“ಕರಾವಳಿ” ಚಿತ್ರಕ್ಕೆ ನಟ ಪ್ರಜ್ವಲ್ ದೇವರಾಜ್‍ಗೆ 1.25 ಕೋಟಿ ಸಂಭಾವನೆ: ಟ್ರೈಲರ್ ಬಿಡುಗಡೆಗೆ ಗೈರು – ನಿರ್ದೇಶಕ ಗುರುದತ್ ಗಾಣಿಗ
“ಕರಾವಳಿ” ಚಿತ್ರಕ್ಕೆ ನಟ ಪ್ರಜ್ವಲ್ ದೇವರಾಜ್ ಅವರಿಗೆ ಒಂದೂಕಾಲು ಕೋಟಿ ಸಂಭಾವಣೆ ನಿಗಧಿ ಮಾಡಿ ಒಂದು ಕೋಟಿ ಪಾವತಿಸಿದ್ದೇನೆ, ಇನ್ನೂ 25 ಲಕ್ಷ ಕೊಡಬೇಕಿದೆ, ಹೀಗದ್ದರೂ ಅವರು ಚಿತ್ರದ ಟ್ರೈಲರ್ ಬಿಡುಗಡೆಗೆ ಗೈರುರಾಜರಾಗಿದ್ದಾರೆ. ಜೊತೆಗೆ ಅವರ ಜೊತೆಗಿರುವ ಹುಡುಗರು ಕಾರ್ಯಕ್ರಮಕ್ಕೆ ಬಂದು ಗಲಾಟೆ ಮಾಡಿದ್ದಾರೆ. ಚಿತ್ರೀಕರಣಕ್ಕೆ ಪ್ರಜ್ವಲ್ ಜೊತೆಗೆ ಬಂದಾಗ ಹುಡುಗರಿಗೂ ಸಂಭಾವನೆ ನೀಡಿದ್ದೇನೆ. ಈಗ ಯಾಕೆ ಗಲಾಟೆ ಮಾಡುತ್ತಾರೆ ಅರ್ಥವಾಗುತ್ತಿಲ್ಲ ಎಂದರು ಕರಾವಳಿ ಚಿತ್ರದ ನಿರ್ದೇಶಕ- ನಿರ್ಮಾಪಕ ಗುರುದತ್ ಗಾಣಿಗ.

ಕರಾವಳಿ ಭಾಗದ ಜನಪ್ರಿಯ ಕ್ರೀಡೆ ಕಂಬಳದ ಹಿನ್ನೆಲೆ ಆಧರಿಸಿದ ಚಿತ್ರ “ ಕರಾವಳಿ” ಜುಲೈ 24 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ, ಚಿತ್ರದ ಟ್ರೈಲರ್‍ಗೆ ಕರಾವಳಿ ಭಾಗದ ಭಾಷೆ ಹೊಂದಿಕೆ ಆಗುವುದಿಲ್ಲ ಎನ್ನುವ ಕಾರಣಕ್ಕೆ ಪ್ರಜ್ವಲ್ ದೇವರಾಜ್ ಪಾತ್ರಕ್ಕೆ ಅವರಿಂದ ಡಬ್ಬಂಗ್ ಮಾಡಿಸಿಲ್ಲ, ಅವರ ಪಾತ್ರಕ್ಕೆ ಕಿರುತೆರೆ ಕಲಾವಿದ ಕಾರ್ತಿಕ್ ಸಾಮಗ ಧ್ವನಿ ನೀಡಿದ್ದಾರೆ ಅದ್ಬುತವಾಗಿ ಮೂಡಿಬಂದಿದೆ. ಪಾತ್ರಕ್ಕೆ ಯಾರ ಬಳಿ ಡಬ್ಬಿಂಗ್ ಮಾಡಿಸಬೇಕು ಎನ್ನುವುದು ನಿರ್ದೇಶಕನ ಆಯ್ಕೆ ಎಂದರು
ಟ್ರೈಲರ್ ಬಿಡುಗಡೆ ವೇಳೆ ಗಲಾಟೆ,ಗದ್ದಲ ನಡೆದ ಬಳಿಕ ಮಾತಿಗಿಳಿದ ಗುರುದತ್ ಗಾಣಿಗ, ನಟ ಪ್ರಜ್ವಲ್ ದೇವರಾಜ್ ಟ್ರೈಲರ್ ಬಿಡುಗಡೆ ಹಿಂದಿನ ದಿನದವರೆಗೂ ಬರುತ್ತೇನೆ ಎಂದಿದ್ದರು, ನಮ್ಮ ಕಡೆ 100 ಹುಡುಗರು ಬರ್ತಾರ ಅವರಿಗೆ ಪಾಸ್ ಬೇಕು ಅಂದಿದ್ದರು, ಈಗ ನೋಡಿದರೆ ಗಲಾಟೆ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಪ್ರಜ್ವಲ್ ಪೋನ್ ಪಿಕ್ ಮಾಡಿಲ್ಲ, ನನ್ನ ಯಾವುದೇ ಸಂದೇಶಕ್ಕೆ ಪ್ರತಿಕ್ರಿಯೆ ನೀಡುತ್ತಿಲ್ಲ, ಹೀಗಾಗಿ ನನ್ನ ಟೀಮ್ ಅವರನ್ನು ಸಂಪರ್ಕಿಸುತ್ತಿದ್ದರೂ ಅವರೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದಿದ್ದಾರೆ.
