“ಕರ್ಣಾಟಬಲಂ ಅಜೇಯಂ” ಚಿತ್ರದ ಮೂಲಕ ಮತ್ತೊಬ್ಬ ಭರವಸೆಯ ಯುವ ನಟ ಧ್ಯಾನ್ ಚಿತ್ರರಂಗ ಪ್ರವೇಶ
ಕಳೆದ ನಾಲ್ಕು ದಶಕಗಳಿಂದ ಚಿತ್ರರಂಗದ ಒಡನಾಟ ಹೊಂದಿರುವ ಶಾಸಕ ಸಿಪಿ ಯೋಗೇಶ್ವರ್, ಇದೀಗ 25 ವರ್ಷಗಳ ಬಳಿಕ ಮರಳಿ ಚಿತ್ರರಂಗಕ್ಕೆ ಬಂದಿದ್ಧಾರೆ. ಈ ಬಾರಿ ಅವರು ಪುತ್ರ ಧ್ಯಾನ್ ಯೋಗೇಶ್ವರ್ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿದ್ದಾರೆ. ಈ ಮೂಲಕ ಒಟ್ಟಿಗೆ ಎರಡು ಸಿನಿಮಾ ಪ್ರಕಟಿಸಿ ಅವುಗಳ ಮುಹೂರ್ತ ನಡೆಸಿದ್ದಾರೆ, ಎರಡೂ ಚಿತ್ರಗಳಲ್ಲಿ ಅಪ್ಪ- ಮಗ ನಟಿಸುತ್ತಿದ್ದಾರೆ.

“ಕರ್ನಾಟಬಲಂ ಅಜೇಯಂ’ ಚಿತ್ರವನ್ನು ಹಿರಿಯ ನಿರ್ದೇಶಕ ಎಸ್, ನಾಗಣ್ಣ ನಿರ್ದೇಶನ ಮಾಡುತ್ತಿದ್ದಾರೆ, ಸೈನಿಕ-2 ಚಿತ್ರವನ್ನು ಯುವ ನಿರ್ದೇಶಕ ಪುನೀತ್ ರುದ್ರನಾಗ್ ಆಕ್ಷನ್ ಕಟ್ ಹೇಳುತ್ತಿದ್ದು ಎರಡೂ ಚಿತ್ರಗಳನ್ನು ಶೀಲಾ ಯೋಗೇಶ್ವರ್ ನಿರ್ಮಾಣ ಮಾಡುತ್ತಿದ್ದಾರೆ.
“ಕರ್ನಾಟಬಲಂ ಅಜೇಯಂ” ಚಿತ್ರಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕ್ಲಾಪ್ ಮಾಡಿದರು, ಈ ಕ್ಷಣಕ್ಕೆ ಶಾಸಕರಾದ ಡಾ,ಎಂ,ಸಿ ಸುಧಾಕರ್, ಉದಯ್ ಕದಲೂರು, ರವಿ, ಮೋಹನ್ ನಿರ್ಮಾಪಕರಾದ ಸಾ.ರಾ.ಗೋವಿಂದು, ವಿಶ್ವಪ್ರಸಾದ್, ರಾಕ್ ಲೈನ್ ವೆಂಕಟೇಶ್, ಲಹರಿ ವೇಲು, ನಿರ್ದೇಶಕ ಸಂತೋಷ್ ಆನಂದರಾಮ್ ಮತ್ತಿತರು ಸಾಕ್ಷಿಯಾದರು

ಧ್ಯಾನ್ ಭವಿಷ್ಯ ಉಜ್ವಲವಾಗಲಿ: ಸಿಎಂ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ ಸಾಮಾನ್ಯವಾಗಿ ಯಾವುದೇ ಸಿನಿಮಾದ ಮಹೂರ್ತ ಸಮಾರಂಭಕ್ಕೆ ತೆರಳುವುದಿಲ್ಲ. ಶಾಸಕ ಮಿತ್ರ ಯೋಗೀಶ್ವರ್ ಪ್ರೀತಿಯ ಆಹ್ವಾನದ ಮೇರೆಗೆ ಬಂದಿದ್ದೇನೆ. “ಕರ್ಣಾಟಬಲಂ ಅಜೇಯಂ” ಚಿತ್ರದ ಮೂಲಕ ಯೋಗೀಶ್ವರ್ ಪುತ್ರ ಧ್ಯಾನ್, ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಒಳ್ಲೆಯದಾಗಲಿ. ಟೀಸರ್ ನೋಡಿದಾಗ ಧ್ಯಾನ್ ನಟನೆ ಕಲಿತು