ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಪ್ರೊಡಕ್ಷನ್ ನಂ1 ” ಚಿತ್ರಕ್ಕೆ ಮಹೂರ್ತ
ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರ “ಪ್ರೊಡಕ್ಷನ್ ನಂ1 ” ಚಿತ್ರ ಸೆಟ್ಟೇರಿದೆ, ಗೀತಸಾಹಿತಿ ಅರಸು ಅಂತಾರೆ ಇನ್ನೂ ಹೆಸರಿಡದ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಸ್ತುತ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ.

ಎಸ್ ಸಿ ರವಿ ಭದ್ರಾವತಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.ನಿರ್ಮಾಪಕರ ಸಹೋದರಿಯರು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದರು. ನಿರ್ಮಾಪಕ ಉದಯ್ ಕೆ ಮೆಹ್ತಾ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ನಿರ್ದೇಶಕ ಅರಸು ಅಂತಾರೆ ಮಾತನಾಡಿ “ಲವ್ ಇನ್ ಮಂಡ್ಯ” ಚಿತ್ರದ ನಂತರ ದಶಕದ ಬಳಿಕ ಮತ್ತೆ ನಿರ್ದೇಶನ ಮಾಡುತ್ತಿದ್ದೇನೆ ಸಿನಿಮಾ ಅಂದುಕೊಂಡ ಹಾಗೆ ಮಾಡಬೇಕು ಎನ್ನುವುದು ನನ್ನ ಉದ್ದೇಶ. ಹಾಗಾಗಿ ಎರಡನೇ ಚಿತ್ರ ನಿರ್ದೇಶಿಸಲು ಇಷ್ಟು ಸಮಯವಾಯಿತು. ಚಿತ್ರದ ಕಥೆ ವಿಭಿನ್ನವಾಗಿದೆ. ಗಣೇಶ್ ಈವರೆಗೂ ಮಾಡಿರದ ಪಾತ್ರ ಹಾಗು ಕಥೆ. ಸದ್ಯದಲ್ಲೇ ಶೀರ್ಷಿಕೆ ಅನಾವರಣ ಮಾಡುತ್ತೇವೆ ಎಂದರು.
ನಟ ಗಣೇಶ್ ಅವರಿಗೆ ನಾಯಕಿಯಾಗಿ ಕನ್ನಡದವರೆ ಆದ “ಹನುಮಾನ್” ಖ್ಯಾತಿಯ ಅಮೃತ ಅಯ್ಯರ್ ಅಭಿನಯಿಸುತ್ತಿದ್ದಾರೆ. ರಂಗಾಯಣ ರಘು, ರವಿಶಂಕರ್ ಗೌಡ, ಕಾಕ್ರೋಜ್ ಸುಧೀ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮಹೇಶ್ ದೇವ್ ಡಿ ಎನ್ ಪುರ ಹಾಗೂ ಸಂಭಾಷಣೆಗೆ ಕ್ರಾಂತಿ ಕುಮಾರ್ ಹಾಗೂ ಶೈಲೇಶ್ ಕುಮಾರ್ ಸಾಥ್ ನೀಡಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ಅಕ್ಷಯ್ ಪಿ ರಾವ್ ಸಂಕಲನ ಹಾಗೂ ವಿಜಯ್ ರಾಕೇಶ್ ಕಶ್ಯಪ್ ಮತ್ತು ಕೀರ್ತಿ ಕೃಷ್ಣಪ್ಪವಿದೆ ಎಂದು ಮಾಹಿತಿ ನೀಡಿದರು

ನಾಯಕ ಗಣೇಶ್ ಮಾತನಾಡಿ ಅರಸು ಅಂತಾರೆ 2019 ರಲ್ಲಿ ಕಥೆ ಹೇಳಲು ಭೇಟಿ ಮಾಡಿದ್ದರು. ಆನಂತರ ಕೋವಿಡ್ ಮುಂತಾದ ಕಾರಣದಿಂದ ಆಗ ಕಥೆ ಕೇಳಲು ಆಗಿರಲಿಲ್ಲ. ಇತ್ತೀಚೆಗೆ ಚಿತ್ರದ ಕಥೆ ಹೇಳಿದಾಗ ಕೇಳಿ ಬಹಳ ಇಷ್ಟವಾಯಿತು. ಮೂಲತಃ ಒಬ್ಬ ಬರಹಗಾರನಾಗಿರುವುದರಿಂದ ಕಥೆಯನ್ನು ತುಂಬಾ ಚೆನ್ನಾಗಿ ಮಾಡಿಕೊಂಡಿದ್ದಾರೆ. ಜನರಿಗೂ ಕಥೆ ಇಷ್ಟವಾಗುತ್ತದೆ ಭರವಸೆ ಇದೆ. ಚಿತ್ರದಲ್ಲಿ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕನ್ನಡದಲ್ಲಿ ತುಂಬಾ ಒಳ್ಳೆಯ ಬರಹಗಾರರಿದ್ದಾರೆ. ಅವರೆಲ್ಲಾ ಸಿನಿಮಾ ಮಾಡಲು ಮುಂದೆ ಬರಬೇಕು. ಒಳ್ಳೆಯ ಚಿತ್ರಗಳನ್ನು ನೀಡಿದಾಗ ಖಂಡಿತ ಜನರು ಚಿತ್ರಮಂದಿರಕ್ಕೆ ಬರುತ್ತಾರೆ ಎಂದರು
ನಟಿ ಅಮೃತ ಅಯ್ಯರ್ ಮಾತನಾಡಿ ನಾನು ಕನ್ನಡದ ಹುಡುಗಿ. ಕನ್ನಡದಲ್ಲಿ ಇದು ಮೊದಲ ಚಿತ್ರ. ನಿರ್ದೇಶಕರು ಹೇಳಿದ ಕಥೆ ಹಾಗೂ ನನ್ನ ಪಾತ್ರ ಇಷ್ಟವಾಯಿತು. ಗಣೇಶ್ ಅವರೊಂದಿಗೆ ನಟಿಸುತ್ತಿರುವುದಕ್ಕೆ ಖುಷಿಯಾಗಿದೆ ಎಂದು ತಿಳಿಸಿದರು.

ನಮ್ಮ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಎಸ್ ಸಿ ರವಿ ಭದ್ರಾವತಿ. ಹಿರಿಯ ನಟ ರಂಗಾಯಣ ರಘು, ರವಿಶಂಕರ್ ಗೌಡ, ಕಾಕ್ರೋಜ್ ಸುಧೀ, ಛಾಯಾಗ್ರಾಹಕ ಸುಜ್ಞಾನ್ ಮತ್ತು ಸಂಕಲನಕಾರ ಅಕ್ಷಯ್ ಪಿ ರಾವ್, ಸಚಿನ್ ಮುಂತಾದವರು ನೂತನ ಚಿತ್ರದ ಕುರಿತು ಮಾತನಾಡಿದರು.