ಸಂಭಾವನೆ ವಿಷಯದಲ್ಲಿ ಗೊಂದಲವಿದ್ದರೆ ಕುಳಿತು ಬಗೆಹರಿಸಿಕೊಳ್ಳಬಹುದಿತ್ತು. ಆದರೆ ಈ ರೀತಿಯ ವರ್ತನೆ ಸರಿಯಲ್ಲ, ಚಿತ್ರದಲ್ಲಿ ಪ್ರಮುಖ ಪಾತ್ರ ಬರುತ್ತದೆ ಎಂದು ನಟ ಪ್ರಜ್ವಲ್‍ಗೆ ಮಾಹಿತಿ ನೀಡಲಾಗಿತ್ತು. ಪ್ರಮುಖ ಪಾತ್ರಕ್ಕೆ ರಾಜ್ ಬಿ ಶೆಟ್ಟಿ ಅವರನ್ನು ಹಾಕಿಕೊಳ್ಳುವಂತೆ ಕೆವಿಎನ್ ಪ್ರೊಡಕ್ಷನ್‍ನ ವೆಂಕಟ್ ನಾರಾಯಣ್ ಹೇಳಿದರು, ಹಾಗಾಗಿ ರಾಜ್ ಶೆಟ್ಟಿ ಅವರನ್ನು ಸಂಪರ್ಕಿಸಿದವು, ಅವರೂ ಒಪ್ಪಿಕೊಂಡು ಚಿತ್ರದಲ್ಲಿ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ ಬಂದ ನಂತರ ಅವರಿಗೆ ಇರುಸು ಮುರುಸಾಗಿದೆಯೋ ನನಗೆ ಗೊತ್ತಿಲ್ಲ ಎಂದು ಹೇಳಿದರು

ಕರಾವಳಿ ಚಿತ್ರ ನೋಡಿ ನಟ ಪ್ರಜ್ವಲ್ ದೇವರಾಜ್ ಖುಷಿಯಾಗಿದ್ದಾರೆ, ನನ್ನ ಚಿತ್ರ ಜೀವನದಲ್ಲಿ ಉತ್ತಮ ಚಿತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಚಿತ್ರ ಬಿಡುಗಡೆಗೆ ಹತ್ತಿರ ಬಂದಾಗ ಟ್ರೈಲರ್ ಬಿಡುಗಡೆಗೆ ಬಂದಿಲ್ಲದಿರುವುದು ನಿರ್ಮಾಪಕನಾಗಿ ಬೇಸರ ತರಿಸಿದೆ, ಚಿತ್ರದ ಕಥೆ ಸೌಂಡ್ ಮಾಡಬೇಕು ಆದರೆ ಸಿನಿಮಾ ಆಚೆಗಿನ ವಿಷಯಗಳು ಸೌಂಡ್ ಮಾಡಬಾರದು, ಇದು ಚಿತ್ರದ ಮೇಲೆ ಪರಿಣಾಮ ಬೀರಲಿದೆ ಎಂದರು
ಕಂಬಳದ ಪ್ರಪಂಚ ಬೆಂಬಲ :
ಕರಾವಳಿ ಭಾಗದ ಕಂಬಳ ಕಥೆಯನ್ನು ಆಧರಿಸಿ ಕರಾವಳಿ ಸಿನಿಮಾ ಮಾಡಲಾಗಿದೆ, ಹೀಗಾಗಿ ಕಂಬಳ ನಡೆಸುವ ಮತ್ತು ಆಯೋಜಿಸುವ ಹಾಗು ಅದರಲ್ಲಿ ಭಾಗಿಯಾಗುವ ಇಡೀ ಪ್ರಪಂಚ ಬೆಂಬಲ ಸೂಚಿಸಿದೆ,ಇದು ನಮಗೆ ಇನ್ನೊಂದಿಷ್ಟು ಶಕ್ತಿ ಬಂದಿದೆ. ಚಿತ್ರ ಉತ್ತಮವಾಗಿ ಮೂಡಿಬಂದಿದ್ದು ಇದರ ಹಿಂದೆ ಎಲ್ಲರ ಶ್ರಮ ಇದೆ ಎಂದರು ನಿರ್ದೇಶಕ, ನಿರ್ಮಾಪಕ ಗುರುದತ್ ಗಾಣಿಗ.
