ನಟ ರೂಪೇಶ್ ಶೆಟ್ಟಿ ಈಗ ತಮಿಳು ಸಿನಿಮಾದತ್ತ ಹೆಜ್ಜೆ
ತುಳುನಾಡ ಕುವರ ರೂಪೇಶ್ ಶೆಟ್ಟಿ ಈಗ ತಮಿಳು ಸಿನಿರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ. ಸರ್ಕಸ್ ಸಿನಿಮಾ ಮೂಲಕ ತುಳು ಸಿನಿಮಾರಂಗದಲ್ಲಿ ಸಕ್ಸಸ್ ಕಂಡಿದ್ದ ರಾಕ್ ಸ್ಟಾರ್ ಸ್ಯಾಂಡಲ್ ವುಡ್ ನಲ್ಲಿ “ಅಧಿಪತ್ರ” ಹೊರಡಿಸಿದ್ದಾರೆ.
ಬಿಗ್ ಬಾಸ್ ನಿಂದ ಹೊರಬಂದ ತಕ್ಷಣ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುವವರ ನಡುವೆ ರೂಪೇಶ್ ಅಳೆದು ತೂಗಿ ಅಧಿಪತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಅಧಿಪತ್ರ ಚಿತ್ರದ ಜೊತೆಗೆ ಮತ್ತೆರೆಡು ಹೊಸ ಕನ್ನಡ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ರೂಪೇಶ್ ಈಗ ತಮಿಳು ಸಿನಿಮಾರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್ 9 ವಿನ್ನರ್ ಆಗಿರುವ ರಾಕ್ ಸ್ಟಾರ್ ರೂಪೇಶ್, ಸನ್ನಿಧಾನಮ್ ಎಂಬ ತಮಿಳು ಪ್ರಾಜೆಕ್ಟ್ ನಲ್ಲಿ ನಟಿಸಿದ್ದಾರೆ. ವಿಶೇಷ ಅಂದ್ರೆ ತಮಿಳು ಸಿನಿರಂಗದ ಹಾಸ್ಯ ದಿಗ್ಗಜ ಯೋಗಿಬಾಬು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದು, ಅವರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವ ಸಂತಸದಲ್ಲಿದ್ದಾರೆ ರೂಪೇಶ್.
ಮಧುರಾವ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ಅಮುದ ಸಾರಥಿ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಸನ್ನಿಧಾನಮ್ ಚಿತ್ರದ ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಜೂನ್ ನಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ತಯಾರಿ ನಡೆಸುತ್ತಿದೆ. ನಾಲ್ಕು ಭಾಷೆಯಲ್ಲಿ ಸನ್ನಿಧಾನಮ್ ನಿರ್ಮಾಣವಾಗುತ್ತಿದೆ.
ತುಳು ಚಿತ್ರರಂಗದಲ್ಲಿ ನಾನಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಾ, ನಟನಾಗಿ, ನಿರ್ದೇಶಕನಾಗಿ ನೆಲೆ ಕಂಡುಕೊಂಡಿದ್ದವರು ರೂಪೇಶ್ ಶೆಟ್ಟಿ. ಅದರ ಬೆನ್ನಲ್ಲೇ ಬಿಗ್ಬಾಸ್ ವಿಜೇತರಾಗಿಯೂ ಹೊರಹೊಮ್ಮಿದರು. ಬಳಿಕ ಕನ್ನಡದ ಸಿನಿಮಾ ಅವಕಾಶಗಳ ಬಾಗಿಲೂ ತೆರೆಯಿತು. ತುಳು, ಕನ್ನಡ ಮಾತ್ರವಲ್ಲ ತೆಲುಗು, ಕೊಂಕಣಿ ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರೂಪೇಶ್ ಅವರನ್ನು ತಮಿಳುಚಿತ್ರರಂಗ ರತ್ನ ಕಂಬಳಿ ಹಾಸಿ ಸ್ವಾಗತಿಸಿದೆ.