Kannada's first spoken word movie "Sati Sulochana" re-created : release next year

ಕನ್ನಡದ ಮೊದಲ ವಾಕ್ಚಿತ್ರ “ಸತಿ ಸುಲೋಚನ” ಮರು ಸೃಷ್ಟಿ : ಮುಂದಿನ ವರ್ಷ ಬಿಡುಗಡೆ - CineNewsKannada.com

ಕನ್ನಡದ ಮೊದಲ ವಾಕ್ಚಿತ್ರ “ಸತಿ ಸುಲೋಚನ” ಮರು ಸೃಷ್ಟಿ : ಮುಂದಿನ ವರ್ಷ ಬಿಡುಗಡೆ

ಕನ್ನಡ ಚಿತ್ರರಂಗದ ಮೊದಲ ವಾಕ್ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ “ಸತಿ ಸುಲೋಚನ” ಚಿತ್ರವನ್ನು ಮರು ಸೃಷ್ಠಿ ಮಾಡಲು ನಟ, ನಿರೂಪಕ ಸೃಜನ್ ಲೋಕೇಶ್ ಮತ್ತು ನಿರ್ದೇಶಖ ಪಿ. ಶೇಷಾದ್ರಿ ಮುಂದಾಗಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಇತಿಹಾಸ ಸೃಷ್ಠಿಗೆ ಈ ಜೋಡಿ ಮುಂದಾಗಿದ್ದಾರೆ.

1934 ಮಾರ್ಚ್ 3 ರಂದು ಕನ್ನಡದ ಮೊದಲ ವಾಕ್ಚಿತ್ರ “ಸತಿ ಸುಲೋಚನ” ಬಿಡುಗಡೆಯಾಗಿತ್ತು. ಈ ದಿನವನ್ನು ವಿಶ್ವ ಕನ್ನಡ ಚಿತ್ರದಿನವನ್ನಾಗಿ ಆಚರಿಸಲಾಗುತ್ತಿದೆ. 91 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ ನಿರ್ದೇಶನ ಮಾಡುವ ಮೂಲಕ ಚಿತ್ರವನ್ನು ಮರುಸೃಷ್ಠಿ ಮಾಡುತ್ತಿದ್ದು ಲೋಕೇಶ್ ಪ್ರೊಡಕ್ಷನ್ ಮೂಲಕ ಸೃಜನ್ ಲೋಕೇಶ್ ಬಂಡವಾಳ ಹೂಡುತ್ತಿದ್ದಾರೆ.

ಸೃಜನ್ ಲೋಕೇಶ್ ಚಿತ್ರವನ್ನು ಮರುಸೃಷ್ಠಿ ಮಾಡಲೂ ಕಾರಣವೂ ಇದೆ. ಕನ್ನಡದ ಮೊದಲ ವಾಕ್ಚಿತ್ರದ ನಾಯಕ ಸುಬ್ಬಯ್ಯ ನಾಯ್ಡು, ಸೃಜನ್ ಲೋಕೇಶ್ ಅವರ ತಾತ. ಈ ಹಿನ್ನೆಲೆಯಲ್ಲಿ ವಿಶೇಷ ಮತುವರ್ಜಿ ವಹಿಸಿ ಚಿತ್ರವನ್ನು ಮರುಸೃಷ್ಠಿ ಮಾಡಿ ಅದನ್ನು 2026 ಮಾರ್ಚ್ 3 ರಂದು ತೆರೆಗೆ ತರಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ

ಹಿರಿಯ ನಟ ಆರ್ ನಾಗೇಂದ್ರರಾಯರ ಸಲಹೆ ಮೇರೆಗೆ ರಾಜಸ್ಥಾನ ಮೂಲದವರಾದ ಚಮನ್ ಲಾಲ್ ಡೊಂಗಾಜಿ ನಿರ್ಮಾಣ ಮಾಡಿದ ಚಿತ್ರವನ್ನು ವೈ.ವಿ.ರಾವ್ ನಿರ್ದೇಶನ ಮಾಡಿದ್ದರು. ಹಿರಿಯ ನಟ ಲೋಕೇಶ್ ಅವರ ತಂದೆ ಹಾಗೂ ಸೃಜನ್ ಲೋಕೇಶ್ ತಾತಾ ಸುಬ್ಬಯ್ಯ ನಾಯ್ಡು ಚಿತ್ರದ ನಾಯಕರಾಗಿ ನಟಿಸಿದ್ದರು, ತ್ರಿಪುರಾಂಬ ನಾಯಕಿಯಾಗಿ ಅಭಿನಯಿಸಿದ್ದರು. 91 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರದ ಯಾವುದೇ ವಿಡಿಯೋ ತುಣುಕುಗಳು ಲಭ್ಯವಿಲ್ಲ. ಕೇವಲ ಕೆಲವೆ ಕೆಲವು ಸ್ಥಿರಚಿತ್ರಗಳಷ್ಟೇ ಇದೆ.

ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ಕನ್ನಡದ ಮೊದಲ ವಾಕ್ಚಿತ್ರ ಬಿಡುಗಡೆಯಾಗಿ 91 ವರ್ಷಗಳಾಗಿದೆ. 1934ರ ಮಾರ್ಚ್ 3ರಂದು ಸಂಜೆ 7.30ಕ್ಕೆ ಬೆಂಗಳೂರಿನ ಪ್ಯಾರಾಮೌಂಟ್ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಆದರೆ ಚಿತ್ರವನ್ನು ನಾವು ನೋಡೋಣ ಎಂದರೆ ಲಭ್ಯವಿಲ್ಲ. ಕೇವಲ ಸ್ಥಿರಚಿತ್ರಗಳಷ್ಟೇ ಇದೆ. “ಸತಿ ಸುಲೋಚನ” ರಾಮಾಯಣದ ಒಂದು ಉಪಕಥೆ. ಬೆಳ್ಳಾವೆ ನರಹರಿ ಶಾಸ್ತ್ರಿಗಳು ಬರೆದಿದ್ದ ನಾಟಕವನ್ನು ವೈ.ವಿ.ರಾವ್ ಸಿನಿಮಾ ರೂಪಕ್ಕೆ ತಂದರು. ಚಿಕ್ಕಪೇಟೆಯಲ್ಲಿ ಪಾತ್ರೆ ವ್ಯಾಪಾರಿಗಳಾಗಿದ್ದ ಚಮನ್ ಲಾಲ್ ಡೊಂಗಾಜಿ ಅವರು ಸಹೋದರ ಭೂರ್ ಮಲ್ ಡೊಂಗಾಜಿ ಅವರ ಜೊತೆಗೂಡಿ 40 ಸಾವಿರ ಖರ್ಚಿನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸುಬ್ಬಯ್ಯ ನಾಯ್ಡು, ತ್ರಿಪುರಾಂಬ, ಆರ್ ನಾಗೇಂದ್ರರಾಯರು, ಲಕ್ಷ್ಮೀ ಬಾಯಿ, ಕಮಲ ಬಾಯಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು ಎಂದು ಮಾಹಿತಿ ಹಂಚಿಕೊಂಡರು

ಮಹಾರಾಷ್ಟ್ರದ ಕೊಲ್ಲಾಪುರದ ಬಳಿ ನಿರ್ಮಿಸಲಾಗಿದ್ದ ಸೆಟ್ ನಲ್ಲಿ ಚಿತ್ರದ ಚಿತ್ರೀಕರಣ ನಡೆದಿತ್ತು. ಸುಮಾರು ಎರಡು ಸಾವಿರ ಜನರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರಂತೆ. ವಿದ್ಯುತ್ ದೀಪಗಳಿಲ್ಲದೆ ಕೇವಲ ಸೂರ್ಯನ ಬೆಳಕನೇ ನಂಬಿಕೊಂಡು ಮಾಡಿದ ಚಿತ್ರವಿದು. ಈಗ ಚಿತ್ರವನ್ನು ಮರು ಸೃಷ್ಟಿ ಮಾಡಲು ಸೃಜನ್ ಲೋಕೇಶ್ ಮುಂದಾಗಿದ್ದಾರೆ. ನಿರ್ದೇಶನ ಮಾಡುತ್ತಿದ್ದೇನೆ. ಸುಬ್ಬಯ್ಯ ನಾಯ್ಡು ಈ ಚಿತ್ರದಲ್ಲಿ ಇಂದ್ರಜಿತುವಿನ ಪಾತ್ರದಲ್ಲಿ ನಟಿಸಿದ್ದರು. ಈಗ ಆ ಪಾತ್ರವನ್ನು ಸೃಜನ್ ಲೋಕೇಶ್ ಅವರೆ ಮಾಡುತ್ತಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಈ ಚಿತ್ರವನ್ನು ಮರುಸೃಷ್ಟಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ನಿಮ್ಮೆಲ್ಲರ ಸಹಕಾರ ನಮಗಿರಲಿ ಎಂದರು

ಸೃಜನ್ ಲೋಕೇಶ್ ಮಾತನಾಡಿ ತಾತಾ ನಾಯಕರಾಗಿ ನಟಿಸಿದ್ದ ಮೊದಲ ವಾಕ್ಚಿತ್ರ “ಸತಿ ಸುಲೋಚನ” ಬಿಡುಗಡೆಯಾಗಿ 91 ವರ್ಷಗಳಾಗಿದೆ ಈ ಸಂದರ್ಭದಲ್ಲಿ ಈ ಚಿತ್ರವನ್ನು ಮರು ಸೃಷ್ಟಿ ಮಾಡಲು ಲೋಕೇಶ್ ಪ್ರೊಡಕ್ಷನ್ಸ್ ಸಂಸ್ಥೆ ಮುಂದಾಗಿದೆ. ಚಿತ್ರವನ್ನು ಪಿ.ಶೇಷಾದ್ರಿ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಅಂದುಕೊಂಡ ಹಾಗೆ ಆದರೆ ಇಂದಿನಿಂದ ಒಂದು ವರ್ಷಕ್ಕೆ ಸರಿಯಾಗಿ ಅಂದರೆ 2026 ರ ಮಾರ್ಚ್ 3ರಂದು ಮರು ಸೃಷ್ಟಿಯಾದ ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ಹಂಚಿಕೊಂಡರು