ಚಿತ್ರದಲ್ಲಿ ನೂರಾರು ಕೋಣಗಳನ್ನು ಬಳಸಲಾಗಿದೆ, ಅದರ ಮೇಕಿಂಗ್ ಸೇರಿದಂತೆ ವಿವಿಧ ವಿಷಯಗಳಿಂದ ಚಿತ್ರೀಕರಣ ತಡ ಆಯಿತು, ಇದರಲ್ಲಿ ಪ್ರಜ್ವಲ್ ದೇವರಾಜ್ ಪಾತ್ರ ಏನೂ ಇಲ್ಲ. ಚಿತ್ರೀಕರಣದ ವೇಳೆ ಒಳ್ಳೆಯ ರೀತಿ ಸಹಕಾರ ನೀಡಿದ್ದಾರೆ. 10 ಸೆಕೆಂಡ್ ಕಂಬಳದ ಹಿಂದೆ ಹತ್ತಾರು ವರ್ಷದ ಪರಿಶ್ರಮ, ತ್ಯಾಗ, ಸಮರ್ಪಣಾ ಮನೋಬಾವವಿದೆ. ನಮ್ಮ ಚಿತ್ರದ ಪುಣ್ಯಕ್ಕೆ ಪುಣ್ಯಾತ್ಮರಂತೆ ಬಂದವರು ನಟ ರಾಜ್ ಬಿ ಶೆಟ್ಟಿ ಎಂದು ಗುಣಗಾನ ಮಾಡಿದರು

ನನಗಿಂತ ಸಿನಿಮಾ ದೊಡ್ಡದು: ರಾಜ್ ಬಿ ಶೆಟ್ಟಿ
ನಟ ರಾಜ್ ಬಿ ಶೆಟ್ಟಿ ಮಾತನಾಡಿ, ಚಿತ್ರದ ಗೆಲುವಿಗೆ ಎಲ್ಲರ ಶ್ರಮ ಇರುತ್ತದೆ, ಇದುವರೆಗೂ ಯಾವುದೇ ಕಟೌಟ್ ಹಾಕಿ ಅಂತ ಕೇಳಿಲ್ಲ. ಕೇಳುವ ಪರಿಸ್ಥಿತಿ ಬಂದರೆ ಚಿತ್ರರಂಗ ತ್ಯಜಿಸುತ್ತೇನೆ, ಕರಾವಳಿ ಚಿತ್ರದ ಟ್ರೈಲರ್‍ನಲ್ಲಿ ಅಭಿಮಾನಿಗಳು ನಡೆಸಿದ ದಾಂಧಲೆ ಸರಿಯಲ್ಲ, ಇಂತಹ ಘಟನೆಗಳಿಂದಲೇ ಚಿತ್ರರಂಗ ಉದ್ದಾರ ಆಗುತ್ತಿಲ್ಲ, ಅದಕ್ಕೆ ಇದೂ ಕಾರಣ ಎಂದರು.