ಬಂದು ಅಭಿನಯಿಸುತ್ತಿದ್ದಾರೆ. ಯೋಗೀಶ್ವರ್ ಸಹ ಈ ಹಿಂದೆ ನಟರಾಗಿ ಜನಪ್ರಿಯರಾದವರು. ಅವರು ಈಗ ಅಭಿನಯಕ್ಕೆ ಮರಳಿ ಬಂದಿದ್ದಾರೆ. ಧ್ಯಾನ್ ನನ್ನ ಮಗ ಇದ್ದ ಹಾಗೆ. ಚಿತ್ರರಂಗದ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.
ಸಂಕ್ರಾಂತಿಗೆ ತೆರೆಗೆ ತರುವ ಉದ್ದೇಶ
ಸಿಪಿ ಯೋಗೇಶ್ವರ್ ಮಾತನಾಡಿ 25 ಷರ್ವಗಳ ಹಿಂದೆ ಸೈನಿಕ ಚಿತ್ರಕ್ಕೆ ಡಿಕೆ ಶಿವಕುಮಾರ್ ಕ್ಲಾಪ್ ಮಾಡಿ ಶುಭ ಹಾರೈಸಿದ್ದರು. ಕಾಕತಾಳೀಯ ಎನ್ನುವಂತೆ ಈಗ ಮಗನ ಮೊದಲ ಚಿತ್ರಕ್ಕೆ ಮುಖ್ಯಮಂತ್ರಿಯಾಗಿ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ, ನಟನಾಗಿಯೇ ನಲವತ್ತು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದವನು. ಆನಂತರ ರಾಜಕೀಯಕ್ಕೆ ಬಂದೆ. ಈಗ ಮರಳಿ ಚಿತ್ರರಂಗಕ್ಕೆ ಬಂದಿದ್ದೇನೆ. ನನ್ನ ಮಗ ಧ್ಯಾನ್ ಯೋಗೀಶ್ವರ್ , ಈ ಎರಡು ಚಿತ್ರಗಳ ಮೂಲಕ ನಾಯಕನಾಗಿ ಚಿತ್ರರಂಗ ಮಾಡುತ್ತಿದ್ದಾನೆ. ಅದರಲ್ಲಿ ಮೊದಲು “ಕರ್ಣಾಟಬಲಂ ಅಜೇಯಂ” ಚಿತ್ರ ಆರಂಭವಾಗಲಿದೆ. ಮುಂದಿನ ಸಂಕ್ರಾಂತಿ ಸಮಯಕ್ಕೆ “ಕರ್ಣಾಟಬಲಂ ಅಜೇಯಂ” ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಈ ಚಿತ್ರವನ್ನು ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶಿಸುತ್ತಿದ್ದಾರೆ. ಇದೊಂದು ಕನ್ನಡದ ಮಣ್ಣಿನ ಕಥೆ. ನಾಯಕನಾಗಲು ಬೇಕಾದ ಪೂರ್ವತಯಾರಿಗಳನ್ನೆಲ್ಲಾ ಮಾಡಿಕೊಂಡು ಮಗ ಆಗಮಿಸಿದ್ದಾನೆ ಎಂದರು

ಬಾದಾಮಿಯ ಕೋಟೆಯಲ್ಲಿ ಇರುವ ಕುಟುಂಬಗಳ ಒಬ್ಬ ಯುವಕನ ಪಾತ್ರದಲ್ಲಿ ಧ್ಯಾನ್ ನಟಿಸುತ್ತಿದ್ದಾರೆ, ಹುಡುಗನಿಗೆ ಇತಿಹಾಸದ ತಿಳಿದುಕೊಳ್ಳುವ ಆಸೆ, ಇಂತಹ ವಿಷಯವನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ, ಇಮ್ಮಡಿ ಪುಲಿಕೇಶಿ ಕುರಿತ ಚಿತ್ರವಾಗಿರುವ ಹಿನ್ನೆಲೆಯಲ್ಲಿ ಅದಕ್ಕೆ ಬೇಕಾದ ಎಲ್ಲಾ ಸಿದ್ದತೆ, ಸಂಶೋಧನೆಯನ್ನೂ ಮಾಡಿಕೊಂಡು ಕಥೆ ರಚಿಸಿದ್ದೇವೆ ಎಂದು ಹೇಳಿದರು
