Land Lord Movie Review : ಶೋಷಣೆ – ದಬ್ಬಾಳಿಕೆ ಹೋರಾಟದ ಅಸ್ತ್ರಕ್ಕೆ ನೆಲ ಮೂಲದ ಕಥೆಯ ಸ್ಪರ್ಶ
ಚಿತ್ರ : ಲಾಂಡ್ ಲಾರ್ಡ್
ನಿರ್ದೇಶನ : ಜಡೇಶ್ ಕುಮಾರ್ ಹಂಪಿ
ತಾರಾಗಣ : ವಿಜಯ್ ಕುಮಾರ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ, ರಿತನ್ಯ ವಿಜಯ್ ಕುಮಾರ್, ಉಮಾಶ್ರೀ, ರಾಕೇಶ್ ಅಡಿಗ,ಭಾವನಾ ರಾವ್, ಅಚ್ಯುತ್ ಕುಮಾರ, ಸಂಪತ್ ಮೈತ್ರೇಯಾ,ಅವಿನಾಶ್, ಶರತ್ ಲೋಹಿತಾಶ್ಚ ಮತ್ತಿತರರು
ರೇಟಿಂಗ್ : **** 4 / 5
ಜೀತ ಪದ್ದತಿ, ಕೂಲಿ ಕಾರ್ಮಿಕರ ನೋವು, ಸಂಕಟ, ಯಾತನೆ, ಜಮೀನ್ದಾರರ ಶೋಷಣೆ, ದಬ್ಬಾಳಿಕೆಯಲ್ಲಿ ನಲುಗಿಹೋದ ಜನರ ನೆಲಮೂಲದ ಕಥೆಯನ್ನು ನೈಜ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟಿರುವ ಕೋಲಾರದ ಮಣ್ಣಿನ ಸೊಗಡಿನ ಚಿತ್ರ ” ಲಾಂಡ್ ಲಾರ್ಡ್”.
ತಂದೆ – ಮಗಳ ಬಾಂಧವ್ಯ, ಮದ್ಯ ವಯಸ್ಸಿನ ಗಂಡ – ಹೆಂಡತಿಯ ಅಸೆ, ತುಮುಲ, ಜಮೀನ್ದಾರನ ಎದುರು ತನ್ನ ಹಕ್ಕುಗಳಿಗಾಗಿ ಹೋರಾಟ ಮಾಡುವ ಅನಿವಾರ್ಯ ಸ್ಥಿತಿಗೆ ಸಿಲುಕಿದ ಅಮಾಯಕ ಬಡಪಾಯಿ ರೈತನ ರೋದನೆ, ವೇದನೆ, ಜಾತಿಯ ಸಂಕೋಲೆಯಲ್ಲಿ ಸಿಲುಕಿ ಒದ್ದಾಡಿದ ಜನರ ಕಥೆ ಇದೆ. ಜೊತೆಗೆ ಬಡವ- ಬಲ್ಲಿದ ನಡುವಿನ ಸಂಘರ್ಷ,ಜೀತ ಪದ್ದತಿಯ ಕರಾಳ ಮುಖಗಳನ್ನು ಅನಾವರಣ ಮಾಡಿರುವ ಚಿತ್ರ ಇದು.
ಕಾಟೇರದಂಥ ಯಶಸ್ವೀ ಚಿತ್ರದ ಕಥೆ ರಚಿಸಿದ್ದ ಜಡೇಶ್ ನಿರ್ದೇಶನವಿರುವ ಲ್ಯಾಂಡ್ ಲಾರ್ಡ್ ತೆರೆಕಂಡಿದೆ, ಅನುಭವಿ ಮತ್ತು ಪಕ್ವ ಕಲಾವಿದ ದುನಿಯಾ ವಿಜಯ್ ಹಾಗು ಪುತ್ರಿ ರಿತನ್ಯ ಚಿತ್ರದಲ್ಲಿ ತಂದೆ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರಕ್ಕೆ ಫ್ಲಸ್ ಪಾಯಿಂಟ್, ರಾಚಯ್ಯವ ಪಾತ್ರದಲ್ಲಿ ನಟ ವಿಜಯ್ ಕುಮಾರ್ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ.
ವಿಶೇಷವಾಗಿ ವಿಜಯ್ ಕುಮಾರ್ ಮತ್ತು ರಿತನ್ಯ ಇಬ್ಬರೂ ತಂದೆ ಮಗಳಾಗಿ ಚಿತ್ರದಲ್ಲಿ ಕಾಣಿಸಕೊಳ್ಳುವ ಮೂಲಕ ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸಿ ಜೊತೆ ಇದ್ದೇನೆ ಮುನ್ನುಗ್ಗು ಎನ್ನುವ ಸಂದೇಶ ನೀಡಿದ್ದಾರೆ.
