ಮೇ.23 ರಂದು “ಕುಲದಲ್ಲಿ ಕೀಳ್ಯಾವುದೋ” ಬಿಡುಗಡೆ: ಶೀರ್ಷಿಕೆ ಗೀತೆ ಅನಾವರಣ ಮಾಡಿದ ಶತಾಯುಷಿ
ವಿಭಿನ್ನ ಕಥಾಹಂದರವೊಂದಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರ ಮೇ. 23ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಚಿತ್ರತಂಡ ಬಿಡುಗಡೆ ದಿನಾಂಕ ಪ್ರಕಟಿಸಿದ್ದು ಚಿತ್ರ ಯಶಸ್ವಿಯಾಗಲಿದೆ ಎನ್ನುವ ನಂಬಿಕೆ ಮತ್ತು ವಿಶ್ವಾಸ ಹೊಂದಿದೆ.
ಶೀರ್ಷಿಕೆ ಗೀತೆಯನ್ನು ಡಾ.ರಾಜಕುಮಾರ್ ಹುಟ್ಟುಹಬ್ಬದ ದಿನ ಶತಾಯುಷಿ ಸಾಲುಮರದ ತಿಮ್ಮಕ್ಕ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಯೋಗರಾಜ್ ಸಿನಿಮಾಸ್ ಅರ್ಪಿಸುವ ಸಂತೋಷ್ ಕುಮಾರ್ ಎ. ಕೆ ಮತ್ತು ವಿದ್ಯಾ ನಿರ್ಮಿಸಿರುವ, ಕೆ.ರಾಮನಾರಾಯಣ್ ನಿರ್ದೇಶನದಲ್ಲಿ “ಕಾಮಿಡಿ ಕಿಲಾಡಿಗಳು” ಖ್ಯಾತಿಯ ಮಡೆನೂರ್ ಮನು ಮತ್ತು ರಾಮಚಾರಿ ಧಾರಾವಾಹಿಯ ನಟಿ ಮೌನ ಗುಡ್ಡೆಮನೆ ನಾಯಕ-ನಾಯಕನಾಗಿ ನಟಿಸಿದ್ಧಾರೆ

ನಿರ್ದೇಶಕ ಕೆ. ರಾಮ್ ನಾರಾಯಣ್ ಮಾತನಾಡಿ “ಕುಲದಲ್ಲಿ ಕೀಳ್ಯಾವುದೋ” ಸರ್ವಕಾಲಿಕ ಜನಪ್ರಿಯ ಗೀತೆ. ಇಂತಹ ಜನಪ್ರಿಯ ಗೀತೆಯ ಸಾಲನಿಟ್ಟುಕೊಂಡು ಹಾಡು ಬರೆಯುವುದು ಅಷ್ಟು ಸುಲಭದ ಮಾತಲ್ಲ. ಹಾಡನ್ನು ಯೋಗರಾಜ್ ಭಟ್ ಅವರ ಹತ್ತಿರ ಬರೆಸುವುದು ಅಂತ ನಿರ್ಧಾರವಾಯಿತು. ಆದರೆ “ಮನದ ಕಡಲು” ಚಿತ್ರದ ಬಿಡುಗಡೆಯ ಬ್ಯುಸಿಯಲ್ಲಿದ್ದರು. ಹಾಗಾಗಿ ಅವರೆ ಈ ಹಾಡನ್ನು ಬರೆಯುವಂತೆ ಹೇಳಿದರು. ಆನಂತರ ಈ ಹಾಡು ಬರೆದೆ. ಸಂಗೀತ ನಿರ್ದೇಶಕ ಮನೋಮೂರ್ತಿ ಅವರಿಗೂ ಈ ಹಾಡು ಇಷ್ಟವಾಯಿತು. ಚೇತನ್ ಹಾಡಿರುವ ಈ ಶೀರ್ಷಿಕೆಗೀತೆಯಲ್ಲಿ ಯೋಗರಾಜ್ ಭಟ್ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ಹಾಡುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು
ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯೋಗರಾಜ್ ಭಟ್ ಮಾತನಾಡಿ ಡಾ.