“ಅತಿಕಾಯ” ಚಿತ್ರದಲ್ಲಿ ನಿರೂಪ್ ಭಂಡಾರಿ ಜೊತೆಯಾದ ನಟಿ ಸ್ವಾತಿಷ್ಠ ಕೃಷ್ಣನ್..
ರಂಗಿ ತರಂಗ ಖ್ಯಾತಿಯ ನಿರೂಪ್ ಭಂಡಾರಿ `ಅತಿಕಾಯ’ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಷಯ ಈಗಾಗಲೇ ತಿಳಿದಿದೆ. ನಿರೂಪ್ ಜೋಡಿಯಾಗಿ ಸ್ವಾತಿಷ್ಟ ಕೃಷ್ಣನ್ ನಟಿಸುತ್ತಿದ್ದಾರೆ. ಮೂಲತಃ ಧಾರವಾಡದವರಾದ ಸ್ವಾತಿಷ್ಠ ಕೃಷ್ಣನ್, ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಖ್ಯಾತಿ ಗಳಿಸಿದ್ದಾರೆ.

ತಮಿಳಿನ ಸವರಕತ್ತಿ, ವಿಕ್ರಮ್, ತೆಲುಗಿನ ಗುಂಡೇ ಕಥಾ ವಿಂಟಾರ ಹಾಗೂ ಕನ್ನಡದ ಒಂದು ಸರಳ ಪ್ರೇಮಕಥೆ, ರಕ್ಕಸಪುರದೋಳ್ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ಸ್ವಾತಿಷ್ಟ, ಇದೀಗ `ಅತಿಕಾಯ’ ಅಡ್ಡದಲ್ಲಿ ಮಿಂಚು ಹರಿಸಲು ಸಜ್ಜಾಗಿದ್ದಾರೆ.
ಈವರೆಗೂ ಚಾಕೋಲೆಟ್ ಬಾಯ್, ಲವರ್ ಬಾಯ್ ಗೆಟಪ್ನಲ್ಲಿ ಕಂಗೊಳಿಸುತ್ತಿದ್ದ ನಿರೂಪ್ ಭಂಡಾರಿ, ಇದೀಗ ಸಖತ್ ರಗಡ್ ಲುಕ್ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ರಕ್ತಸಿಕ್ತ ಧಿರಿಸಿನಲ್ಲಿ ಕ್ಯಾಮೆರಾ ಎದುರಿಸಿದ್ದಾರೆ. ಅಂದಹಾಗೆ ಅವರೀಗ `ಅತಿಕಾಯ’ನ ಅವತಾರದಲ್ಲಿ ದರ್ಶನ ಕೊಡಲು ಸಜ್ಜಾಗಿದ್ದಾರೆ. ಪಕ್ಕಾ ಮಾಸ್ ಕಥೆಯಲ್ಲಿ ರಗಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಬೇರೆ ರೀತಿಯ ಲುಕ್’ಗೆ ಹೊಂದಿಕೊಂಡಿದ್ದಾರೆ.

ಹಿಂದೆ ಪದೇ ಪದೇ, ನಮಕ್ಹರಾಮ್ ಮೊದಲಾದ ವಿಭಿನ್ನ ರೀತಿಯ ಸಿನಿಮಾ ನಿರ್ದೇಶಿಸಿದ್ದ ನಾಗರಾಜ್ ಪೀಣ್ಯ, ಸಣ್ಣ ಗ್ಯಾಪ್ನ ಬಳಿಕ `ಅತಿಕಾಯ’ನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಾರಿ ಹೊಸ ರೀತಿಯ ಕಥೆ ಸಿದ್ಧಪಡಿಸಿಕೊಂಡು ಅಖಾಡಕ್ಕಿಳಿದಿರುವ ನಾಗರಾಜ್, ಇದೀಗ ಕೊನೆಯ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ ಚಿತ್ರತಂಡ. ಈವರೆಗೂ ಬೆಂಗಳೂರಿನ ಜನಜಂಗುಳಿ ಪ್ರದೇಶಗಳಲ್ಲೇ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ನೈಜವಾಗಿ ಮೂಡಿಬರಬೇಕೆಂಬ ಕಾರಣದಿಂದ ರಿಯಲಿಸ್ಟಿಕ್ ಆಗಿಯೇ ಶೂಟ್ ಮಾಡಲಾಗಿದೆಯಂತೆ.

ಈ ಚಿತ್ರಕ್ಕಾಗಿ ನಿರೂಪ್ ಭಂಡಾರಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ವರ್ಕೌಟ್ ಮಾಡಿ ದೇಹ ದಂಡಿಸಿದ್ದಾರೆ. ಪಾತ್ರಕ್ಕಾಗಿ ಗೆಟಪ್ ಸಹ ಬದಲಾಯಿಸಿಕೊಂಡಿದ್ದಾರೆ. ಅವರು ಈವರೆಗೂ ಕಾಣಿಸಿಕೊಂಡಿರದ ಲುಕ್ನಲ್ಲಿಅತಿಕಾಯ’ ಮೂಲಕ ಎಂಟ್ರಿ ಕೊಡಲಿದ್ದಾರೆ ಎಂಬುದು ವಿಶೇಷ. ಡೈಲಾಗ್ ಡೆಲಿವರಿ ಕೂಡ ಭಿನ್ನವಾಗಿರಲಿದೆ. ಒಟ್ಟಾರೆ ಅವರು ಔಟ್ ಆಂಡ್ ಔಟ್ ಬದಲಾದ ರೂಪದಲ್ಲಿ ಕಾಣಸಿಗುತ್ತಾರೆ. ಸಿನಿಮಾ ಕೂಡ ತುಂಬಾ ರಗಡ್ ಆಗಿರಲಿದೆ. ಹಾಗೆಯೇ ಸ್ವಾತಿಷ್ಟ ಅವರ ಪಾತ್ರವೂ ಬೇರೆ ಬಗೆಯಲ್ಲಿದೆ. ಅವರು ಬರೀ ನಾಯಕಿಯಾಗಿರದೇ ಕಥೆಯ ಪ್ರಮುಖ ಭಾಗವಾಗಿದ್ದಾರೆ’ಎಂದು ವಿವರಿಸುತ್ತಾರೆ ನಿರ್ದೇಶಕ ನಾಗರಾಜ್ ಪೀಣ್ಯ.

ಸಿನಿಮಾವನ್ನು ಜೆ.ಮಹೇಶ್ ಕುಮಾರ್ ಅರ್ಪಿಸುತ್ತಿದ್ದಾರೆ. ಹರೀಶ್ ರಾಯ್, ದಿನೇಶ್ ಮಂಗ್ಳೂರು, ಬಿ.ಸುರೇಶ, ಕಾಕ್ರೋಚ್ ಸುಧೀ, ವಜ್ರಧೀರ್ ಜೈನ್, ವರ್ಧನ್ ತೀರ್ಥಹಳ್ಳಿ, ಮಹಾಂತೇಶ್ ಹಾಗೂ ಜಾಕ್ ಜಾಲಿ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ಉದಯಲೀಲ ಛಾಯಾಗ್ರಹಣವಿರುವ ಚಿತ್ರಕ್ಕೆ ಶ್ರೀನಿವಾಸ್ ಪಿ ಬಾಬು ಸಂಕಲನ, ಸಚಿನ್ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ.


