ಜೂನ್ 12 ರಂದು ‘ ಮೃತ್ಯುದೇವತೆ ‘ ಚಿತ್ರ ತೆರೆಗೆ
ನವೀನ್ ಮಹಾದೇವ್ ನಿರ್ಮಾಣ ಹಾಗೂ ನಿರ್ದೇಶನದ ‘ಮೃತ್ಯುದೇವತೆ’ ಚಿತ್ರ ಈ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.

ಸಮಾಜದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಆಕೆ ಯಾವರೀತಿ ಟ್ರ್ಯಾಪ್ ಅಗಿ ನಯವಂಚಕರು ಜಾಲದಲ್ಲಿ ಸಿಲುಕಿಕೊಳ್ಳುತ್ತಾಳೆ, ನಂತರ ಅದರಿಂದ ಹೊರಬರಲು ಆಕೆ ಹೇಗೆಲ್ಲಾ ಪ್ರಯತ್ನಿಸುತ್ತಾಳೆ, ಕಡೆಗೆ ಅಂಥ ದುಷ್ಟರನ್ನು ಶಿಕ್ಷಿಸಲು ಯಾವ ಅವತಾರ ಎತ್ತುತ್ತಾಳೆ ಎಂಬ ಕಾನ್ಸೆಪ್ಟ್ ಇಟ್ಡುಕೊಂಡು ನವೀನ್ ಮಹಾದೇವ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ದುರುಳರ ವಂಚನೆಗೆ ಒಳಗಾದ ಮೂವರು ಹೆಣ್ಣು ಮಕ್ಕಳ ಸುತ್ತ ನಡೆಯುವ ಮಹಿಳಾ ಪ್ರಧಾನ ಕಥಾಹಂದರ ಈ ಚಿತ್ರದಲ್ಲಿದೆ.
ನವೀನ್ ಮಹಾದೇವ್ ಅವರು ನಿರ್ದೇಶನದ ಜತೆಗೆ ಪ್ರಮುಖ ಪಾತ್ರದಲ್ಲೂ ಸಹ ಕಾಣಿಸಿಕೊಂಡಿದ್ದಾರೆ.ಹಿರಿಯನಟಿ ವಿನಯ ಪ್ರಸಾದ್, ಸಾರಿಕಾರಾವ್, ಡಯಾನಾ, ಹಿಮಶ್ರೀ, ನವೀನ್ ಮಹದೇವ್, ಮಾಹೀನ್, ಪವನ್ ಶೆಟ್ಟಿ, ಸೂರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈಗಾಗಲೇ ಈ ಚಿತ್ರದ ಟ್ರೈಲರ್, ಹಾಡುಗಳು ಅತಿ ಹೆಚ್ಚು ವೀಕ್ಷಣೆಯಾಗುವ ಮೂಲಕ ವೈರಲ್ ಆಗಿವೆ.ಕೇವಲ ಮನೋರಂಜನೆಗಾಗಿ ಅಲ್ಲ, ಬದಲಾವಣೆ ಆಗಬೇಕು. ಎಷ್ಟೋ ಜನರಿಗೆ ಪ್ರೇರಣೆಯಾಗುತ್ತದೆ. ಹೆಣ್ಣುಮಕ್ಕಳ ಜತೆ ತಂದೆ, ತಾಯಿ ಬಂದು ಸಿನಿಮಾ ನೋಡಬೇಕು. ಹೆಣ್ಣಿನ ಸಹನೆಯ ಕಟ್ಟಿ ಒಡೆದಾಗ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ ಎಂದು ನಿರ್ದೇಶಕರು ಹೇಳಿದ್ದಾರೆ.
ನಿರ್ದೇಶಕರ ಪತ್ನಿ ಸರಸ್ವತಿ, ಚಿತ್ರ ನಿರ್ಮಿಸಿದ್ದಾರೆ. ಅನಿರುಧ್ ಛಾಯಾಗ್ರಹಣ, ಶಿವಪ್ರಸಾದ್ ಸಂಗೀತ ನಿರ್ದೇಶನ, ರಘು ನೃತ್ಯ ನಿರ್ದೇಶನ, ಅಲ್ಟಿಮೇಟ್ ಶಿವು ಹಾಗೂ ಚಿಟ್ಟ ಜಾಧವ್ ಸಾಹಸ ನಿರ್ದೇಶನ ಮತ್ತು ಮಂಜು ವಿಕ್ರಂ ಸಂಕಲನ, ಗಣೇಶ್ ಕಲಾನಿರ್ದೇಶನ ಚಿತ್ರಕ್ಕಿದೆ.

