ನಟ ಆದಿತ್ಯ ಹುಟ್ಟುಹಬ್ಬಕ್ಕೆ `ಟೆರರ್’ ಚಿತ್ರತಂಡದಿಂದ ಹಾಡಿನ ಉಡುಗೊರೆ
ನಟ ಆದಿತ್ಯ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ , ಸಿಲ್ಕ್ ಮಂಜು ನಿರ್ಮಾಣದ, ರಂಜನ್ ಶಿವರಾಮ್ ಗೌಡ ನಿರ್ದೇಶನದಲ್ಲಿ ಆದಿತ್ಯ ನಾಯಕರಾಗಿ ನಟಿಸಿರುವ “ಟೆರರ್” ಚಿತ್ರದ “ಹರ ಹರ ಮಹದೇವ” ಎಂಬ ಹಾಡು ಬಿಡುಗಡೆಯಾಗಿದೆ. ಈ ಮೂಲಕ ಚಿತ್ರತಂಡ ಹುಟ್ಟುಹಬ್ಬದ ಶುಭಾಶಯ ಕೋರಿದೆ.ಶಿವನ ಕುರಿತ ಗೀತೆಯನ್ನು ಡಾ. ವಿ.ನಾಗೇಂದ್ರಪ್ರಸಾದ್ ಬರೆದಿದ್ದು, ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ.
ನಟ ಆದಿತ್ಯ ಮಾತನಾಡಿ ಮೇ 4 ರಂದು ನನ್ನ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಶಿವನ ಕುರಿತಾದ “ಹರಹರ ಮಹದೇವ” ಎಂಬ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನಿರ್ದೇಶಕ ರಂಜನ್ ಉತ್ತಮವಾದ ಕಥೆ ಮಾಡಿಕೊಂಡಿದ್ದಾರೆ. ಶ್ರೀನಗರ ಕಿಟ್ಟಿ, ದೇವರಾಜ್, ಶಶಿಕುಮಾರ್, ಕುಮಾರ್ ಬಂಗಾರಪ್ಪ, ಶರತ್ ಲೋಹಿತಾಶ್ವ, ಧರ್ಮ, ಕೋಟೆ ಪ್ರಭಾಕರ್ ಹೀಗೆ ಹಿರಿಯ ಹಾಗೂ ಅನುಭವಿ ಕಲಾವಿದರ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ಸದ್ಯದಲ್ಲೇ ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದರು.

ನಿರ್ದೇಶಕ ರಂಜನ್ ಶಿವರಾಮ್ ಗೌಡ ಮಾತನಾಡಿ ಈಗಾಗಲೇ ನಮ್ಮ ಚಿತ್ರದ “ರಾವಣ” ಹಾಡು ಕೇಳುಗರ ಮನ ಗೆದ್ದಿದೆ. “ಹರ ಹರ ಮಹದೇವ” ಹಾಡು ಬಿಡುಗಡೆಯಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇನೆ. ಸದ್ಯ ಚಿತ್ರಕ್ಕೆ ಹಿನ್ನೆಲೆ ಸಂಗೀತ ಅಳವಡಿಸಲಾಗುತ್ತಿದ್ದು, ಈಮಾಸಾಂತ್ಯಕ್ಕೆ ಅಥವಾ ಮುಂದಿನ ತಿಂಗಳ ಮೊದಲವಾರದಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು.
ನಟ ಶ್ರೀನಗರ ಕಿಟ್ಟಿ ಮಾತನಾಡಿ ಚಿತ್ರದ ಕಥೆ ಇಷ್ಟವಾಯಿತು. ನನ್ನ ಪಾತ್ರ ಚೆನ್ನಾಗಿದೆ. ಗೆಳೆಯ ಆದಿತ್ಯ ಜೊತೆಗೆ ನಟಿಸಿದ್ದು ಖುಷಿಯಾಗಿದೆ ಎಂದು ತಿಳಿಸಿದರು.
“ಹರಹರ ಮಹದೇವ” ಹಾಡಿನ ಬಗ್ಗೆ ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್, ಗೀತರಚನೆಕಾರ ವಿ.ನಾಗೇಂದ್ರಪ್ರಸಾದ್ ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸಿರುವ ಕುಮಾರ್ ಬಂಗಾರಪ್ಪ, ಶರತ್ ಲೋಹಿತಾಶ್ವ, ಧರ್ಮ, ಕೋಟೆ ಪ್ರಭಾಕರ್, ರವಿ ಭಟ್ ಮುಂತಾದವರು ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಲಹರಿ ವೇಲು, ಕನ್ನಡವೇ ಸತ್ಯ ರಂಗಣ್ಣ ಮುಂತಾದ ಗಣ್ಯರು ಅತಿಥಿಗಳಾಗಿ ಆಗಮಿಸಿದ್ದರು.