ರಾಚಯ್ಯ ( ವಿಜಯ್ ಕುಮಾರ್ ) ಬಡ ರೈತ. ಜೊತೆಗೆ ಪುಟ್ಟ ಕುಟುಂಬ ತಾಯಿ (ಉಮಾಶ್ರೀ), ಪತ್ನಿ ನಿಂಗವ್ವ (ರಚಿತಾರಾಮ್) ,ಮಗಳು ಭಾಗ್ಯ (ರಿತನ್ಯ) ಜತೆ ಕೂಲಿ ಕೆಲಸ ಮಾಡಿದರರೂ ಅದರಲ್ಲಿ ನೆಮ್ಮದಿ ಕಂಡವ. ಹುಲಿದುರ್ಗದ ಜಮೀನ್ದಾರ ಚಿಕ್ಕೆಯಜಮಾನ್ರು ( ರಾಜ್ ಬಿ. ಶೆಟ್ಟಿ) ಬಡ ರೈತರ ಹೊಲಗಳನ್ನೆಲ್ಲ ತನ್ನ ಕೈವಶ ಮಾಡಿಕೊಂಡು, ರೈತರನ್ನೇ ಜೀತದಾಳು ಮಾಡಿಕೊಂಡು ದರ್ಪ, ದೌರ್ಜನ್ಯ ಮರೆದಾತ
ದುಡಿಯುವ ಜನರಿಗೆ ಕೂಲಿ ಕಾಸು ಕೊಡದೆ, ಕಾಳು ಕಡ್ಡಿ ಕೊಟ್ಟು ಬಾಯಿ ಮುಚ್ಚಿಸುವ ಜಾಯಮಾನದವ. ಆ ಊರಲ್ಲಿ ಅವನು ಮಾಡಿದ್ದೇ ಕಾನೂನು, ಹೇಳಿದ್ದೇ ಶಾಸನ,ಹೀಗಾಗಿ ಅವನನ್ನು ವಿರೋದಿಸುವ ಜನರೇ ಇಲ್ಲ.ಜೊತೆ ಆತ ಹೇಳಿದ್ದೇ ವೇದ ವಾಕ್ಯ. ಮಾಡಿದ್ದೇ ಕಾನೂನು. ಇಂತಹ ಸಮಯದಲ್ಲಿ ರಾಚಯ್ಯ ಮತ್ತು ಆತನ ಮಗಳು ಭಾಗ್ಯ ಜೊತೆ ಸೇರಿ ಚಿಕ್ಕ ಯಜಮಾನ್ರ ಅಟ್ಟಹಾಸ ಹೇಗೆ ಅಡಗಿಸುತ್ತಾರೆ ಎನ್ನುವುದು ಚಿತ್ರದ ಕಥನ ಕುತೂಹಲದ ಸಂಗತಿ.
ಕೋಲಾರ ಭಾಗದಲ್ಲಿ 1980-90ರ ದಶಕದ ಕಾಲಘಟ್ಟದಲ್ಲಿ ಕಥೆ ಸಾಗುತ್ತದೆ. ಇಡೀ ಚಿತ್ರವನ್ನು ನೈಜತೆ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಂದು ಪಾತ್ರವೂ ಗಮನ ಸೆಳೆಯುತ್ತಿವೆ.ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ನಿರ್ದೇಶಕ ಜಡೇಶ್ ಹಂಪಿ ಯಶಸ್ವಿಯಾಗಿದ್ದಾರೆ.
ರಾಚಯ್ಯನಾಗಿ ನಟ ವಿಜಯ ಕುಮಾರ್ ಮನಮುಟ್ಡುವ ಅಭಿನಯ ನೀಡಿದ್ದಾರೆ. . ಆಕ್ಷನ್, ಭಾವನಾತ್ಮಕ ಸನ್ನಿವೇಶಗಳಲ್ಲಿ ನೀರು ಕುಡಿದಷ್ಡು ಸಲೀಸಾಗಿ ನಿರ್ವಹಿಸಿದ್ದಾರೆ.
ನಟಿ ರಚಿತಾರಾಮ್ ನಿಂಗವ್ವ ಎಂಬ ದಿಟ್ಟ ಹೆಣ್ಣುಮಗಳಾಗಿ, ಡಿ-ಗ್ಲಾಮ್ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ, ಯುವ ನಟಿ ರಿತನ್ಯ ಮೊದಲ ಚಿತ್ರದಲ್ಲಿ ಗಮನ ಸೆಳೆದಿದ್ದು ಭವರಸೆಯ ನಟಿಯಾಗುವ ವಿಶ್ವಾಸ ಮೂಡಿಸಿದ್ದಾರೆ
ಇಷ್ಟವಾಗುತ್ತಾರೆ. ರಾಜ್ ಬಿ ಶೆಟ್ಟಿ ಈವರೆಗಿನ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಉಮಾಶ್ರೀ, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ರಾಕೇಶ್ ಅಡಿಗ, ಶಿಶಿರ್, ಭಾವನರಾವ್, ಸಂಪತ್ ಮೈತ್ರೇಯಾ ಸೇರಿ ಹಲವು ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ
ಸ್ವಾಮಿಗೌಡ ಕ್ಯಾಮೆರಾ,. ಅಜನೀಶ್ ಲೋಕನಾಥ್ ಸಂಗೀತ ಪೂರಕವಾಗಿದೆ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

