀರಾ,, ನಿರ್ದೆಶಕ ಸಿಂಪಲ್ ಸುನಿ ಆಕ್ಷನ್ಕಟ್ ಹೇಳಿರುವ “ಗತವೈಭವ”. ವಿವಿಧ ಕಾರಣಗಳಿಂದ ತಡವಾಗಿ ಈಗ ನವಂಬರ್ 15ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಇದಕ್ಕೂ ಮುನ್ನ ವಿವಿಧ ಪ್ರಶಸ್ತಿ ಬಂದೇ ಬರುತ್ತದೆ ಎನ್ನುವ ವಿಶ್ವಾಸದಲ್ಲಿದೆ ಚಿತ್ರತಂಡ.
“ಗತವೈಭವ” ಚಿತ್ರದ ಮೂಲಕ ಗುಬ್ಬಿ ವಿಧಾನಸಭಾ ಕ್ಷೇತ್ರದ ಎಸ್.ಆರ್ ಶ್ರೀನಿವಾಸ್ ಪುತ್ರ ದುಶ್ಯಂತ್ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ. ದುಶ್ಯಂತ್ ಎದುರು ಮನೆಯ ತುಮಕೂರಿನ ದೀಪಕ್ ತಿಮ್ಮಪ್ಪ ಮೊದಲ ಬಾರಿಗೆ ನಿರ್ಮಾಣ ಮಾಡಿದ್ದಾರೆ, ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ.

ಚಿತ್ರದ ಟೀಸರ್ ಬಿಡುಗಡೆ ಬಿಡುಗಡೆಯಾಗಿದೆ. ಈ ವೇಳೆ ಮಾತಿಗಿಳಿದ ನಾಯಕ ದುಶ್ಯಂತ್, ನಿರ್ದೇಶಕ ಸುನಿ ಹತ್ತು ಸಿನಿಮಾಗಳಿಗಿಂತ ಇದು ಬೆಸ್ಟ್ ಸಿನಿಮಾವಾಗಲಿದೆ. ನಟಿ ಆಶಿಕಾ ಈವರೆಗೆ 19 ಸಿನಿಮಾ ಮಾಡಿದ್ದಾರೆ, ಇದು 20ನೇ ಸಿನಿಮಾ ಇದು ಅವರ ಚಿತ್ರಜೀವನದಲ್ಲಿ ಬೆಸ್ಟ್ ಚಿತ್ರವಾಗಲಿದೆ ಎನ್ನುವುದನ್ನು ನಿಖರವಾಗಿ ಹೇಳಬಲ್ಲೆ, ಸಂಗೀತ ನಿರ್ದೇಶನ ಜೂಡಾ ಸ್ಯಾಂಡಿ 28ನೇ ಸಿನಿಮಾದಲ್ಲಿ ಬೆಸ್ಟ್ ಸಂಗೀತ ನೀಡಿದ್ದಾರೆ.ಜೊತೆಗೆ ಛಾಯಾಗ್ರಾಹಕ ವಿಲಿಯಮ್ ಡೇವಿಡ್ ಅವರ 6 ಸಿನಿಮಾ ಈವರೆಗೆ ಬಿಡುಗಡೆಯಾಗಿದೆ, ಅವರ ಬೆಸ್ಟ್ ವರ್ಕ್ ಕೂಡ ಈ ಚಿತ್ರದಲ್ಲಿದೆ. ಹೇಳಿರುವ ವಿಷಯ ನೆನಪಿನಲ್ಲಿಟ್ಟಿಕೊಳ್ಳಿ, ಸಿನಿಮಾ ಬಿಡುಗಡೆಯಾದ ಮೇಲೆ ಚರ್ಚೆ ಮಾಡೋಣ ಎನ್ನುವ ಆತ್ಮವಿಶ್ವಾಸದಿಂದ ಹೇಳಿದರು.
ನೂರು ದಿನಕ್ಕೂ ಹೆಚ್ಚು ಕಾಲ ಚಿತ್ರೀಕರಣ ಮಾಡಲಾಗಿದೆ. ಪೋರ್ಚುಗಲ್ ಚಿತ್ರೀಕರಣ ಮಾಡಿದ್ದೇವೆ. ಗ್ರಾಫಿಕ್ ಕಾರಣದಿಂದ ಸಿನಿಮಾ ತಡವಾಯ್ತು. ನಿರೀಕ್ಷೆಗೂ ಮೀರಿದಷ್ಟು ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಗತವೈಭವ ನವಂಬರ್ 15ಕ್ಕೆ ತೆರೆಗೆ ಬರಲಿದೆ ಎಲ್ಲರ ಸಹಕಾರ ಬೇಕು ಎಂದು ಮಾಹಿತಿ ಹಂಚಿಕೊಂಡರು.
