ಶಿಲ್ಪಾ ಗಣೇಶ್ ನಿರ್ಮಾಣದ “ಪಿಚ್ಚರ್” ಚಿತ್ರ ಆಗಸ್ಟ್ 7 ರಂದು ತೆರೆಗೆ
ನಟ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ನಿರ್ಮಾಣದಲ್ಲಿ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಮೂಡಿ ಬಂದಿರುವ ಹಾಗೂ ಸಂದೀಪ ಬೆದ್ರ ನಿರ್ದೇಶನದ “ಪಿಚ್ಚರ್” ಚಿತ್ರ ಆಗಸ್ಟ್ 7 ರಂದು ತೆರೆಗೆ ಬರಲಿದೆ

ನಿತ್ಯಪ್ರಕಾಶ್ ಬಂಟ್ವಾಳ ನಾಯಕನಾಗಿ ನಟಿಸಿರುವ “ಪಿಚ್ಚರ್” ಚಿತ್ರ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಚಿತ್ರದ ಟ್ರೇಲರ್ ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ.

ಕೌಟುಂಬಿಕ, ಕಾಮಿಡಿ ಕಥಾಹಂದರದ ಜೊತೆಗೆ ಮನೋರಂಜನೆಯೇ ಪ್ರಧಾನವಾಗಿರುವ ಚಿತ್ರವನ್ನು ಸಂದೀಪ್ ಬೆದ್ರ ನಿರ್ದೇಶಿಸಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಸಂತೋಷ್ ರೈ ಪಾತಾಜೆ ಹಾಗೂ ಚಂದ್ರಶೇಖರ್ ಕೆ.ಎಸ್ ಅವರ ಛಾಯಾಗ್ರಹಣ, ರಾಜು ಆರ್ಯನ್ ಸಂಕಲನ, ಧನಂಜಯ್.ಬಿ – ಶ್ರೀರಾಜು ನೃತ್ಯ ನಿರ್ದೇಶನ, ರಾಧೇಶ್ – ಸಂತೋಷ್ ಪೂಜಾರಿ ಕಲಾ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿರುವ ಚಿತ್ರಕ್ಕೆ ಮೋಹನ್ ಭಟ್ಕಳ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸ್ಯಾಮುಯೆಲ್ ಅಭಿ ಸಂಗೀತ ನೀಡಿರುವ ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ನಿರ್ಮಾಪಕಿ ಶಿಲ್ಪಾ ಗಣೇಶ್ ಈ ಚಿತ್ರದ “ಗೋಕುಲದ ರಾಧೆ” ಹಾಡನ್ನು ಹಾಡಿರುವುದು ವಿಶೇಷ.

ನಿತ್ಯಪ್ರಕಾಶ್ ಬಂಟ್ವಾಳ “ಪಿಚ್ಚರ್” ಚಿತ್ರದ ನಾಯಕನಾಗಿದ್ದು, ನಾಯಕಿಯಾಗಿ ಅಮೃತ ಸುದು ಅಭಿನಯಿಸಿದ್ದಾರೆ. ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿಕೃಷ್ಣ, ವಜ್ರಧೀರ್ ಜೈನ್, ಸದಾಶಿವ ಅಮಿನ್, ಪ್ರಸನ್ನ ಶೆಟ್ಟಿ ಬೈಲೂರ್, ಸಂದೀಪ್ ಶೆಟ್ಟಿ ಮಾಣಿ, ಉಮೇಶ್ ಪೂಜಾರ್, ಜಯಶೀಲ ಮರೊಲಿ, ರೂಪ ವರ್ಕಾಡಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.


