“ಸು ಫ್ರಮ್ ಸೋ ” ಚಿತ್ರಕ್ಕೆ ಜನರಿಂದ ಮೆಚ್ಚುಗೆಯ ಮಹಾಪೂರ : 100ಕ್ಕೂ ಅಧಿಕ ಚಿತ್ರಮಂದಿರಗಳು ಸೇರ್ಪಡೆ
ಕರಾವಳಿ ಭಾಗದ ಕಥೆಯನ್ನು ರಾಜ್ಯದ ಎಲ್ಲಾ ಭಾಗದ ಪ್ರೇಕ್ಷಕರಿಗೆ ಮನರಂಜನೆಯ ಮೂಲಕ ಉಣಬಡಿಸಿದ “ ಸು ಫ್ರಮ್ ಸೋ” ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ 100 ಕ್ಕೂ ಹೆಚ್ಚು ಚಿತ್ರಮಂದಿರಗಳು ಮತ್ತೆ ಹೊಸದಾಗಿ ಸೇರಿಸಿಕೊಳ್ಳುತ್ತಿದೆ.

ಚಿತ್ರಮಂದಿರದಿಂದ ಕನ್ನಡ ಚಿತ್ರಗಳನ್ನು ತೆಗೆದುಹಾಕುವ ಸಮಯದಲ್ಲಿ ಎರಡನೇ ವಾರಕ್ಕೆ ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಕೇಳಿ ಹಾಕಿಕೊಳ್ಳುತ್ತಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಒಳ್ಳೆಯ ಬೆಳವಣಿಗೆ, ಉತ್ತಮ ಚಿತ್ರಗಳು ಬಂದರೆ ಕನ್ನಡದ ಪ್ರೇಕ್ಷಕ ಕೈ ಬಿಡುವುದಿಲ್ಲ ಎನ್ನುವುದಕ್ಕೆ ಇದು ಮತ್ತೊಂದು ನಿದರ್ಶನ. ಒಳ್ಳೆಯ ಹಾಗು ಜನರು ನೋಡುವ ಸಿನಿಮಾಗಳು ಬರುತ್ತಿಲ್ಲ ಎನ್ನುವ ಕೊರಗನ್ನು “ಸು ಫ್ರಮ್ ಸೋ” ನೀಗಿಸಿದೆ.
ಚಿತ್ರಕ್ಕೆ ಜನರಿಗೆ ಸಿಗುತ್ತಿರುವ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ನಿರ್ಮಾಪಕರಾದ ರಾಜ್ ಬಿ ಶೆಟ್ಟಿ, ರವಿ ರೈ ಕಳಸ, ಶಶಿಧರ ಶೆಟ್ಟಿ ಬರೋಡ ಹಾಗು ಸಹ ನಿರ್ಮಾಪಕ ಬಾಲು ಕುಮಟ ಸೇರಿದಂತೆ ಇಡೀ ಚಿತ್ರತಂಡದ ಮುಖದಲ್ಲಿ ಗೆಲುವಿನ ಮಂದಹಾಸ ಮೂಡಿಸಿದೆ. ಸುಲೋಚನಾ ಮತ್ತು ಸೊಮೇಶ್ವರ ಹಸರೇ ಚಿತ್ರದ ಕಥಾ ವಸ್ತು ಅದನ್ನು ನಿರ್ದೇಶಕ ಜೆಪಿ ತುಮಿನಾಡ ಹಾಸ್ಯದ ದಾಟಿಯಲ್ಲಿ ತೆರೆಗೆ ಕಟ್ಟಿಕೊಟ್ಟಿದ್ದು ಚಿತ್ರ ನೋಡಿದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದರ ಜೊತೆಗೆ ಜನರಿಂದ ಜನರಿಗೆ “ಸು ಫ್ರಮ್ ಸೋ” ಚಿತ್ರ ಮನರಂಜನೆಯ ಚಿತ್ರವಂತೆ ಎನ್ನುವ ಮಾತುಗಳು ಕೇಳಿ ಬರುತ್ತಿರುವುದು ಚಿತ್ರತಂಡಕ್ಕೆ ಸಿಕ್ಕ ಅತಿದೊಡ್ಡ ಗೆಲುವಾಗಿದೆ. ಇದೇ ಖುಷಿಯಲ್ಲಿ ಚಿತ್ರಮಂದಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ, ಜೊತೆಗೆ ಸಿನಿಮಾ ನೋಡದ ಮಂದಿಯನ್ನು ಸಿನಿಮಾ ಮಂದಿರಕ್ಕೆ ಕರೆತರುತ್ತಿದೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ಕಾರ್ಯಕಾರಿ ನಿರ್ಮಾಪಕ ಬಾಲು ಕುಮಟಾ, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ರಾಜ್ಯಾದ್ಯಂತ 100 ಚಿತ್ರಮಂದಿರಗಳು ಹೆಚ್ಚಾಗಿವೆ. ಇದು ಖುಷಿಯ ಸಂಗತಿ, ಸದ್ಯಕ್ಕೆ ಯಾವುದೇ ಹೊಸ ಚಿತ್ರ ಘೋಷಣೆ ಮಾಡುತ್ತಿಲ್ಲ. ಒಳ್ಳೆಯ ಕಥೆ ಚಿತ್ರಕ್ಕೆ ಆದ್ಯತೆ ನೀಡುವುದಾಗಿ ಅವರು ತಿಳಿಸಿದ್ದಾರೆ.

ಬಹುತೇಕ ಕರಾವಳಿ ಭಾಗದ ಕಲಾವಿದರೇ ಚಿತ್ರದಲ್ಲಿದ್ದಾರೆ. ಶನೀಲ್ ಗೌತಮ್, ಜೆಪಿ ತಮಿನಾಡ, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಪ್ರಕಾಶ್ ತೂಮಿನಾಡ್ ,ಅರ್ಜುನ್ ಕಜೆ, ಸಂಧ್ಯ ಅರ್ಕೆರೆ ಸೇರಿದಂತೆ ಸ್ಥಳೀಯ ಕಲಾವಿದರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ ಹಿನ್ನೆಲೆಯಲ್ಲಿ ಚಿತ್ರಮಂದಿರದಲ್ಲಿ ಜನ ತುಂಬಿಕೊಳ್ಳುತ್ತಿದ್ದಾರೆ, ಇದು ಇಡೀ ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿದೆ.
ಕರಾವಳಿ ಭಾಗದದ್ದೇ ಆಗಿದ್ದ ವಿಭಿನ್ನ ಕಥೆಯ “ಟೋಬಿ”ಯನ್ನು ರಾಜ್ ಬಿ ಶೆಟ್ಟಿ ಮತ್ತು ರವಿ ರೈ ಕಳಸ ತಂಡ ನಿರ್ಮಾಣ ಮಾಡಿತ್ತು,ಆದರೆ ಅಂದುಕೊಂಡಷ್ಟು ಚಿತ್ರತಂಡದ ಕೈ ಹಿಡಿದಿರಲಿಲ್ಲ, ಈಗ “ಸು ಫ್ರಮ್ ಸೋ” ಚಿತ್ರ ತಂಡವನ್ನು ಕೈ ಹಿಡಿಯುವ ಮೂಲಕ ಇನ್ನಷ್ಟು ಇಂತಹ ಪ್ರಯತ್ನಗಳಿಗೆ ತಂಡದಲ್ಲಿ ಪ್ರೋತ್ಸಾಹ ಮತ್ತು ಹುಮ್ಮಸ್ಸು ಹೆಚ್ಚಿಸಿದೆ.

