Review: A new and different film in Kannada: Avanirabekittu

Review: ಕನ್ನಡದಲ್ಲೊಂದು ಹೊಸತನದ ವಿಭಿನ್ನ ಚಿತ್ರ: “ಅವನಿರಬೇಕಿತ್ತು” - CineNewsKannada.com

Review: ಕನ್ನಡದಲ್ಲೊಂದು ಹೊಸತನದ ವಿಭಿನ್ನ ಚಿತ್ರ: “ಅವನಿರಬೇಕಿತ್ತು”

ಚಿತ್ರ: ಅವನಿರಬೇಕಿತ್ತು
ನಿರ್ದೇಶನ: ಅಶೋಕ್ ಸಾಮ್ರಾಟ್
ತಾರಾಗಣ: ಭರತ್, ಸೌಮ್ಯ, ಜಯಸಿಂಹ, ಪ್ರಶಾಂತ್ ಸಿದ್ದಿ, ಕಿರಣ್ ನಾಯಕ್, ಹಿರಿಯ ನಟಿ ಲಕ್ಷ್ಮಿದೇವಮ್ಮ ಮತ್ತಿತರರು
ರೇಟಿಂಗ್ : *** 3.5/5

ಕನ್ನಡದಲ್ಲಿ ಇತ್ತೀಚೆಗೆ ಹೊಸಬಗೆಯ ಹೊಸತರ ಕಂಟೆಂಟುಗಳನ್ನು ಮುಂದಿಟ್ಟುಕೊಂಡು ಹೊಸಬರು ಸಿನಿಮಾ ಮಾಡುತ್ತಿದ್ದಾರೆ. ಆ ಮೂಲಕ ಪ್ರೇಕ್ಷಕರ ಮನ ಗೆಲ್ಲುವಲ್ಲಿಯೂ ಯಶಸ್ವಿಯಾಗುತ್ತಿದ್ದಾರೆ. ಇಂತಹ ಮತ್ತೊಂದು ಪ್ರಯತ್ನ “ ಅವನಿರಬೇಕಿತ್ತು” ಚಿತ್ರ.

ಒಂದೇ ಹೆಸರು ಮತ್ತು ಒಂದೇ ತಂದೆಯ ಹೆಸರಿನ ವ್ಯಕ್ತಿಗಳು ಎದುರಿಸುವ ಕಾನೂನಾತ್ಮಕ ತೊಂದರೆ, ತೊಡಕು ಸೇರಿದಂತೆ ಗಂಭೀರ ವಿಷಯವನ್ನು ಮುಂದಿಟ್ಟುಕೊಂಡು ಮನಮುಟ್ಟುವಂತೆ ಚಿತ್ರವನ್ನು ತೆರೆಗೆ ಕಟ್ಟಿಕೊಡಲಾಗಿದೆ. ಈ ಮೂಲಕ ನಿರ್ದೇಶಕ ಅಶೋಕ್ ಸಾಮ್ರಾಟ್ ತಮ್ಮ ಪ್ರಯತ್ನದಲ್ಲಿ ಸಫಲರಾಗಿದ್ದಾರೆ.

ಮಾರ್ಕೆಟಿಂಗ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ದೇವು (ಭರತ್) ಮತ್ತು ಭವ್ಯ ( ಸೌಮ್ಯ) ಮಾಲೀಕನ ಅಣತಿಯಂತೆ ಅಂಗಡಿಗಳಿಗೆ ಹೋಗಿ ಶಾಪಿಂಗ್ ಮಾಡಿಕೊಂಡು ಬರಲು ನಾನಾ ಅವತಾರ ತಾಳುತ್ತಾರೆ. ಒಮ್ಮೆ ದಂಪತಿಯಾಗಿ, ಮತ್ತೊಮ್ಮೆ ಸ್ನೇಹಿತರಾಗಿ ಮಗದೊಮ್ಮ ಪೋಷಕರಾಗಿ ಹೀಗೆ ವಿಭಿನ್ನ ಅವತಾರ ಪರಿಚಯ ಸ್ನೇಹ, ಪ್ರೇಮಕ್ಕೆ ತಿರುಗತ್ತದೆ.

