ಕನ್ನಡದಲ್ಲಿ ವಿಭಿನ್ನ ಬಗೆಯ ಚಿತ್ರ “ಚಿಕ್ಕಿಯ ಮೂಗುತಿ’ : ಟೀಸರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್
ಕನ್ನಡದಲ್ಲಿ ಇತ್ತೀಚೆಗೆ ಹೊಸ ಹೊಸ ವಿಷಯಗಳನ್ನುಟ್ಟಿಕೊಂಡು ಸಿನಿಮಾ ಮಾಡಲಾಗುತ್ತಿದೆ. ಈ ಸಾಲಿಗೆ ಹೊಸ ಸೇರ್ಪಡೆ “ ಚಿಕ್ಕಿಯ ಮೂಗುತಿ”. ಚಿತ್ರದ ಟೀಸರ್ ಅನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿ ಮಹಿಳಾ ಮಣಿಗಳ ಪ್ರಯತ್ನಕ್ಕೆ ಶುಭ ಹಾರೈಸಿದ್ದಾರೆ.

ದೇವಿಕಾ ಜನಿತ್ರಿ ಅವರ ಕಾದಂಬರಿ ಆಧರಿಸಿ ಲೇಖಕಿಯೇ ನಿರ್ದೇಶನ ಮತ್ತು ನಿರ್ಮಾಣ ಮಾಡಿರುವುದು ಚಿತ್ರದ ವಿಶೇಷ. ಜೊತೆಗೆ ಚಿತ್ರದಲ್ಲಿ ಬಹುತೇಕ ಮಹಿಳಾ ಕಲಾವಿದರು ನಟಿಸಿರುವುದು ಚಿತ್ರದ ಮತ್ತೊಂದು ಹೆಚ್ಚುಗಾರಿಕೆ.
ಲವ್ ಸ್ಟೋರಿ, ಕ್ರೈಮ್, ಹಾರರ್ ಸಿನಿಮಾಗಳ ನಡುವೆ ಆಗಾಗ ಚಿತ್ರರಂಗದಲ್ಲಿ ವಿಭಿನ್ನ, ವಿನೂತನ ಕಾನ್ಸೆಪ್ಟ್ನ ಚಿತ್ರಗಳು ಸಹ ಸದ್ದು ಮಾಡುತ್ತಿರುತ್ತವೆ. ಇದೀಗ ಮತ್ತೊಂದು ಹೊಸ ಬಗೆಯ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ದೇವಿಕಾ ಜನಿತ್ರಿ ನಿರ್ದೇಶನದ ಚಿಕ್ಕಿಯ ಮೂಗುತಿ ಸಿನಿಮಾ ಸದ್ಯ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಮೂಲಕ ಕನ್ನಡಕ್ಕೆ ಮತ್ತೊಬ್ಬ ಮಹಿಳಾ ನಿರ್ದೇಶಕಿ ಸಿಕ್ಕಂತಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಹೊಸ ನಿರ್ದೇಶಕಿಗೆ ಸಾಥ್ ಕೊಟ್ಟಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್ . ಅಪ್ಪು ಹಾಗೂ ಅಶ್ವಿನಿಯವರ ಆತ್ಮೀಯರು ಆಗಿರುವ ದೇವಿಕಾ ನಿರ್ದೇಶದ ಮೊದಲ ಸಿನಿಮಾ ಇದಾಗಿದೆ.
ಚಿಕ್ಕಿಯ ಮೂಗುತಿ ಕಾದಂಬರಿ ಆಧಾರಿತ ಸಿನಿಮಾವಾಗಿದ್ದು ವಿಶೇಷ ಎಂದರೆ ದೇವಕಿ ಜನಿತ್ರಿ ಅವರೇ ಬರೆದಿದ್ದ ಕಾದಂಬರಿ ಇದಾಗಿದೆ. ಇನ್ನು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಜೊತೆಗೆ ಸಿನಿಮಾ ಸಂಖ್ಯೆಗಳಿಗಿಂತ ಮಾಡುವ ಪ್ರತಿಯೊಂದು ಸಿನಿಮಾದಲ್ಲಿಯೂ ಹೊಸತನದ ಪಾತ್ರ ಮಾಡುವ ಮೂಲಕ ನಟಿ ಶ್ವೇತಾ ಶ್ರೀವಾತ್ಸವ ಗಮನ ಸೆಳೆಯುತ್ತಿದ್ದಾರೆ. ಈ ಚಿತ್ರದಲ್ಲಿಯೂ ವಿಭಿನ್ನ ಪಾತ್ರದ ಮೂಲಕ ಮೋಡಿ ಮಾಡಲು ಮುಂದಾಗಿದ್ದಾರೆ.

