25 ವರ್ಷಗಳ ನಂತರ “ಯಜಮಾನ” ಚಿತ್ರ ಮರು ಬಿಡುಗಡೆ
2000 ನೇ ಇಸವಿಯಲ್ಲಿ ತೆರೆಕಂಡ ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಅಭಿನಯದ, ಮೆಹರುನ್ನಿಸಾ ರೆಹಮಾನ್ ನಿರ್ಮಾಣದ ಹಾಗೂ ಆರ್ ಶೇಷಾದ್ರಿ – ರಾಧಾ ಭಾರತಿ ನಿರ್ದೇಶನದ “ಯಜಮಾನ” ಚಿತ್ರ ಇದೇ ನವೆಂಬರ್ 7 ರಂದು ರಾಜ್ಯಾದ್ಯಂತ ಮರು ಬಿಡುಗಡೆಯಾಗುತ್ತಿದೆ.
ಜನಮೆಚ್ಚಿದ ಚಿತ್ರ ಆಧುನಿಕ ತಂತ್ರಜ್ಞಾನದಿಂಸ ಸಿಂಗಾರಗೊಂಡಿದೆ. ಮುನಿಸ್ವಾಮಿ ಎಸ್ ಡಿ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ.
ನಿರ್ಮಾಪಕ ರೆಹಮಾನ್ ಮಾತನಾಡಿ ಈ ಚಿತ್ರ ಆಗಲು ಪ್ರಮುಖ ಕಾರಣ ಗುರು ಸಮಾನರಾದ ವಿಷ್ಣುವರ್ಧನ್ ಹಾಗೂ ಕೆ.ವಿ.ನಾಗೇಶ್ ಕುಮಾರ್. 130ಕ್ಕೂ ಹೆಚ್ಚು ಕಡೆ ಶತದಿನೋತ್ಸವ, 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇಪ್ಪತ್ತೈದು ವಾರ ಹಾಗೂ 4 ಕಡೆಗಳಲ್ಲಿ 1 ವರ್ಷ ಈ ಸಿನಿಮಾ ಓಡಿದೆ. 25 ವರ್ಷಗಳ ಹಿಂದೆಯೇ 35 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದ ಚಿತ್ರವಿದು. ವಿಷ್ಣುವರ್ಧನ್, ಪ್ರೇಮ, ಶಶಿಕುಮಾರ್, ಅಭಿಜಿತ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ ಹೀಗೆ ಅನೇಕ ಕಲಾವಿದರ ಅದ್ದೂರಿ ತಾರಾಬಳಗವಿರುವ ಈ ಚಿತ್ರವನ್ನು ಈಗ ಮುನಿಸ್ವಾಮಿ ಅವರು ಮರು ಬಿಡುಗಡೆ ಮಾಡುತ್ತಿದ್ದಾರೆ. ಹಿಂದೆ ನೀವು ನೀಡಿದ ಗೆಲುವಿಗಿಂತ ದೊಡ್ದ ಗೆಲುವನ್ನು ಈಗ ನೀಡಿ ಎಂದರು.

ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಮಾತನಾಡಿ “ಯಜಮಾನ” ಚಿತ್ರವನ್ನು ಡಿಐ ಬಳಸಿ 4ಕೆ ಡಿಜಿಟಲ್ ಪ್ರೊಜೆಕ್ಷನ್ಸ್ ಗೆ ತಯಾರು ಮಾಡಲಾಗಿದೆ. ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡಿರುವ ಚಿತ್ರಮಂದಿರಗಳಲ್ಲಿ ವೀಕ್ಷಿಸಬಹುದು.ಮೋನೊ ಟ್ರ್ಯಾಕ್ ನಲ್ಲಿದ್ದ ಚಿತ್ರದ ಕಲಾವಿದರ ಧ್ವನಿಗಳನ್ನು ಸಹ 5.1 ಹಾಗೂ 7.1 ಡಿಜಿಟಲ್ ಸೌಂಡ್ ಗೆ ಬಹಳ ಕಷ್ಟಪಟ್ಟು ವರ್ಗಾಯಿಸಲಾಗಿದೆ. ಹಾಡುಗಳಿಗೂ ಸಹ ಇದೇ ರೀತಿ ನೂತನ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ಹೇಳಿದರು
ವಿತರಕ ಮುನಿಸ್ವಾಮಿ ಮಾತನಾಡಿ ವಿಷ್ಣುವರ್ಧನ್ ಅಭಿಮಾನಿ. ಅವರ ಮೇಲಿನ ಪ್ರೀತಿಯಿಂದ “ಯಜಮಾನ” ಚಿತ್ರವನ್ನು ಈಗಿನ ತಂತ್ರಜ್ಞಾನವನ್ನು ಅಳವಡಿಸಿ ಮರು ಬಿಡುಗಡೆ ಮಾಡುತ್ತಿದ್ದೇನೆ ಎಂದರು
ಚಿತ್ರದಲ್ಲಿ ನಟಿಸಿರುವ ಶಶಿಕುಮಾರ್, ಅಭಿಜಿತ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಸಂಭಾಷಣೆ ಬರೆದಿದ್ದ ರವಿಶ್ರೀವತ್ಸ ಮುಂತಾದವರು “ಯಜಮಾನ” ಚಿತ್ರದ ಅನುಭವಗಳನ್ನು ಹಂಚಿಕೊಂಡರು