ಎಲ್ಲವೂ ಸಲೀಲಾಗಿ ಸಾಗುತ್ತದೆ ಎನ್ನುವಾಗಲೇ ದೇವು ಹಣಕಾಸಿನ ಸಮಸ್ಯೆಗೆ ಸಿಲುಕಿಕೊಳ್ಳುತ್ತಾನೆ. ತನ್ನದಲ್ಲದ ಸಾಲಕ್ಕೆ ಹೊಣೆಗಾರನಾಗಬೇಕಾಗುತ್ತದೆ. ಇದರ ಬೆನ್ನತ್ತಿದಾಗ ರಣರೋಚಕ ಸಂಗತಿ ಬಯಲಾಗುತ್ತದೆ. ತನಗೆ ಮೋಸ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಯಾರಿಗೂ ಗೊತ್ತಿಲ್ಲದ ಬಂದಿಸಿಡುತ್ತಾನೆ. ಬಂಧಿತ ವ್ಯಕ್ತಿಯನ್ನು ಬಿಡಿಸಿಕೊಳ್ಳಲು ಮತ್ತೊಬ್ಬ ಮಹಿಳೆ ಆಗಮನವಾಗುತ್ತದೆ. ಅಲ್ಲಿಂದ ಕಥೆ ಮತ್ತೊಂದು ಮಗ್ಗುಲು ತೆರೆದುಕೊಳ್ಳುತ್ತದೆ.

ನಾಯಕ ದೇವುಗೆ ಹಣಕಾಸಿನ ವಿಷಯದಲ್ಲಿ ಮೋಸ ಮಾಡಿದವರು ಯಾರು, ಬಂಧಿತ ವ್ಯಕ್ತಿಯ ಸಹಾಯಕಕ್ಕೆ ಬರುವ ಮಹಿಳೆ ಯಾರು, ಕೋಟ್ಯಂತರ ವ್ಯವಹಾರದ ಹಿಂದಿರುವ ವ್ಯಕ್ತಿಯಾರು ಎನ್ನುವುದು ಕುತೂಹಲಕಾರಿ ಸಂಗತಿ, ಅದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.

ಚಿತ್ರದ ಕಥಾವಸ್ತು ಕುತೂಹಲಭರಿತವಾಗಿದ್ದು ಅದನ್ನು ಕೊನೆತನಕ ಕುತೂಹಲವನ್ನು ಕಾಪಾಡಿಕೊಂಡು ಬಂದಿದ್ದಾರೆ ನಿರ್ದೇಶಕ ಅಶೋಕ್ ಸಾಮ್ರಾಟ್. ಪ್ರೇಕ್ಷಕನಿಗೆ ಎದುರಾಗುವ ಗೊಂದಲಗಳಿಗೆ ಸಮಜಾಯಿಷಿ ನೀಡುವ ಕೆಲಸವನ್ನು ಮಾಡಿದ್ದಾರೆ. ಒಂದೇ ಹೆಸರಿನ ವ್ಯಕ್ತಿಗಳು ಎದುರಿಸುವ ವಿಷಯ ಮತ್ತು ಅದರಿಂದಾಗುವ ಸಮಸ್ಯೆಯನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.

ನಾಯಕ ಭರತ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಅದೇ ರೀತಿ ನಾಯಕಿ ಸೌಮ್ಯ ಕೂಡ. ಉಳಿದಂತೆ ಜಯಸಿಂಹ, ಕಿರಣ್ ನಾಯಕ್, ಲಕ್ಷ್ಮಿ ದೇವಮ್ಮ, ಪ್ರಶಾಂತ್ ಸಿದ್ದಿ ಸೇರಿದಂತೆ ಇನ್ನಿತರೆ ಕಲಾವಿದರು ತಮ್ಮ ತಮ್ಮ ಕೆಲಸಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಚಿತ್ರದಲ್ಲಿ ಅಂದಕಾಲತ್ತಿಲ್, ಇಂದ ಕಾಲತ್ತಿಲ್, ಹಾಗು ಹೃದಯ ಹೃದಯಾ ಹಾಡುಗಳು ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿವೆ. ಲೋಕಿ ತಪಸ್ಯ ಸಂಗೀತ, ದೇವರಾಜ ಪೂಜಾರಿ ಕ್ಯಾಮರಾ ಚಿತ್ರಕ್ಕೆ ಪೂರಕವಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin