“ಹಾಲಿವುಡ್” ಚಿತ್ರೋತ್ಸವಕ್ಕೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ `ಮಹಾಕವಿ’ ಚಿತ್ರ
ಪ್ರೊಪೆಸರ್ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ `ಮಹಾಕವಿ’ ಕನ್ನಡ ಚಿತ್ರ ಹಾಲಿವುಡ್ ಗೋಲ್ಡನ್ ಏಜ್ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಪ್ರವೇಶ ಪಡೆದಿದೆ. ಈ ಸ್ಪರ್ಧೆಯಲ್ಲಿ ಈಗ ಸೆಮಿಫೈನಲ್ ಹಂತಕ್ಕೆ ಆಯ್ಕೆಯಾಗಿದೆ. ಈ ಚಿತ್ರವನ್ನು ಬೆಳಗಾವಿಯ ಪ್ರಭು ಯತ್ನಟ್ಟಿ ನಿರ್ಮಿಸಿದ್ದಾರೆ

`ಮಹಾಕವಿ’ ಚಿತ್ರ ಹತ್ತನೇ ಶತಮಾನದ ಕನ್ನಡದ ಆದಿಕವಿ ಪಂಪ ರಚಿಸಿರುವ ಕಾವ್ಯಗಳನ್ನು ಆಧರಿಸಿ, ಕವಿಯ ಆಶಯಗಳನ್ನು ಅಭಿವ್ಯಕ್ತಿಸಿರುವ ಚಿತ್ರವಾಗಿದೆ. ಪಂಪಕವಿ ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲು ಜಾತಿ ವ್ಯವಸ್ಥೆ ವಿರೋಧಿಸಿದ್ದಲ್ಲದೆ ಪರ್ಯಾಯ ಪರಿಕಲ್ಪನೆ ಕೂಡ ನೀಡಿದ್ದು ಚರಿತ್ರಾರ್ಹ ಸಂಗತಿಯಾಗಿದೆ.
ರಾಜಪ್ರಭುತ್ವದ ಆಶ್ರಯದಲ್ಲಿದ್ದು ಕೂಡ ತನ್ನ ಸೃಜನಶೀಲ ಸ್ವಾತಂತ್ರ್ಯ ಬಿಟ್ಟುಕೊಡದ ಅಭಿವ್ಯಕ್ತಿ ವಿಧಾನವನ್ನು ಮೊಟ್ಟ ಮೊದಲಿಗೆ ನೀಡಿದ ಕೀರ್ತಿಯೂ ಪಂಪ ಕವಿಗೆ ಸಲ್ಲಬೇಕು. ಪ್ರಭುತ್ವದ ಎದುರು ಪ್ರತಿನಾಯಕತ್ವದ ಪರಿಕಲ್ಪನೆಗೂ ಕಾರಣವಾದ ಪಂಪ ಕವಿಯ ಈ ಎಲ್ಲ ಆಶಯಗಳನ್ನು `ಮಹಾಕವಿ’ ಕನ್ನಡ ಚಿತ್ರ ಪ್ರತಿನಿಧಿಸುತ್ತದೆ.
ಪಂಪ ಕವಿಯ ಪಾತ್ರವನ್ನು ಬಹುಭಾಷಾ ಕಲಾವಿದರಾದ ಕನ್ನಡದ ಕಿಶೋರ್ ನಿರ್ವಹಿಸಿದ್ದು ತಾರಾಗಣದಲ್ಲಿ ಸುಂದರರಾಜ್, ಅನುಷಾರೈ, ಕುಮಾರ್ ಗೋವಿಂದ್, ಪ್ರಮೀಳಾ ಜೋಷಾಯ್, ಶೀಲಾ, ಆಕಾಂಕ್ಷ್ ಬರಗೂರ್, ಸುಂದರರಾಜ ಅರಸು, ಹನುಮಂತೇಗೌಡ, ರಾಘವ್, ರಾಜಪ್ಪ ದಳವಾಯಿ, ಶಾಂತರಾಜ್, ಬಾಲಕೃಷ್ಣ ಬರಗೂರು, ಚಲಪತಿ ಮುಂತಾದವರು ಇದ್ದಾರೆ.

ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ತ್ರಿಭುವನ್ ನೃತ್ಯ ಸಂಯೋಜನೆ, ಹೊಸ್ಮನೆ ಮೂರ್ತಿ ಕಲಾ ವಿನ್ಯಾಸ, ನಟ್ರಾಜ್ ಶಿವು ಮತ್ತು ಪ್ರವೀಣ್ ಸಹನಿರ್ದೇಶನವಿರುವ `ಮಹಾಕವಿ’ ಚಿತ್ರಕ್ಕೆ ಬರಗೂರು ರಾಮಚಂದ್ರಪ್ಪ ಚಿತ್ರಕತೆ, ಸಂಭಾಷಣೆ, ಗೀತೆರಚನೆಯೊಂದಿಗೆ ನಿರ್ದೇಶನ ಮಾಡಿದ್ದಾರೆ


