ಕರಾವಳಿ ಪ್ರದೇಶದಲ್ಲಿ ನಡೆಯುವ ಗ್ಯಾಂಗ್ಸ್ಟರ್ ಕಥೆ `ಕಡಲ್ ಕೋಟೆ’ ಚಿತ್ರ ಆರಂಭ
ಕರಾವಳಿ ಪ್ರದೇಶದಲ್ಲಿ ನಡೆಯುವ ಗ್ಯಾಂಗ್ಸ್ಟರ್ ಕಥೆ ಆಧರಿಸಿದ ಚಿತ್ರ `ಕಡಲ್ ಕೋಟೆ’ ಆರಂಭವಾಗಿದೆ. ವಸಿಷ್ಠ ಸಿಂಹ ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರಕ್ಕೆ ಸುರತ್ಕಲ್ನ ಶ್ರೀ ಕ್ಷೇತ್ರ ಗಣೇಶಪುರದ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆದಿದೆ.

ಧರ್ಮೇಂದ್ರ ನಿರ್ಮಿಸುತ್ತಿರುವ, ರಂಜಿತ್ ಕುಮಾರ್ ಗೌಡ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಮಂಗಳೂರಿನ ಲೋಕಾಯುಕ್ತ ಎಸ್.ಪಿ ಬಿ.ಪಿ. ದಿನೇಶ್ ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. ನಿವೃತ್ತ ಲೋಕಾಯುಕ್ತ ಕಮಿಷನರ್ ನಟರಾಜ್, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷರಾದ ಉದಯ್ ಪೂಜಾರಿ ಉಪಸ್ಥಿತರಿದ್ದು, ಶುಭ ಹಾರೈಸಿದರು.
ಮಹೂರ್ತದ ಬಳಿಕ ಮಾತಿಗಿಳಿದ ನಿರ್ದೇಶಕ ರಂಜಿತ್ ಕುಮಾರ್ ಗೌಡ, `ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್, ಸ್ನೇಹ, ಪ್ರೀತಿ ಎಲ್ಲವೂ ಇರುತ್ತದೆ. ದುಡ್ಡಿನ ಹಿಂದೆ ಮನುಷ್ಯ ಬಿದ್ದರೆ, ಅವನ ಜೀವನದಲ್ಲಿ ಏನೆಲ್ಲಾ ಘಟಿಸುತ್ತದೆ.ಹಾರ್ಬರ್ ಮೇಲೆ ಹಿಡಿತ ಸಾಧಿಸುವ ಕಥೆ ಇದು. ಹಾರ್ಬರ್ ನಲ್ಲಿ ನಡೆಯುವ ಶೋಷಣೆ ಮತ್ತು ಸಂಘರ್ಷ, ಇದರ ನಡುವೆ ಬೆಂಕಿಯಲ್ಲಿ ಅರಳಿದ ಹೂವು ಎನ್ನುವಂತೆ ನಾಯಕ ಹೇಗೆ ಎದ್ದು ಬರುತ್ತಾನೆ ಎಂದು ಚಿತ್ರದಲ್ಲಿ ಹೇಳುತ್ತಿದ್ದೇವೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಒಂದಿಷ್ಟು ನೈಜ ಘಟನೆಗಳನ್ನು ಆಧರಿಸಿ ಈ ಕಥೆ ಮಾಡಿದ್ದೇವೆ. ಉಡುಪಿ, ಸುರತ್ಕಲ್, ಮಂಗಳೂರು ಹಾರ್ಬರ್, ಬೇಂಗ್ರೆ ಮುಂತಾದ ಕಡೆ ಸುಮಾರು 65 ದಿನಗಳಲ್ಲಿ ಚಿತ್ರೀಕರಣ ಮಾಡುವ ಯೋಚನೆ ಇದೆ. ಕಥೆಗೆ ಪೂರಕವಾದ ಲೊಕೇಶನ್ಗಳು ಸಿಕ್ಕಿವೆ. ಚಿತ್ರದಲ್ಲಿ ಐದು ಹಾಡುಗಳಿವೆ’ ಎಂದು ಹೇಳಿದರು.

ನಿರ್ಮಾಪಕ ಧರ್ಮೇಂದ್ರ ಮಾತನಾಡಿ ತಾವು ನೋಡಿದ ಮತ್ತು ಕೇಳಿದ ಒಂದಿಷ್ಟು ಘಟನೆಗಳನ್ನು, ನಿರ್ದೇಶಕ ರಂಜಿತ್ ಅವರಿಗೆ ಹೇಳಿದಾಗ ಕಥೆ ರೂಪುಗೊಂಡಿದೆ `ಚಿತ್ರದಲ್ಲಿ ಅದ್ಭುತ ತಾರಾಬಳಗವಿದೆ. ಒಂದಿಷ್ಟು ಒಳ್ಳೆಯ ಕಲಾವಿದರಿದ್ದಾರೆ. ಎಂದರು
ನಾಯಕ ವಸಿಷ್ಠ ಸಿಂಹ ಮಾತನಾಡಿ, ಚಿತ್ರದಲ್ಲಿ ಪ್ರತಿಯೊಂದು ಪಾತ್ರವನ್ನೂ ಬಹಳ ಅಚ್ಚುಕಟ್ಟಾಗಿ ಬರೆದಿದ್ದಾರೆ ಮತ್ತು ಒಳ್ಳೆಯ ಬರವಣಿಗೆಯೇ ಚಿತ್ರ ಒಪ್ಪಿಕೊಳ್ಳುವುದಕ್ಕೆ ಮುಖ್ಯ ಕಾರಣ. ಸುತ್ತಮುತ್ತಲಿನ ಭಾಗದಲ್ಲಿ ನಡೆದ ಹಲವಾರು ಘಟನೆಗಳನ್ನಾಧರಿಸಿ ಕಥೆ ಮಾಡಿದ್ದಾರೆ. ಕಥೆ ವಿಭಿನ್ನವಾಗಿದೆ ಎನ್ನುವುದಕ್ಕಿಂತ ಹೆಚ್ಚು ನೈಜವಾಗಿದೆ ಮತ್ತು ಮನಸ್ಸಿಗೆ ಬಹಳ ಹತ್ತಿರವಾಗುವಂತಿದೆ ಎಂಬ ಕಾರಣಕ್ಕೆ ಒಪ್ಪಿಕೊಂಡೆ. ಗ್ಯಾಂಗ್ಸ್ಟರ್ ಕಥೆಯದರೂ, ಚಿತ್ರದಲ್ಲಿ ಒಳ್ಳೆಯ ಮೌಲ್ಯಗಳಿವೆ. ಬಹಳ ದಿನಗಳ ನಂತರ ನಾನು ಒಂದು ಮಾಸ್ ಪಾತ್ರವನ್ನು ಮಾಡುತ್ತಿದ್ದೇನೆ. ರವಿಶಂಕರ್À ಜೊತೆಗೆ À್ನ ಮೂರನೆಯ ಚಿತ್ರ. ಅವರ ಜೊತೆಗೆ ನಟಿಸುತ್ತಿರುವುದು ಬಹಳ ಖುಷಿಯ ವಿಷಯ’ ಎಂದರು.

ರವಿಶಂಕರ್ ಮಾತನಾಡಿ ಚಿತ್ರದಲ್ಲಿ ಸೂತ್ರಧಾರನ ಪಾತ್ರ ಮಾಡುತ್ತಿದ್ದಾರಂತೆ. `ರಂಜಿತ್ ಕಥೆ ಹೇಳಿದಾಗ, ನನಗೆ ಅವರ ಕ್ಲಾರಿಟಿ ಬಹಳ ಇಷ್ಟವಾಯಿತು. ಇದರಲ್ಲಿ ಬಹಳ ಮುಖ್ಯವಾದ ಪಾತ್ರವಿದೆ. ನಾನೇನು ಪಾತ್ರ ಮಾಡುತ್ತಿದ್ದೇನೆ ಎಂದು ಹೇಳಿಬಿಟ್ಟರೆ, ಕಥೆ ಬಿಟ್ಟುಕೊಟ್ಟಂತಾಗುತ್ತದೆ. ನನ್ನ ಪಾತ್ರದ ಮೂಲಕ ಇಡೀ ಕಥೆ ನಡೆಯುತ್ತದೆ. ಇದು ನನಗೆ ಇನ್ನೊಂದು ಒಳ್ಳೆಯ ಚಿತ್ರವಾಗುತ್ತದೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು
`ಕಡಲ್ ಕೋಟೆ’ ಚಿತ್ರದಲ್ಲಿ ವಸಿಷ್ಠ ಸಿಂಹ ಅವರಿಗೆ ನಾಯಕಿಯಗಿ ಸುಷ್ಮಿತಾ ಭಟ್ ನಟಿಸುತ್ತಿದ್ದು, ಮಿಕ್ಕಂತೆ ರವಿಶಂಕರ್, ಅಚ್ಯುತ್ ಕುಮಾರ್, ಸ್ವರಾಜ್ ಶೆಟ್ಟಿ, ಶರತ್ ಲೋಹಿತಾಶ್ವ, ತಾರಾ, ಬಲ ರಾಜವಾಡಿ, ಯಶ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ, ವೀನಸ್ ನಾಗರಾಜ ಮೂರ್ತಿ ಛಾಯಾಗ್ರಹಣ ಮತ್ತು ಪವನ್ ಗೌಡ ಅವರ ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಪವನ್ ಕುಮಾರ್ ಉಡುಪಿ ಕಾರ್ಯ ನಿರ್ವಹಿಸುತ್ತಿದ್ದಾರೆ.