ರಾಜಕುಮಾರ್ ಜನ್ಮದಿನದಂದು ಹಿರಿಯರಾದ ಸಾಲುಮರದ ತಿಮ್ಮಕ್ಕ ಹಾಡನ್ನು ಬಿಡುಗಡೆ ಮಾಡಿಕೊಟ್ಟಿದ್ದಕ್ಕೆ ಅವರಿಗೆ ವಿಶೇಷ ಧನ್ಯವಾದ. ರಾಜಕುಮಾರ್ ಹುಟ್ಟುಹಬ್ಬದ ದಿನ ಅವರ ಸೂಪರ್ ಹಿಟ್ ಗೀತೆಯನ್ನೇ ಶೀರ್ಷಿಕೆಯಾಗಿ ಹೊಂದಿರುವ ಚಿತ್ರದ ಟೈಟಲ್ ಸಾಂಗ್ ಇಂದು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕರು ಹೇಳಿದಾರೊ ಅದನ್ನು ಮಾಡಿದ್ದೇನೆ. ಇತ್ತೀಚೆಗೆ ಚಿತ್ರವನ್ನು ನೋಡಿದಾಗ ಎಲ್ಲಾ ಕಲಾವಿದರ ಅಭಿನಯ ಮನಸ್ಸಿಗೆ ಹತ್ತಿರವಾಯಿತು. ತಂತ್ರಜ್ಞರ ಕಾರ್ಯವೈಖರಿಯೂ ಇಷ್ಟವಾಯಿತು. ರಾಮ್ ನಾರಾಯಣ್ ನಿರ್ದೇಶನದ ಬಗ್ಗೆ ಹೇಳುವ ಹಾಗೆ ಇಲ್ಲ. ಗ್ರಾಮೀಣ ಪ್ರತಿಭೆ ಮಡೆನೂರ್ ಮನು. ಆತನನ್ನು ಈ ಚಿತ್ರದ ಮೂಲಕ ನಾಯಕನನ್ನಾಗಿ ಮಾಡಿರುವ ನಿರ್ಮಾಪಕರಾದ ಸಂತೋಷ್ ಕುಮಾರ್ ಹಾಗೂ ವಿದ್ಯಾ ಅವರಿಗೆ ಧನ್ಯವಾದ ಎಂದು ಹೇಳಿದರು.
ನಿರ್ಮಾಪಕ ಸಂತೋಷ್ ಕುಮಾರ್ ಮಾತನಾಡಿ,ಚಿತ್ರ ಆರಂಭದಿಂದಲೂ ನಮಗೆ ತಾವು ನೀಡುತ್ತಿರುವ ಪ್ರೋತ್ಸಾಹಕ್ಕೆ ಚಿರ ಋಣಿ. ಟೈಟಲ್ ಸಾಂಗ್ ಬಿಡುಗಡೆಯಾಗಿದೆ. ಚಿತ್ರ ಮೇ 23 ತೆರೆಗೆ ಬರಲಿದೆ. ನಿಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು

ನಾಯಕ ಮಡೆನೂರ್ ಮನು ಮಾತನಾಡಿ, ಚಿತ್ರ ಮೇ 23 ಬಿಡುಗಡೆಯಾಗಲಿದೆ. ಯೋಗರಾಜ್ ಭಟ್ ಹಾಗೂ ನಿರ್ಮಾಪಕರ ಸಂತೋಷ್ ಕುಮಾರ್ ಅವರಿಗೆ ನಾನು ಆಬಾರಿ. ನಿರ್ದೇಶಕ ರಾಮ್ ನಾರಾಯಣ್ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರೆ ನಾಯಕಿ ಮೌನ ಗುಡ್ಡಮನೆ ಮಾತನಾಡಿ ಬಿಡುಗಡೆಯಾಗಿರುವ ಹಾಡು ಚೆನ್ನಾಗಿದೆ. ಒಂದೊಳ್ಳೆ ಚಿತ್ರದಲ್ಲಿ ಅಭಿನಯಿಸಿರುವ ಖುಷಿಯಿದೆ ಎಂದರು
ಹಿರಿಯ ನಟರಾದ ಉಮೇಶ್, ಕರಿಸುಬ್ಬು, ಡ್ರ್ಯಾಗನ್ ಮಂಜು, ಸೀನ, ಸಂಭಾಷಣೆ ಬರೆದಿರುವ ವಿಜಯಾನಂದ್ ಹಾಗೂ ಹಾಡಿನಲ್ಲಿ ಅಭಿನಯಿಸಿರುವ ನಟಿ ಯಶಸ್ವಿನಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದೀನ್ ಚಿತ್ರಕ್ಕೆ ಕಥೆ ಬರೆದಿದ್ದು, ಗೀತರಚನೆಕಾರರಾಗಿ, ನಿರ್ದೇಶಕರಾಗಿ ಜನಪ್ರಿಯರಾಗಿರುವ ಕೆ.ರಾಮನಾರಾಯಣ್ ನಿರ್ದೇಶನ ಮಾಡಿದ್ದಾರೆ. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಚಿತ್ರದ ಹಾಡುಗಳನ್ನು ಬರೆದಿದ್ದು ಮನೋಮೂರ್ತಿ ಸಂಗೀತ ನೀಡಿದ್ದಾರೆ. ಮಡೆನೂರ್ ಮನು, ಮೌನ ಗುಡ್ಡೆಮನೆ, ಶರತ್ ಲೋಹಿತಾಶ್ವ, ತಬಲನಾಣಿ, ಸೋನಾಲ್ ಮೊಂತೆರೊ, ಕರಿಸುಬ್ಬು, ಡ್ಯಾಗನ್ ಮಂಜು, ಸೀನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

