ಗುಡಿಸಲ್ಲಿ ಹುಟ್ಟಿ ಅಸಾಧಾರಣ ಸಾಧನೆ ಮಾಡಿದ ಅಪ್ರತಿಮ ಸಾಧಕ ಬೆಂಕೋಶ್ರೀ
ಗುಡಿಸಲ್ಲಿ ಹುಟ್ಟಿ, ಕಡುಬಡತನವನ್ನೇ ಉಂಡು ಬದುಕು ಸಾಗಿಸಿದ ವ್ಯಕ್ತಿ, ಸಿನಿಮಾ ಮೇಲಿನ ಪ್ರೀತಿ ವ್ಯಾಮೋಹ ಒಂದೆಡೆಯಾದರೆ ಪಿಯರ್ಲೆಸ್ ಕಂಪನಿಯಲ್ಲಿ ಕೆಲಸ,ಡಾ, ರಾಜ್ ಕುಮಾರ್ ಅಭಿಮಾನಿ ಸಂಘದ ಕಟ್ಟಾಳು, ಬಿಲ್ಡರ್, ಸದಭಿರುಚಿಯ ಚಿತ್ರಗಳ ನಿರ್ಮಾಪಕ, ವಿತರಕ, ಬರಹಗಾರನಾಗಿ ಅಪ್ರತಿಮ ಸಾಧನೆ ಮಾಡಿದ ಮಹಾನ್ ಸಾಧಕ ಬಿ.ಕೆ ಶ್ರೀನಿವಾಸ ( ಬೆಂಕೋಶ್ರೀ).

ನಿರ್ಮಾಪಕ ಬಿ.ಕೆ.ಶ್ರೀನಿವಾಸ್(ಬೆಂ.ಕೊ.ಶ್ರೀ) ಅವರ ಸಿನಿಮಾ, ವ್ಯಾಪಾರ, ಹೋರಾಟ, ಅಜೇಯ ಮನೋಬಲದ ಯಶೋಗಾಥೆ ಒಳನ್ನೊಳಗೊಂಡ ‘ಬಿ.ಕೆ.ಶ್ರೀನಿವಾಸ ಒಂದು ಅಸಾಮಾನ್ಯ ಜೀವನಯಾನ’ ಪುಸ್ತಕದ ಬಿಡುಗಡೆಯಾಗಿದ್ದು ಈ ಮೂಲಕ ಹೊಸದೊಂದು ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ಧಾರೆ
ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಪುಸ್ತಕನ್ನು ಲೋಕಾರ್ಪಣೆ ಮಾಡಿ ಆಶೀರ್ವಚಿಸಿದ್ದಾರೆ. ಈ ವೇಳೆ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರುಗಳಾದ ಕೆ.ವಿ.ಚಂದ್ರಶೇಖರ್, ಸಾ.ರಾ.ಗೋವಿಂದು, ಪತ್ರಕರ್ತ ಜೋಗಿ, ನಿರೂಪಕಿ, ನಟಿ ಜಾಹ್ನವಿ, ಬೆಂಕೋಶ್ರೀ ಪತ್ನಿ,ಪುತ್ರ,ಸೊಸೆ ಸೇರಿದಂತೆ ಹಲವು ಗಣ್ಯರು ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು

ಈ ವೇಳೆ ಮಾತನಾಡಿದ ನಿರ್ಮಾಪಕ ಬಿ,ಕೆ ಶ್ರೀನಿವಾಸ, ಕಡುಬಡ ಕುಟುಂಬದಿಂದ ಬಂದವನು. ಗುಡಿಸಲಿನಲ್ಲಿ ಹುಟ್ಟಿದ ನಾನು ಓದಿದ್ದು 9 ನೇ ತರಗತಿ.ಒದು ತಲೆಗೆ ಹತ್ತಲಿಲ್ಲ ಹಸು ಸಾಕಿ ಹಾಲು ಹಾಕುತ್ತಿದ್ದೆ. ಹೀಗಾಗಿ ಹಲವರು ಹಾಲು ಸೀನ ಎಂದೇ ಕರೆಯುತ್ತಿದ್ದರು, ಸಿನಿಮಾ ಮೇಲೆ ತುಂಬಾ ಹುಚ್ಚಿತ್ತು. ಈ ಕಾರಣಕ್ಕಾಗಿಯೇ ಈಗಿನ ವಿರೇಶ್ ಚಿತ್ರಮಂದಿರದಲ್ಲಿ ಟಿಕೆಟ್ ಕೊಡುವ ಕೆಲಸಕ್ಕೆ ಸೇರಿಕೊಂಡಿದ್ದೆ. ಆ ನಂತರ ಪಿಯರ್ ಲೆಸ್ ಕಂಪನಿ ಸೇರಿ ಕೆಲಸ ಮಾಡಿದೆ, ರಾಜ್ ಕುಮಾರ್ ಅಭಿಮಾನಿ ಸಂಘದಲ್ಲಿ ಮಾಡದ ಕೆಲಸಗಳಿಲ್ಲ. ಆ ನಂತರ ಸಿನಿಮಾ ನಿರ್ಮಾಣ ಮಾಡಿ ಅದರಲ್ಲೇ ಸ್ವಲ್ಪ ಕಳೆದುಕೊಂಡೆ. ಕಷ್ಟದಲ್ಲಿದ್ದ ಸಮಯದಲ್ಲಿ ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಗುರುಗಳು ನನ್ನನ್ನು ಆಶೀರ್ವದಿಸಿದ್ದರು, ಈಗಲೂ ಬಂದಿದ್ದಾರೆ. ಆರು ವರ್ಷಗಳ ಹಿಂದೆ ನನ್ನ ಹಾಗೂ ಗುರುಗಳ ಭೇಟಿಯಾಗಿತ್ತು ಎಂದು ತಾವು ಜೀವನದಲ್ಲಿ ಬೆಳೆದುಬಂದ ಹಾದಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಪತ್ರಕರ್ತ ಜೋಗಿ ಮಾತನಾಡಿ ಬೆಂಕೋಶ್ರೀ ಅವರ ಸಿನಿಮಾಗಳನ್ನು ನೋಡಿ, ಅದರ ಬಗ್ಗೆ ಬರೆದಿದ್ದೇವೆ. ಅವರ ಹಾಲು ಶ್ರೀನಿವಾಸ ಅಲ್ಲ, ಆಲ್ ಶ್ರೀನಿವಾಸ, ಒಳ್ಳೆಯ ಸಿನಿಮಾ ಮಾಡುವುದು ಅವರ ಫ್ಯಾಷನ್ ಆಗಿತ್ತು. ಅವರು ಸಾಧನೆ ದೊಡ್ಡದು ಎಂದರು.

ಸಾ.ರಾ.ಗೋವಿಂದು ಮಾತನಾಡಿ, ಶ್ರೀನಿವಾಸ ಅವರು ತಾವು ಬೆಳೆದುಬಂದ ದಾರಿ ಹೇಳಿಕೊಂಡಿದ್ದಾರೆ. ನಾನು ಹತ್ತು ಸಾವಿರ ರಾಜಕುಮಾರ್ ಅಭಿಮಾನಿಗಳ ಸಂಘ ಮಾಡಿದೆ. ಸುರ್ವೆ ಅವರ ಜತೆ ಸೇರಿ ಇವರೂ ಅಭಿಮಾನಿಗಳ ಸಂಘ ಮಾಡಿದ್ದರು. ಅಲ್ಲಿಗೆ ನಾನು ಕೂಡ ಹೋಗಿದ್ದೆ. ಅವರ ಚಟುವಟಿಕೆ ನೋಡಿದಾಗಲೇ ಹೇಳಿದ್ದೆ. ಬೆಂಕೋಶ್ರೀ ಮುಂದೆ ದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತಾರೆ ಅಂತ. ಅವರು ನನ್ನ ಮಗನನ್ನು ಮೊದಲಬಾರಿಗೆ ಹೀರೋ ಮಾಡಿದ್ದರು. ಅದರೆ ಅವರನ್ನು ಚಿತ್ರರಂಗ ಕೈ ಹಿಡಿಯಲಿಲ್ಲ. ಆದರೆ ಅವರು ತಮ್ಮ ನೋವನ್ನು ಎಲ್ಲೂ ಹೇಳಿಕೊಳ್ಳಲಿಲ್ಲ ಎಂದರು.

ನಿರೂಪಕಿ ಜಾಹ್ನವಿ ಮಾತನಾಡಿ ನಮ್ಮೆಲ್ಲರಿಗೂ ಬೆಂಕೋಶ್ರೀ ಅವರು ಸ್ಪೂರ್ತಿ. ಓದಲು ಬಾರದ ವ್ಯಕ್ತಿ, ತಮ್ಮ ಜೀವನ ಗಾಥೆಯನ್ನು ನಾವೆಲ್ಲ ಓದುವಂತೆ ಮಾಡಿದ್ದಾರೆ. ಅವರ ಸಾಧನೆ ಬಹಳ ದೊಡ್ಡದು ಎಂದರು.