ನಟನಿಗಿಂತ ಸಿನಿಮಾ ದೊಡ್ಡದು ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟವನು ನಾನು, ಹೀಗಾಗಿ ಸಿನಿಮಾ ಏನು ಕೇಳುತ್ತದೆಯೋ ಅದನ್ನು ಮಾಡುತ್ತೇನೆ. ನನ್ನ ಬೆಂಬಲಕ್ಕೆ ಯಾರು ಬರಲಿ, ಬಿಡಲಿ, ಚಿತ್ರದಲ್ಲಿ ನನ್ನದು ಕಟೌಟು ಹಾಕಿ ಅಂತ ಕೇಳಲ್ಲ. ಸಿನಿಮಾಗೆ ತಾಕತ್ತು ಇದ್ದರೆ ಓಡುತ್ತದೆ, ಜನರು ಇಷ್ಟಪಡ್ತಾರೆ, ಜನರು ಇಷ್ಟಪಡುವ ಸಿನಿಮಾ ಮಾಡುವುದು ನಮ್ಮ ಉದ್ದೇಶ. ನಟ ಪ್ರಜ್ವಲ್ ವಿವಾದಕ್ಕೆ ಸಂಬಂಧಿಸಿದಂತೆ ಒಳ್ಳೆಯ ವ್ಯಕ್ತಿಗಳ ಜೊತೆ ಮಾತುಕತೆ ಸಿದ್ದ ಎಂದು ಹೇಳಿದರು
ಹಿರಿಯ ಕಲಾವಿದ ಮಿತ್ರ ಮಾತನಾಡಿ 130ಕ್ಕೂ ಅಧಿಕ ಸಿನಿಮಾ ಮಾಡಿದ್ದೇನೆ, ಚಿತ್ರಕ್ಕೆ ಮಾಡಿದ ಡಬ್ಬಿಂಗ್ ಸರಿ ಇಲ್ಲ ಎಂದು ನಿರ್ದೇಶಕ ಗುರುದತ್ ಗಾಣಿಗ ಹೇಳಿದಾಗ ನಿನ್ನೆ ಮೊನ್ನೆ ಒಂದೆರಡು ಸಿನಿಮಾ ಮಾಡಿದವ ಅನುಭವಿ ಕಲಾವಿದನಿಗೆ ಹೇಳುತ್ತಾನೆ ಎನ್ನುವ ಕೋಪ ಮತ್ತು ಬೇಜಾರು ಕೂಡ ಆಗಿತ್ತು. ಒಮ್ಮೆ ಯೋಚಿಸಿ ಪಾತ್ರಕ್ಕೆ ಶರಣಾದೆ, ಮತ್ತೆ ಡಬ್ಬಿಂಗ್ ಮಾಡಿದೆ ಕರಾವಳಿ ಭಾಗದ ಭಾಷೆ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದರು

ಚಿತ್ರದಲ್ಲಿ ನಟಿಸಿರುವ ನಟಿಯರಾದ ಸಂಪದಾ, ಸುಶ್ಮಿತಾ ಭಟ್, ವಿತರಕ ಕೆವಿಎನ್ ಸುಪ್ರೀತ್, ಛಾಯಾಗ್ರಾಹಕ ಅಭಿಮನ್ಯು, ಸಂಗೀತ ನಿರ್ದೇಶಕ ಸಚಿನ್ ಬಸ್ರೂರು, ಕಲಾವಿದ ಸಿದ್ಲಿಂಗು ಶ್ರೀಧರ್ ಮತ್ತಿತರರಿದ್ದರು,
ನಟ ಪ್ರಜ್ವಲ್ ದೇವರಾಜ್ ಗಲಾಟೆಮ ಗದ್ದಲದಲ್ಲಿ ಬಹುತೇಕ ಸಮಯ ಈ ವಿಷಯಕ್ಕೆ ಚರ್ಚೆ ಆದ ಹಿನ್ನೆಲೆಯಲಿ ಹಿರಿಯ ಕಲಾವಿದರು, ಚಿತ್ರದ ತಾಂತ್ರಿಕ ವರ್ಗ ಮಾತನಾಡಲು ಅವಕಾಶ ಸಿಗಲಿಲ್ಲ

ಯಾವುದೇ ಸಿನಿಮಾ ಕಥೆಯಲ್ಲಿ ಗಟ್ಟಿತನವಿದ್ದರೆ ಪ್ರೇಕ್ಷಕ ಅಂತಹ ಸಿನಿಮಾವನ್ನಿ ತಲೆ ಮೇಲೆ ಹೊತ್ತು ಮೆರೆಸಿದ್ದಾನೆ, ಅನಗತ್ಯವಾಗಿ ಪ್ರಚಾರ ಪಡೆಯುವ ಸಿನಿಮಾಗಳನ್ನು ಜನರು ಮೂಸಿಯೂ ನೋಡಿಲ್ಲ ಎನ್ನುವುದಕ್ಕೆ ಅನೇಕ ನಿದರ್ಶನಗಳು ಕಣ್ಣಮುಂದೆ ಇವೆ