ಹಿರಿಯ ನಟಿ ತಾರಾ ಅನುರಾಧ ಮಾತನಾಡಿ ‘ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದಂತೆ ಈ ಸಿನಿಮಾದಲ್ಲೂ ಮಹಿಳೆಯರಿಗೆ ಮೀಸಲಾತಿ ಇದೆ. ಎಲ್ಲರೂ ಹೆಣ್ಣು ಮಕ್ಕಳೆ ಸೇರಿಕೊಂಡು ಮಾಡಿರುವ ಸಿನಿಮಾ, ಅದ್ಭತವಾಗಿ ಸಿನಿಮಾ ಮೂಡಿಬಂದಿ. ದೇವಿಕಾ ಅವರ ಮೊದಲು ಸಿನಿಮಾ ಅಂತ ಅನಿಸುವುದೇ ಇಲ್ಲ, ಉತ್ತಮವಾಗಿ ಮೂಡಿಬಂದಿದೆ’ ಎಂದು ಹೇಳಿದರು. ಇನ್ನು ನಟಿ ಶ್ವೇತಾ ಮಾತನಾಡಿ, ‘ಮಗುವಿಗೆ ಜನ್ಮ ನೀಡಿದ ಬಳಿಕ ನಟನೆ ಮಾಡಿದ ಮೊದಲ ಸಿನಿಮಾ’ ಎಂದು ಹೇಳಿದರು. ಭವಾನಿ ಪ್ರಕಾಶ್ ಕೂಡ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಅಂದಹಾಗೆ ‘ಚಿಕ್ಕಿಯ ಮೂಗುತಿ’ ಹೆಸರೇ ಹೇಳುವ ಹಾಗೆ ಇದೊಂದು ಮಹಿಳಾ ಪ್ರಧಾನ ಸಿನಿಮಾ. ಹೆಣ್ಣು ಮಕ್ಕಳ ಹೋರಾಟ, ಶೋಷಣೆ ಬಗ್ಗೆ ಇರುವ ಚಿತ್ರ ಇದಾಗಿದೆ. ಹಿರಿಯ ನಟಿ ತಾರಾ ಅನುರಾಧಾ, ಶ್ವೇತಾ ಶ್ವೀವಾತ್ಸವ್, ಭವಾನಿ ಪ್ರಕಾಶ್, ಅವಿನಾಶ್, ತಬಲ ನಾಣಿ, ರಂಗಾಯಣ ರಘು, ಭರತ್ ಬೋಪಣ್ಣ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ವಿಶೇಷ ಎಂದರೆ ಈ ಸಿನಿಮಾಗೆ ಹೆಣ್ಣು ಮಕ್ಕಳೇ ಶಕ್ತಿ ಎಂದರೆ ತಪ್ಪಾಗಲ್ಲ. ಯಾಕೆಂದರೆ ನಿರ್ದೇಶಕಿ ಸೇರಿದಂತೆ ಬಹುತೇಕರು ಹೆಣ್ಣು ಮಕ್ಕಳೇ ಸೇರಿಕೊಂಡು ಮಾಡಿರುವ ಸಿನಿಮಾ ಇದಾಗಿದೆ.

ನಿರ್ದೇಶಕಿ ದೇವಿಕಾ ಅವರು ಈ ಮೊದಲು ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಅನೇಕ 40ಕ್ಕೂ ಅಧಿಕ ಕಾದಂಬರಿಗಳನ್ನು ಬರೆದಿದ್ದಾರೆ. ಇದೀಗ ಅವರ ಒಂದು ಕಾದಂಬರಿ ಚಿಕ್ಕಿಯ ಮೂಗುತಿ ಸಿನಿಮಾವಾಗಿ ತೆರೆ ಮೇಲೆ ಬರಲು ಸಜ್ಜಾಗಿದೆ. ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿಕ್ಕಿಯ ಮೂಗುತಿ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ. ಸಿನಿಮಾದ ಟೀಸರ್ ಇದೇ ತಿಂಗಳು 20ಕ್ಕೆ ಪಿಆರ್ಕೆ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಲಿದೆ.
ಚಿಕ್ಕಿಯ ಮೂಗುತಿ ಚಿತ್ರ ಜನಿತ್ರಿ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗಿದೆ, ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ, ವೆಂಕಟೇಶ್ ಅವರು ಕ್ಯಾಮೆರಾ ವರ್ಕ್ ಜೊತೆಗೆ ಎಡಿಟಿಂಗ್ ಕೂಡ ಮಾಡಿದ್ದಾರೆ.

