ಸ್ಟೈಲೀಶ್ ಅವತಾರದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ: ಅಜಿತ್ ‘ವಿಡಮುಯಾರ್ಚಿ’ಯಲ್ಲಿ ನಟನೆ

ಹಿರಿಯ ನಟ ಅಜಿತ್ ಕುಮಾರ್ ನಟಿಸುತ್ತಿರುವ ‘ವಿಡಮುಯಾರ್ಚಿ’ ಕಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ನಡಿ ಬಹಳ ಅದ್ಧೂರಿಯಾಗಿ ಈ ಚಿತ್ರ ಮೂಡಿ ಬರುತ್ತಿದ್ದು ಕನ್ನಡಿಗ ಅರ್ಜುನ್ ಸರ್ಜಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ಅಜಿತ್ ಡೇಂಜರಸ್ ಸ್ಟಂಟ್ ವಿಡಿಯೋ ವೈರಲ್ ಆದ್ಮೇಲಂತೂ ಪ್ರೇಕ್ಷಕರನ್ನು ಒಂಟಿಗಾಲಲ್ಲಿ ನಿಲ್ಲಿಸಿದೆ. ಇದೀಗ ಮಿಡಮುಯಾರ್ಚಿ ಸಿನಿಮಾದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.
ವೈವಿಧ್ಯಮಯ ಪಾತ್ರಗಳ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಅರ್ಜುನ್, ‘ವಿಡಮುಯಾರ್ಚಿ’ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಆಕ್ಷನ್ ಕಿಂಗ್ ರಸ್ತೆಯ ಮೇಲೆ ಸ್ಟೈಲಿಶ್ ಆಗಿ ನಿಂತಿದ್ದಾರೆ. ಹಿನ್ನಲೆಯಲ್ಲಿ ಅಜಿತ್ ಅವರ ಸಿಲೂಯೆಟ್ ನಿಗೂಢತೆ ಮತ್ತು ನಿರೀಕ್ಷೆಯ ಭಾವವನ್ನು ಹುಟ್ಟುಹಾಕುತ್ತದೆ. ‘ಪ್ರಯತ್ನಗಳು ಎಂದಿಗೂ ವಿಫಲವಾಗುವುದಿಲ್ಲ’ ಎಂಬ ಕುತೂಹಲ ಕೆರಳಿಸುವ ಅಡಿಬರಹವು ಚಿತ್ರದ ಸುತ್ತಲಿನ ಕುತೂಹಲವನ್ನು ಹೆಚ್ಚಿಸಿದೆ.
ಅಜಿತ್ ಅವರ ವೃತ್ತಿಜೀವನದಲ್ಲಿ, ಬ್ಲಾಕ್ಬಸ್ಟರ್ ಚಲನಚಿತ್ರಗಳಲ್ಲಿ ಒಂದಾದ `ಮಂಗತ’ ಅಜಿತ್ ಕುಮಾರ್, ತ್ರಿಶಾ ಮತ್ತು ಆಕ್ಷನ್ ಕಿಂಗ್ ಅರ್ಜುನ್ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಈಗ ಮತ್ತೊಮ್ಮೆ ಈ ಮೂರೂ ಪ್ರೇಕ್ಷಕರ ಮನಸೂರೆಗೊಳ್ಳಲಿದೆ. ಅಲ್ಲದೆ, ಆರವ್, ರೆಜಿನಾ ಕಸ್ಸಂದ್ರ, ನಿಖಿಲ್ ಮತ್ತು ಇತರರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಮಾಗಿಲ್ ತಿರುಮೇನಿ ನಿರ್ದೇಶನದ ಈ ಚಿತ್ರಕ್ಕೆಡ ಕಾಲಿವುಡ್ ಮ್ಯೂಸಿಕಲ್ ರಾಕ್ ಸ್ಟಾರ್ ಅನಿರುದ್ಧ್ ಈಗಾಗಲೇ ಚಾರ್ಟ್ ಬಸ್ಟರ್ ಆಲ್ಬಂ ಅನ್ನು ಸಿದ್ಧಪಡಿಸುತ್ತಿದ್ದಾರೆ. ಓಂ ಪ್ರಕಾಶ್ ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಎನ್.ಬಿ.ಶ್ರೀಕಾಂತ್ ಸಂಕಲನಕಾರರಾಗಿ ಮತ್ತು ಮಿಲನ್ ಕಲಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ಸುಂದರ್ ಸಾಹಸ ಸಂಯೋಜನೆ ಮಾಡುತ್ತಿದ್ದರೆ, ಅನು ವರ್ಧನ್ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸುಬ್ರಮಣಿಯನ್ ನಾರಾಯಣನ್ ಕಾರ್ಯಕಾರಿ ನಿರ್ಮಾಪಕರಾಗಿ, ಜೆ.ಗಿರಿನಾಥನ್ ಮತ್ತು ಕೆ.ಜಯಶೀಲನ್ ನಿರ್ಮಾಣ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ.
ಅಜಿತ್ ಕುಮಾರ್ ಅಭಿನಯದ `ವಿಡಮುಯಾರ್ಚಿ’ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಸನ್ ಟಿವಿ ಪಡೆದುಕೊಂಡಿದ್ದರೆ, ಓ ಟಿ ಟಿ ಹಕ್ಕುಗಳನ್ನು ನೆಟ್‍ಫ್ಲಿಕ್ಸ್ ಪಡೆದುಕೊಂಡಿದೆ. ಈ ಚಿತ್ರವನ್ನು ಅಕ್ಟೋಬರ್ 31 ರಂದು ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ.