ಭಕ್ತಿ ಭಾವ ಸಂಗಮದ ‘ರಾಜರ ಭಾಗ್ಯವಿದು’ ಧ್ವನಿಸುರುಳಿ ಬಿಡುಗಡೆ
ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ, ವೈದ್ಯಕೀಯ ನೆರವು, ಸಾರ್ವಜನಿಕ ಆರೋಗ್ಯ ಜಾಗೃತಿಯಂಥ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಶ್ರೀ ಹಯವದನ ಫೌಂಡೇಶನ್ ಇದೀಗ ಭಾವಸಮೀರ ಶ್ರೀ ವಾದಿರಾಜ ಸ್ವಾಮಿಗಳ ವಿರಚಿತ, ಶ್ರೀಮತಿ ದಿವ್ಯಾಗಿರಿಧರ್ ಅವರ ರಾಗಸಂಯೋಜನೆ ಮತ್ತು ಗಾಯನದ 9 ಭಕ್ತಿಗೀತೆಗಳ “ರಾಜರ ಭಾಗ್ಯವಿದು” ಹಾಗೂ ಕು.ಬೃಂದಾ ಹಾಗೂ ಪ್ರಣತಿ ಕಟ್ಟೆ ಅವರ ಕಂಠದಲ್ಲಿ ಮೂಡಿಬಂದಿರುವ “ದಶಾವತಾರ ಸ್ತುತಿ” ಎಂಬ ಭಕ್ತಿಭಾವ ತುಂಬಿದ ಎರಡು ವಿಡಿಯೋ ಆಲ್ಬಂಗಳನ್ನು ಹೊರತಂದಿದೆ

ಜಯನಗರದ ಜಯರಾಮ ಸೇವಾ ಮಂಡಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಈ ಎರಡು ದೃಶ್ಯಸಹಿತ ಧ್ವನಿಸುರುಳಿಯನ್ನು ಲೋಕಾರ್ಪಣೆ ಮಾಡಿದರು. ಜತೆಗೆ ಇದರ ಮುದ್ರಿತ ಕೃತಿಯನ್ನೂ ಸಹ ಬಿಡುಗಡೆ ಮಾಡಿದರು.
ನಂತರ ಶ್ರೀಗಳು ಆಶೀರ್ವಚನ ನೀಡುತ್ತ ಶುದ್ದವಾದ ಭಕ್ತಿಯಿಂದ ಮಾತ್ರವೇ ಭಗವಂತನ ಅನುಗ್ರಹ ಹೊಂದಲು ಸಾಧ್ಯ. ಲಕ್ಷಲಕ್ಷ ಸಂಖ್ಯೆಯಲ್ಲಿ ಹರಿದಾಸರ ಕೀರ್ತನೆಗಳಿವೆ. ಭಗವಂತನ ಕಥೆಗಳನ್ನು, ವೇದ ಪುರಾಣಗಳನ್ನು ಶ್ರೀಸಾಮಾನ್ಯರು ಕೂಡ ಅರ್ಥ ಮಾಡಿಕೊಳ್ಳಬೇಕೆಂದು ಹರಿದಾಸರು ಕನ್ನಡದಲ್ಲಿಯೂ ಸಹ ಕೀರ್ತನೆಗಳನ್ನು ಹಾಡಿದ್ದಾರೆ.
ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ಸಹ ಶ್ರೀವಾದಿರಾಜರ ಕೃತಿಗಳಿವೆ. ಅವರಿಗೆ ಎಲ್ಲ ಭಾಷೆಗಳ ಮೇಲೆ ಹಿಡಿತವಿತ್ತು. ಭಕ್ತಿ ಸಮರ್ಪಣೆಗೆ ಭಾಷೆ ಅಡ್ಡಿಯಾಗಬಾರದು ಎನ್ನುವುದು ಅವರ ಧ್ಯೇಯ.
ಇದೀಗ ಪ್ರವೀಣ್ ಕಟ್ಟಿ ಅವರ ತಮ್ಮ ಹಯವದನ ಫೌಂಡೇಶನ್ ಮೂಲಕ ದೊಡ್ಡದೊಂದು ಕಾರ್ಯಕ್ಕೆ ಮುಂದಾಗಿದ್ದಾರೆ ಎಂದಿದ್ದಾರೆ.

ರಾಜರ ಭಾಗ್ಯವಿದು ಎಂಬ 9 ಹಾಡುಗಳ ಧ್ವನಿಸುರುಳಿಯನ್ನು ಹೊರತಂದಿದ್ದಾರೆ. ಈ 9 ಹಾಡುಗಳೂ ತುಂಬಾ ಅಪರೂಪವಾದವು.ಅಲ್ಲದೆ ವಾದಿರಾಜರು ಆರಾಧ್ಯದೈವ ಹಯಗ್ರೀವವನ್ನು ಆರಾಧಿಸುತ್ತ ಹಾಡಿದ ಸ್ತೋತ್ರವನ್ನು ಅವರ ಮಕ್ಕಳಾದ ಬೃಂದಾ ಹಾಗೂ ಪ್ರಣತಿ ಕಟ್ಟಿ ಅದ್ಭುತವಾಗಿ ಹಾಡಿದ್ದಾರೆ. ಈ ಸಂಸ್ಥೆ ಇಂಥ ಹಲವಾರು ಕೃತಿಗಳನ್ನು ಹೊರತರಲಿ, ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