ನಿರ್ಮಾಪಕ ದೀಪಕ್ ತಿಮ್ಮಪ್ಪ ಮಾತನಾಡಿ, ನಾಯಕ ದುಶ್ಯಂತ್ ಅಭಿನಯಕ್ಕೆ ಚೊಚ್ಚಲ ನಟ ಪ್ರಶಸ್ತಿ ಬರುವುದು ಸಹಜ. ಇದರ ಹೊರತಾಗಿ ಅವರ ಅಭಿನಯಕ್ಕೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಬರಲಿದೆ.ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ಬರಲಿದೆ. ನಾಯಕಿ ಆಶಿಕಾ ರಂಗನಾಥ್ ಅವರ ಚಿತ್ರ ಜೀವನದಲ್ಲಿ ಇದುವರೆಗಿನ ಅತ್ಯುತ್ತಮ ನಟನೆ ಮಾಡಿದ್ದಾರೆ, ಎಮೋಷನಲ್ ಸೀನ್ನಲ್ಲಿ ಅದ್ಬುತವಾಗಿ ಕಾಣಿಸಿಕೊಂಡಿದ್ಧಾರೆ, ಅವರು ಅಳುವ ಸೀನ್ ನೋಡಿದ್ರೆ ಯಾರಿಗಾದರೂ ಅಳು ಬಂದೇ ಬರುತ್ತದೆ ಎನ್ನುವ ಮೂಲಕ ಕೂಸು ಹುಟ್ಟುವ ಮುನ್ನ ಕುಲಾವಿ ರೆಡಿ ಮಾಡಿಕೊಂಡಿದ್ದಾರೆ, ಇನ್ನೇನಿದ್ದರೂ ಪ್ರಶಸ್ತಿ ಸ್ವೀಕಾರ ಬಾಕಿ ಉಳಿದಿದೆ.

ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಗತವೈಭವ ಚಿತ್ರವನ್ನು ನನ್ನ ಬ್ಯಾನರ್ನಡಿ ಮಾಡಬೇಕು ಎಂದುಕೊಂಡಿದ್ದೆ, ಬಜೆಟ್ ಜಾಸ್ತಿ ಆಗುತ್ತೆ ಅಂತ ಸ್ಕ್ರಿಪ್ಟ್ ಅನ್ನು ಬೀರು ನಲ್ಲಿ ಇಟ್ಟಿದೆ. ದುಶ್ಯಂತ್ ಮೇಕಿಂಗ್ ವಿಡಿಯೋ ನೋಡಿ ಸಿನಿಮಾ ಮಾಡಿದ್ದೇನೆ. ಕೆಲವು ಸಿನಿಮಾ ಪ್ರಚಾರ ಮಾಡಿ ತೆರೆಗೆ ಬರುತ್ತವೆ. ಚಿತ್ರ ಬಿಡುಗಡೆಯಾದ ಮೇಲೆ ಪ್ರಚಾರವಾಗುತ್ತದೆ.ಪ್ರತಿ ಸನ್ನಿವೇಶ ಅತ್ಯುತ್ತಮವಾಗಿ ಮೂಡಿ ಬಂದಿದೆ.ಯಾವ ನಿರ್ದೇಶಕರು ಹೇಳಲ್ಲ ನಾನು ಹೇಳುತ್ತಿದ್ದೇನೆ ನಟಿ ಆಶಿಕಾ ರಂಗನಾಥ್ ನನ್ನ ತಂಗಿ, ರೀತಿ ಚಿತ್ರದಲ್ಲಿ ಉತ್ತಮವಾಗಿ ನಟಿಸಿದ್ದಾರೆ.ಚಿತ್ರದಲ್ಲಿ ಎಂಟರ್ಟೈನ್ಮೆಂಟ್, ಎಮೋಷನ್ ಎಲ್ಲವೂ ಇದೆ ಎಂದರು
ನಟಿ ಆಶಿಕಾ ರಂಗನಾಥ್ ಮಾತನಾಡಿ, ಗತವೈಭವ ತುಂಬಾ ವಿಶೇಷವಾದ ಸಿನಿಮಾ. ತಂಜಾವೂರಿನಲ್ಲಿ ಚಿತ್ರೀಕರಣ ಮಾಡುವಾಗ ಕೇಳಿದ ಕಥೆ. ಪ್ರತಿಯೊಬ್ಬ ಕಲಾವಿದರು ಈ ರೀತಿ ಪಾತ್ರ ಸಿಗಲು ಅದೃಷ್ಟ ಮಾಡಿರಬೇಕು. ಚಿತ್ರದಲ್ಲಿ ನಾಲ್ಕು ಲುಕ್ ಇದೆ. ಗತವೈಭವದಲ್ಲಿ ನಟಿಸಿರುವುದು ಬೇರೆಯದ್ದೇ ಅನುಭವ. ಹೋಮ್ ಪ್ರೊಡಕ್ಷನ್ಸ್ ನಲ್ಲಿ ಕೆಲಸ ಮಾಡಿದೆ ಅನುಭವ. ತೆರೆಮೇಲೆ ವೈಭವವಾಗಿ ಕಾಣಿಸಲು ಅದ್ಧೂರಿಯಾಗಿ ಚಿತ್ರೀಕರಣ ಮಾಡಲಾಗಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿದ ಅನುಭವವಿದೆ. ನಾನು ಸೀನಿಯರ್, ದುಶ್ಯಂತ್ ಜೂನಿಯರ್, ಹಾಗಿದ್ದರೂ ಅವರೊಬ್ಬ ಅದ್ಭುತ ನಟ ಎಂದು ಹೇಳಿದರು.
ಛಾಯಾಗ್ರಾಹಕ ವಿಲಿಯಂ ಡೇವಿಡ್ ಮಾತನಾಡಿ ನಾಲ್ಕು ಚಿತ್ರಗಳಿಗೆ ತೆಗೆದುಕೊಳ್ಳುವ ಸಮಯವನ್ನು ಗತವೈಭವ ಚಿತ್ರಕ್ಕೆ ತೆಗೆದುಕೊಂಡಿದೆ ಎಂದರು