ನಾಯಕ ಧ್ಯಾನ್ ಯೋಗೇಶ್ವರ್ ಮಾತನಾಡಿ, ಚಿತ್ರಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದೇನೆ ಚಿತ್ರದಲ್ಲಿ ನಟಿಸಲು ಕಾತುರನಾಗಿದ್ದೇನೆ, ತಂದೆ-ತಾಯಿಗೆ ಸದಾ ಅಬಾರಿ ಎಂದರು
ಮಣ್ಣಿನ ಇತಿಹಾಸದ ಬಗ್ಗೆ ಮಾಹಿತಿ : ನಾಗಣ್ಣ
ನಿರ್ದೇಶಕ ಎಸ್. ನಾಗಣ್ಣ ಮಾತನಾಡಿ ಭಾರತದ ಮಣ್ಣಿನಲ್ಲಿ ಸಾಕಷ್ಟು ಇತಿಹಾಸಗಳು ಸೃಷ್ಟಿಯಾಗಿದೆ. ಇದನ್ನು ನಾವು ನಮ್ಮ ಮಕ್ಕಳಿಗೆ ತಿಳಿಸುವುದು ಕರ್ತವ್ಯ. ಅದನ್ನು ಸಿನಿಮಾ ಮೂಲಕ ತೋರಿಸಿದಾಗ ಜನರಿಗೆ ಬೇಗ ತಲುಪುತ್ತದೆ. “ಕರ್ಣಾಟಬಲಂ ಅಜೇಯಂ” ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. ಆರನೇ ಶತಮಾನದಲ್ಲಿ ಇಮ್ಮಡಿ ಪುಲಕೇಶಿಯ ಆಡಳಿತದಲ್ಲಿ ಬಾದಾಮಿ ಹೇಗಿತ್ತು. ಈಗ ಹೇಗಿದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು

ಯೋಗಿಶ್ವರ್ ಅವರೆ ಕಥೆಯ ಜವಾಬ್ದಾರಿ ನಿರ್ವಹಣೆ ಮಾಡಿದ್ದಾರೆ. ಎಂ.ಎಸ್ ರಮೇಶ್, ವಿಶ್ವ ಹಾಗೂ ಗುರುರಾಜ್ ದೇಸಾಯಿ ಕಥಾವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಮಾಡುತ್ತಿದ್ದಾರೆ. ನುರಿತ ತಂತ್ರಜ್ಞರು ಹಾಗೂ ಅನುಭವಿ ಕಲಾವಿದರು ಈ ಚಿತ್ರದಲ್ಲಿರುತ್ತಾರೆ. ಧ್ಯಾನ್ ಅವರನ್ನು ಚಿತ್ರರಂಗಕ್ಕೆ ನಾಯಕನಾಗಿ ಪರಿಚಯಿಸುವ ಮೊದಲ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ನನಗೆ ನೀಡಿರುವುದಕ್ಕೆ ಸಿ.ಪಿ.ಯೋಗೀಶ್ವರ್ ಅವರಿಗೆ ಧನ್ಯವಾದ ಎಂದು ಹೇಳಿದರು
ಮಿಸ್ ಯೂನಿವರ್ಸ್ ಆಗಮನ
ಮಿಸ್ ಯುನಿವರ್ಸ್ ಇಂಡಿಯಾ ಮಣಿಕ ವಿಶ್ವಕರ್ಮ ಹಾಗೂ ಮಿಸ್ ಯುನಿವರ್ಸ್ ಇಂಡಿಯಾ ರನ್ನರ್ ಅಪ್ ರೇಖಾ ಪಾಂಡೆ “ಕರ್ಣಾಟಬಲಂ ಅಜೇಯಂ” ಚಿತ್ರದ ನಾಯಕಿಯರಾಗಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ಬಹಳ ಖುಷಿಯಾಗಿದೆ ಎಂದು ತಿಳಿಸಿದರು.

ತೆಲುಗಿನ ಹಿರಿಯ ನಟ ಜಗಪತಿ ಬಾಬು ಮಾತನಾಡಿ ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ, ಮರಳಿ ಬಂದಿರುವುದಕ್ಕೆ ಖುಷಿಯಾಗಿದೆ ಎಂದರೆ ಮತ್ತೊಬ್ಬ ತೆಲುಗಿನ ಹಿರಿಯ ನಟಿ ಲಯ, ಈ ಹಿಂದೆ ಗಂಡುಗಲಿ ಕುಮಾರರಾಮ ಚಿತ್ರದಲ್ಲಿ ನಟಿಸಿದ್ದೆ. ಈಗ 20 ವರ್ಷಗಳ ಬಳಿಕ ಕನ್ನಡದಲ್ಲಿ ನಟಿಸುತ್ತಿದ್ದೇನೆ, ಧ್ಯಾನ್ ತಾಯಿಯ ಪಾತ್ರ ಎಂದರು
ಕಾರ್ಯಕಾರಿ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಮಾತನಾಡಿ ಸಿ.ಪಿ.ಯೋಗೀಶ್ವರ್ ಅವರು ಮೂವತ್ತು ವರ್ಷಗಳ ಪರಿಚಯ. “ಸೈನಿಕ” ಚಿತ್ರದ ಸಮಯದಲ್ಲೂ ಅವರ ಜೊತಗಿದೆ. ಈಗ ಅವರ ಮಗ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೂ ಅವರ ಜೊತೆಗಿರುವುದು ಸಂತೋಷವಾಗಿದೆ ಎಂದು ಹೇಳಿದರು

ಕರ್ಣಾಟಬಲಂ ಅಜೇಯಂ” ಚಿತ್ರದ ಹಾಡುಗಳ ಕುರಿತು ವಿ.ಹರಿಕೃಷ್ಣ ಮಾಹಿತಿ ನೀಡಿ ಹೊಸ ನಾಯಕನಿಗೆ ಮೊದಲ ಚಿತ್ರದಲ್ಲಿ ಇಷ್ಟೊಂದು ಭಾರ ಬೇಕಾ ಎಂದು ನಿರ್ಮಾಪಕ ಸಿಪಿ ಯೇಗೇಶ್ವರ್ ಅವರನ್ನು ಕೇಳಿದ್ದೆ, ಕಥೆ ಡಿಮಾಂಡ್ ಮಾಡುತ್ತೆ ಇರಲಿ ಎಂದರು, ಹೀಗಾಗಿ ನಾವೆಲ್ಲಾ ಯುವ ನಟ ಧ್ಯಾನ್ಗೆ ಸಂಪೂರ್ಣ ಬೆಂಬಲ ನೀಡಲು ನಿಂತಿದ್ದೇವೆ ಎಂದರು.
ಛಾಯಾಗ್ರಾಹಕರಾದ ಶೇಖರ್ ಚಂದ್ರ ಹಾಗೂ ಸಂಕೇತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