ಈಗಾಗಲೇ ಕೆಲಸ ಆರಂಭಿಸಿದ್ದೇವೆ. ಈ ಚಿತ್ರವನ್ನು ಮರುಸೃಷ್ಟಿ ಮಾಡುವುದು ಸುಲಭದ ಮಾತಲ್ಲ. ಅದಕ್ಕೆ ಎಲ್ಲರ ಸಹಕಾರ ಅಗತ್ಯ. ಈ ಚಿತ್ರ ನನ್ನ ಕನಸು. ಹಾಗಾಗಿ “ಸತಿ ಸುಲೋಚನ” ಮರು ಸೃಷ್ಟಿ ಆಗಿ ಬಿಡುಗಡೆಯಾಗವವರೆಗೂ ನಾನು ಬೇರೆ ಯಾವುದೇ ವಿಷಯದ ಬಗ್ಗೆ ಗಮನ ಕೊಡುವುದಿಲ್ಲ. ನನ್ನ ಗಮನ ಬರೀ ಈ ಸಿನಿಮಾ ಮೇಲೆ ಮಾತ್ರ ಇರುತ್ತದೆ ಎಂದರು.

ಇನ್ನೂ ನಮ್ಮ ಕುಟುಂಬದ ಮತ್ತೊಂದು ವಿಶೇಷವೆಂದರೆ ನಮ್ಮ ತಾತಾ ಸುಬ್ಬಯ್ಯ ನಾಯ್ಡು ಅವರು ನಿರ್ಮಾಣ ಹಾಗೂ ನಿರ್ದೇಶನ ಮಾಡಿದ “ಭಕ್ತ ಪ್ರಹ್ಲಾದ” ಚಿತ್ರದ ಮೂಲಕ ಬಾಲ ಕಲಾವಿದನಾಗಿ ತಂದೆ ಲೋಕೇಶ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ನನ್ನ ತಂದೆ ಲೋಕೇಶ್ ಅವರು ತಮ್ಮ ನಿರ್ಮಾಣದ ಹಾಗೂ ನಿರ್ದೇಶನದ “ಬುಜಂಗಯ್ಯನ ದಶಾವತಾರಗಳು” ಚಿತ್ರದ ಮೂಲಕ ನನ್ನನ್ನು ಬಾಲನಟನಾಗಿ ಚಿತ್ರರಂಗಕ್ಕೆ ಕರೆತಂದರು. ಈಗ ನಾನು ನಿರ್ಮಿಸಿ, ನಿರ್ದೇಶಿಸುತ್ತಿರುವ “ಜಿ.ಎಸ್.ಟಿ” ಚಿತ್ರದ ಮುಖಾಂತರ ನನ್ನ ಮಗ ಸುಕೃತನನ್ನು ಬೆಳ್ಳತೆರೆಗೆ ಪರಿಚಯಿಸುತ್ತಿದ್ದೇನೆ. ಇದು ಸಾಧ್ಯವಾಗುವುದು ನಮ್ಮ ಭಾರತೀಯ ಚಿತ್ರರಂಗದಲ್ಲಿ ಮಾತ್ರ ಎಂದು ಮಾಹಿತಿ ಹಂಚಿಕೊಂಡರು

ಹಿರಿಯ ನಿರ್ದೇಶಕರಾದ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಗಿರೀಶ್ ಕಾಸರವಳ್ಳಿ, ಯೋಗರಾಜ್ ಭಟ್, ಹಿರಿಯ ಪತ್ರಕರ್ತೆ ಡಾ.ವಿಜಯ, ನಟಿ ಜಯಮಾಲ, ರಂಗಸಂಘಟಕ ಶ್ರೀನಿವಾಸ್ ಜಿ ಕಪ್ಪಣ್ಣ, ಪತ್ರಕರ್ತ ಚ.ಹ.ರಘುನಾಥ್ ಮುಂತಾದವರು ಸಂದರ್ಭದಲ್ಲಿ ಮಾತನಾಡಿ ಸೃಜನ್ ಲೋಕೇಶ್ ಹಾಗೂ ಪಿ.ಶೇಷಾದ್ರಿ ಅವರ ಈ ಪ್ರಯತ್ನ ಯಶಸ್ವಿಯಾಗಲೆಂದು ಶುಭ ಕೋರಿ ಹಾರೈಸಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin