"Veera Kambala", a part of Tulu Nadu's life, is all set for release.

ತುಳುನಾಡಿನ ಜನಜೀವನದ ಭಾಗ “ವೀರ ಕಂಬಳ” ಬಿಡುಗಡೆಗೆ ಸಜ್ಜು - CineNewsKannada.com

ತುಳುನಾಡಿನ ಜನಜೀವನದ ಭಾಗ “ವೀರ ಕಂಬಳ” ಬಿಡುಗಡೆಗೆ ಸಜ್ಜು

ತುಳುನಾಡಿನ ಜನಜೀವನದೊಂದಿಗೆ ಹೊಸೆದುಕೊಂಡಿರುವ ಕಂಬಳ ಕ್ರೀಡೆ ಬಹು ಹಿಂದಿನಿಂದಲೂ ಚಿತ್ರರಂಗದವರನ್ನು ಆಕರ್ಷಿಸುತ್ತಿದೆ.ದಕ್ಷಿಣ ಕನ್ನಡ ಭಾಗದೊಂದಿಗೆ ಕರುಳುಬಳ್ಳಿಯ ಬಂಧ ಹೊಂದಿರುವ ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ದಶಕಗಟ್ಟಲೆ ಶ್ರಮವಹಿಸಿ “ವೀರ ಕಂಬಳ” ಚಿತ್ರವನ್ನು ತೆರೆಗೆ ತರಲು ಮುಂದಾಗಿದ್ದಾರೆ.

ಚಿತ್ರ ಫೆಬ್ರವರಿ 27ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ, ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಂಬಳದ ಸುತ್ತಾ ಘಟಿಸುವ ರೋಚಕ ಕಥನವಿರುವ ವೀರ ಕಂಬಳದ ಟ್ರೈಲರ್ ಅನ್ನು ನಾದಬ್ರಹ್ಮ ಹಂಸಲೇಖ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ಈ ವೇಳೆ ಮಾತನಾಡಿದ ನಾದಬ್ರಹ್ಮ ಹಂಸಲೇಖ, ಕಲೆ ಎಂಬುದು ಮುಪ್ಪಿಲ್ಲದ, ಸುಕ್ಕಿಲ್ಲದ ಕನ್ಯೆಯಿದ್ದಂತೆ. ಮನುಷ್ಯನನ್ನು ಸದಾ ಜೀವಂತಿಕೆಯಿಂದ ಉಳಿಸುತ್ತದೆ, ವೀರತ್ವದ ಸಂಕೇತದಂತಿರೋ ಕಂಬಳಕ್ಕೆ ಕಲೆಯೆಂಬ ಕನ್ಯೆ ಕೊಟ್ಟ ತಾಂಬೂಲವೇ `ವೀರ ಕಂಬಳ’ ಎಂಬಂತೆ ಸಿನಿಮಾ ಎಂದು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದರು.

ತುಳುನಾಡಿನ ನೆಲದ ಘಮಲು ಹೊಂದಿರುವ ಕಂಬಳವನ್ನು ದೃಶ್ಯರೂಪಕ್ಕೆ ತರುವ ಸಾಹಸ ಮಾಡಿರುವ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಇಡೀ ತಂಡಕ್ಕೆ ಒಳ್ಳೆಯದಾಗಲಿ.ವೀರ ಕಂಬಳ ಭರ್ಜರಿ ಗೆಲುವು ಕಾಣಲಿ ಎಂದು ಶುಭ ಹಾರೈಸಿದರು.

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿ ಕಂಬಳವನ್ನು ದೃಶ್ಯ ರೂಪದಲ್ಲಿ ಕಟ್ಟಿಕೊಡಲಾಗಿದೆ. ಈ ಹಾದಿಯಲ್ಲಿ ಜೊತೆಯಾದ ನಿರ್ಮಾಪಕರು, ತಂತ್ರಜ್ಞರು, ಕಲಾವಿದರು ಹಾಗೂ ತುಳು ರಂಗಭೂಮಿಯ ಹೆಸರಾಂತ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‍ಬೈಲ್, ನಿಖರ ಮಾಹಿತಿ ಒದಗಿಸಿದ ಗುಣಪಾಲ್ ಕಡಂಬ ಸೇರಿದಂತೆ ಹಲವರನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡುಕಂಬಳದ ಸುತ್ತಾ ಮುಂಬೈ ಭೂಗತ ಜಗತ್ತಿನ ನಂಟಿರುವ ರೋಚಕ ಅಂಶಗಳೊಂದಿಗೆ ಈಕಥನ ಸೃಷ್ಟಿಯಾಗಿದೆ ಎಂದು ಕಥೆಯ ಬಗ್ಗೆ ಸುಳಿವು ಬಿಟ್ಟುಕೊಟ್ಟರು.

ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ರಾಜೇಶ್ ಕುಡ್ಲ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ.

ಚಿತ್ರದಲ್ಲಿ ಆದಿತ್ಯ, ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರೆ, ರಾಧಿಕಾ ನಾರಾಯಣ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ತುಳು ಭಾಷೆಯಲ್ಲಿಯೂ ಬಿಡುಗಡೆಗೊಳ್ಳಲಿರುವ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ.

ವಿಜಯ್ ಕುಮಾರ್ ಕೊಡಿಯಾಲ್‍ಬೈಲ್ ಚಿತ್ರಕಥೆ ಸಂಭಾಷಣೆ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಆರ್.ಗಿರಿ ಛಾಯಾಗ್ರಹಣ, ಶ್ರೀನಿವಾಸ್ ಎಸ್ ಬಾಬು ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಕಲಾ ನಿರ್ದೇಶನ, ಕಾಂತ ಪ್ರಸಾದನ ಹಾಗೂ ಭಾಷಾ ವಸ್ತ್ರವಿನ್ಯಾಸ ವೀರ ಕಂಬಳ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin