ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ – ಪ್ರಶಸ್ತಿ ವಿಜೇತರಿಗೆ ಅಪ್ಪು ಹೆಸರಲ್ಲಿ ನೆನಪಿನ ಕಾಣಿಕೆ
ಐದು ದಿನಗಳಿಂದ ನಡೆಯುತ್ತಿದ್ದ ‘ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ’ ಇಂದು ತೆರೆ ಕಂಡಿದೆ. ‘ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್’ ಇದೇ ಮೊದಲ ಬಾರಿಗೆ ಆಯೋಜನೆ ಮಾಡಿರುವ ಮಕ್ಕಳ ಚಲನಚಿತ್ರೋತ್ಸವ ಅದ್ಭುತ ಪ್ರತಿಕ್ರಿಯೆಯೊಂದಿಗೆ ಯಶಸ್ವಿಯಾಗಿದೆ.
ಮೊದಲ ಚಲನಚಿತ್ರೋತ್ಸವವನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಣೆ ಮಾಡಲಾಗಿದ್ದು, ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ ವಿಜೇತರಿಗೆ ಅಪ್ಪು ಹೆಸರಲ್ಲಿ ನೆನಪಿನ ಕಾಣಿಕೆ ನೀಡಲಾಯಿತು.
ಫೆಬ್ರವರಿ 22ರಿಂದ ಒಟ್ಟು ಐದು ದಿನಗಳ ಕಾಲ ನಡೆದಿದ್ದ ಚಲನಚಿತ್ರೋತ್ಸವದಲ್ಲಿ ಕನ್ನಡ ಒಳಗೊಂಡಂತೆ ಬೇರೆ ಬೇರೆ ಭಾಷೆಯ ಸಿನಿಮಾಗಳು ಪ್ರದರ್ಶನಗೊಂಡಿದೆ. ಇಂದು ಚಲನಚಿತ್ರೋತ್ಸವ ಅದ್ದೂರಿಯಾಗಿ ತೆರೆ ಕಂಡಿದ್ದು ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಎಸ್.ನಾರಾಯಣ್, ವಿ.ನಾಗೇಂದ್ರ ಪ್ರಸಾದ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ‘ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್’ ಉಲ್ಲಾಸ್, ಕಾರ್ಯಕ್ರಮ ನಿರ್ದೇಶಕ ನಂದಳಿಕೆ ನಿತ್ಯನಂದ ಪ್ರಭು, ನಿರ್ದೇಶಕ ಹರಿ ಸಂತೋಷ್, ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಸುಂದರ್ ರಾಜ್ ಸೇರಿದಂತೆ ಹಲವರು ಭಾಗಿಯಾಗಿ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ರು.
ಕಾರ್ಯಕ್ರಮದಲ್ಲಿ ಎಸ್.ನಾರಾಯಣ್ ಮಾತನಾಡಿ ಇದು ಚಲನಚಿತ್ರೋತ್ಸವ ಮುಕ್ತಾಯ ಸಮಾರಂಭ ಅಲ್ಲ ನನ್ನ ಪ್ರಕಾರ ಇದು ಆರಂಭ. ಈ ವೇದಿಕೆ ಬಳಸಿಕೊಂಡು ಹಲವರ ಪ್ರತಿಭೆ ಅನಾವರಣವಾಗಲಿ. ಸುಂದರವಾದ ವಿಚಾರ ಅಂದ್ರೆ ಅಪ್ಪು ಹೆಸರಲ್ಲಿ ಈ ಪ್ರಶಸ್ತಿ ಕೊಡುತ್ತಿರೋದು ಹೆಮ್ಮೆಯ ವಿಚಾರ. ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಅದ್ಭುತವಾದ ಪ್ರಶಸ್ತಿಯೇ ಅಪ್ಪು. ಅವರ ಹೆಸರಲ್ಲಿ ಅರ್ಥಪೂರ್ಣವಾಗಿ ಚಲನಚಿತ್ರೋತ್ಸವನ್ನು ಆಚರಿಸಲಾಗುತ್ತಿದೆ. ಪ್ರಶಸ್ತಿ ಸಿಕ್ಕವರಿಗೆಲ್ಲ ಅಭಿನಂದನೆಗಳು ಎಂದು ಎಲ್ಲರಿಗೂ ಶುಭ ಹಾರೈಸಿದ್ರು.
ಪ್ರಶಸ್ತಿ ವಿವರ:
ಅತ್ಯುತ್ತಮ ಮಕ್ಕಳ ಚಿತ್ರ
ಮೊದಲ ಸ್ಥಾನ: ದಿ ಗಾರ್ಡ್
ಎರಡನೇ ಸ್ಥಾನ: ಗಾಂಧಿ ಮತ್ತು ನೋಟು
ಮೂರನೇ ಸ್ಥಾನ: ಕೇಕ್
ಅತ್ಯುತ್ತಮ ನಿರ್ದೇಶಕಿ: ಆಶಾ ದೇವಿ.ಡಿ (ಓ ನನ್ನ ಚೇತನ)
ಅತ್ಯುತ್ತಮ ಸಂಕಲನಕಾರ: ವಸಂತ್ ಕುಮಾರ್ (ಗಾಂಧಿ ಮತ್ತು ನೋಟು)
ಅತ್ಯುತ್ತಮ ಛಾಯಾಗ್ರಾಹಕ: ರಾಜು ಎನ್.ಎಂ ( ಮನ್ 3)
ಅತ್ಯುತ್ತಮ ಸಂಗೀತ ನಿರ್ದೇಶಕಿ: ವಾಣಿ ಹರೀಕೃಷ್ಣ (ಗಾಂಧಿ ಮತ್ತು ನೋಟು)
ಅತ್ಯುತ್ತಮ ನಿರ್ಮಾಣ ಸಂಸ್ಥೆ: ಪೂಜಾ ಘೋಯಲ್ ( ನಮ್ಮ ಅರಣ್ಯ ಪ್ರದೇಶ)
ಅತ್ಯುತ್ತಮ ಚಿತ್ರಕಥೆ: ಉಮೇಶ್ ಬಡಿಗೇರ್ ( ದಿ ಗಾರ್ಡ್)
ಅತ್ಯುತ್ತಮ ಬಾಲನಟ: ತರುಣ್( ಮಸಣದ ಹೂವು)
ಅತ್ಯುತ್ತಮ ಬಾಲನಟಿ: ದಿವಿಜ (ಗಾಂಧಿ ಮತ್ತು ನೋಟು)
ಅತ್ಯುತ್ತಮ ಬಾಲ ನಟ ವಿಮರ್ಶಕರ ಆಯ್ಕೆ: ಮಹೇಂದ್ರ (ನನ್ನ ಹೆಸರು ಕಿಶೋರ)
ಅತ್ಯುತ್ತಮ ಬಾಲನಟಿ ವಿಮರ್ಶಕರ ಆಯ್ಕೆ: ದೀಕ್ಷಾ. ಡಿ. ರೈ (ಪೆನ್ಸಿಲ್ ಬಾಕ್ಸ್)
ಅತ್ಯುತ್ತಮ ಪೋಷಕ ನಟ: ಕಾರ್ತಿಕ್ (ಮೂಕ ಜೀವ)
ಅತ್ಯುತ್ತಮ ಪೋಷಕ ನಟಿ: ಅರುಣಾ ಬಾಲರಾಜ್ (ನಹಿ ಜ್ಞಾನೇನ ಸದೃಶಂ)