“ಕೋಟಿಗೊಬ್ಬ” ಚಿತ್ರದ ಬೆಳ್ಳಿಹಬ್ಬ ಸಂಭ್ರಮ: ಅವಿಸ್ಮರಣೀಯ ಕ್ಷಣಕ್ಕೆ ಗಣ್ಯರು ಸಾಕ್ಷಿ
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಕೋಟಿಗೊಬ್ಬ ಚಿತ್ರ ಬಿಡುಗಡೆಯಾಗಿ 25 ವರ್ಷಗಳಾಗಿದೆ. ನಿರ್ಮಾಪಕ ಸೂರಪ್ಪಬಾಬು ಅವಿಸ್ಮರಣೀಯ ಸಮಾರಂಭ ಆಯೋಜಿಸಿದ್ದರು. ಅಪರೂಪದ ಕ್ಷಣಕ್ಕೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ನಿರ್ದೇಶಕ ನಾಗಣ್ಣ, ಹಿರಿಯನಟ ದೇವರಾಜ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ಸಾಹಿತಿ ಕೆ.ಕಲ್ಯಾಣ್ ಮತ್ತಿತರರು ಸಾಕ್ಷಿಯಾದರು

ನಿರ್ಮಾಪಕ ಸೂರಪ್ಪಬಾಬು ಮಾತನಾಡಿ ವಿಷ್ಣುವರ್ಧನ್ ಅವರ ಜತೆಗಿನ ಸಂಬಂಧ ಹೇಗಿತ್ತು, ಅವರು ತನ್ನನ್ನು ಎಷ್ಟು ಇಷ್ಟಪಡುತ್ತಿದ್ದರು ಎನ್ನುವುದನ್ನು ಎಲ್ಲರೆದುರು ಅನಾವರಣ ಮಾಡಿದರು.
ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ ಸಾಮಾನ್ಯವಾಗಿಸಿನಿಮಾ ಸಮಾರಂಭಗಳಿಗೆ ಹೋಗುವುದಿಲ್ಲ, 25 ವರ್ಷಗಳ ನಂತರ ಅವರನ್ನು ನೀವೆಲ್ಲ ನೆನಪಿಸಿಕೊಳ್ಳುತ್ತಿರುವುದು ವಿಶೇಷ ಎನಿಸಿತು ಅದಕ್ಕೆ ಬಂದೆ. ವಿಷ್ಣುವರ್ಧನ್ ಬಗ್ಗೆ ಪುಸ್ತಕಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ. ಇಡೀ ಕುಟುಂಬ ಕೂತು ನೋಡುವಂಥ ಚಿತ್ರಗಳನ್ನಷ್ಟೇ ಮಾಡುತ್ತಿದ್ದರು ಎಂದು ಅವರ ಗುಣಗಾನ ಮಾಡಿದರು.
ಹಿರಿಯ ನಟ ದೇವರಾಜ್ ಮಾತನಾಡಿ ವಿಷ್ಣು ಅವರು ನಾನು ಯಾವಾಗ ಮನೆಗೆ ಹೋದರೂ ಒಬ್ಬ ತಮ್ಮನ ಥರ ಆತ್ಮೀಯತೆಯಿಂದ ಬರಮಾಡಿಕೊಂಡು, ಅವರ ಮನೆಯ ತೂಗುಯ್ಯಾಲೆಯಲ್ಲಿ ಕೂರಿಸಿಕೊಳ್ಳುತ್ತಿದ್ದರು, ಭಾರತಿ ಅವರು ಕೈತುತ್ತು ನೀಡುತ್ತಿದ್ದರು. ಶಿಸ್ತು ಸಂಯಮಗಳನ್ನೇ ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಮುಂಬೈನಲ್ಲಿ ಈ ಚಿತ್ರದ ಶೂಟಿಂಗ್ ಗಾಗಿ 30 ದಿನಗಳ ಕಾಲ ಅವರ ಜತೆ ಕಳೆದದ್ದು ಮರೆಯಲಾಗದು ಎಂದರು
ಸೂರಪ್ಪ ಚಿತ್ರದಲ್ಲಿ ಅವರ ವಿಗ್ರಹ ಒಡೆದು ಹಾಕುವ ಸನ್ನಿವೇಶವಿದ್ದರಿಂದ ಥರದ ಪಾತ್ರ ಮಾಡಲು ಒಪ್ಪಿಕೊಳ್ಳಲಿಲ್ಲ. ಆದರೆ ಈ ಚಿತ್ರಕ್ಕೆ ಕರೆ ಬಂದಾಗ ಬ್ಯುಸಿ ಇದ್ದರೂ ತಕ್ಷಣ ಒಪ್ಪಿ ಇನ್ಸ್ ಪೆಕ್ಟರ್ ಪಾತ್ರ ಮಾಡಿದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.
ನಟ ಉಪೇಂದ್ರ ಮಾತನಾಡಿ ವಿಷ್ಣು ಸಾರ್ ಅವರ ಬಗ್ಗೆ ಹೇಳೊದು ತುಂಬಾ ಇದೆ. ಅವರನ್ನು ಮಾತಾಡಿಸಬೇಕೆಂದೇ ಅವರ ಮನೆಗೆ ಹೋಗ್ತಿದ್ದೆ. ಆಧ್ಯಾತ್ಮ, ದೇವರ ಬಗ್ಗೆ ತುಂಬಾ ಹೇಳ್ತಿದ್ದರು. ಅಂಥ ಮಹಾನ್ ವ್ಯಕ್ತಿ ಮಾತು ಕೇಳೋದೇ ಪುಣ್ಯ. ಅವರಿಂದ ನಾನು ಸ್ಪೂರ್ತಿ ಪಡೆಯುತ್ತಿದ್ದೆ. ನಿಮ್ಮ ಸಿನಿಮಾಗಳು ಬೇರೆಯದೇ ಪ್ರೇಕ್ಷಕರನ್ನು ಹುಟ್ಟು ಹಾಕ್ತಿವೆ ಎಂದು ನನ್ನ ಸಿನಿಮಾಗಳನ್ನು ಮೆಚ್ಚಿಕೊಳ್ಳುತ್ತಿದ್ದರು.ನನ್ನನ್ನು ತರ್ಲೆ ನನ್ಮಗ ಚಿತ್ರದ ಮೂಲಕ ನಿರ್ದೇಶಕನನ್ನಾಗಿ ಪರಿಚಯಿಸಿದ್ದೇ ಸೂರಪ್ಪಬಾಬು ಎಂದು ಹೇಳಿದರು.
ನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ ತಮಿಳು ಚಿತ್ರದ ಶೂಟಿಂಗ್ ನಲ್ಲಿದ್ದಾಗ ಈ ಸಿನಿಮಾದಲ್ಲಿ ನಟಿಸಲು ಆಫರ್ ಬಂತು. ನನಗೆ ತುಂಬಾ ಭಯವಾಯ್ತು. ನಂತರ ಉಪೇಂದ್ರ ಅವರೇ ಅಂಥಾ ಮಹಾನ್ ಕಲಾವಿದ, ಹೃದಯವಂತ ವ್ಯಕ್ತಿಯ ಜತೆ ನಟಿಸುವ ಅವಕಾಶ ಬಂದಿರೋದೇ ನಿನ್ನ ಪುಣ್ಯ. ಫಸ್ಟ್ ಒಪೆÇ್ಕೀ ಎಂದರು. ಚಿತ್ರದಲ್ಲಿ ನಟಿಸಲು ಮೂಲ ಕಾರಣ ಉಪೇಂದ್ರ. ಅವರಿಂದ ನಾನು ತುಂಬಾ ಕಲಿತಿದ್ದೇನೆ ಎಂದರು.

ನಟ ಗಣೇಶ್ ಮಾತನಾಡಿ ನಾನು ವಿಷ್ಣು ಸಾರ್ ದೊಡ್ಡ ಅಭಿಮಾನಿ. ಅವರಂತೇ ನನ್ನ ಕೈಗೂ ಕಡಗ ಹಾಕ್ಕೊಂಡಿದ್ದೇನೆ. ಹಾಗೂ ಅವರ ಸಿನಿಮಾಗಳನ್ನು ಬ್ಲಾಕ್ ಟಿಕೆಟ್ ತಗೊಂಡು ನೋಡ್ತಿದ್ದೆ. ಅವರು ನೀನು ಯಾವಾಗಲೂ ಸಂತೋಷವಾಗಿರುವಂತೆ ಇರಬೇಡ, ಸಂತೋಷವಾಗಿರು ಎನ್ನುತ್ತಿದ್ದರು ಎಂದು ಹೇಳಿದರು.
ಕಲಾವಿದ ಗುರುದತ್ ಮಾತನಾಡಿ ಶಿವಣ್ಣ ಹಾಗು ವಿಷ್ಣು ಸಾರ್ ಒಂದು ಚಿತ್ರದಲ್ಲಿ ಅಭಿನಯಿಸಬೇಕಿತ್ತು. ಸ್ಕ್ರಿಪ್ಟ್ ಲೇಟಾಗಿದ್ದರಿಂದ ಆಗಲಿಲ್ಲ. ಶಿವಣ್ಣನ ಮೇಲೆ ಅವರು ತುಂಬಾ ಅಭಿಮಾನ ಇಟ್ಕೊಂಡಿದ್ದರು. ಒಮ್ಮೆ ಅಶೋಕ ಹೋಟೆಲಿನಲ್ಲಿ ಅವರ ಚಿತ್ರದ ಸಮಾರಂಭವಿತ್ತು. ಆಗ ನನ್ನನ್ನು ಕರೆದು ಶಿವಣ್ಣನನ್ನು ಕರೆಸು, ನಾನು ಅವರ ಜತೆ ಮಾತಾಡಬೇಕು ಅಂದರು. ಶಿವಣ್ಣ ಬಂದಾಗ ಆತ್ಮಿಯತೆಯಿಂದ ಬರಮಾಡಿಕೊಂಡರು. ನಂತರ ಕೈಲಿ ಕಟ್ಟಿಕೊಂಡಿದ್ದ, ಎಂಜಿಆರ್ ಗಿಫ್ಟ್ ಆಗಿ ಕೊಟ್ಟ ವಾಚನ್ನೇ ಶಿವಣ್ಣಗೆ ಕೊಟ್ಟು ನೀನು ಕರ್ನಾಟಕವೇ ಇಷ್ಟೊಡುವಂಥ ದೊಡ್ಡ ಕಲಾವಿದ ಆಗ್ತೀಯ, ಅದನ್ನು ನೋಡುತ್ತೇನೆ ಎಂದಿದ್ದರು ಎಂದು ಆ ಘಟನೆ ನೆನಪಿಸಿಕೊಂಡರು.
ಸಾಹಿತಿ ಕೆ.ಕಲ್ಯಾಣ್, ನಿರ್ದೇಶಕ ನಾಗಣ್ಣ ವಿಷ್ಣು ಜತೆಗಿನ ಒಡನಾಟದ ದಿನಗಳನ್ನು ಹಂಚಿಕೊಂಡರು.

