ತಮಿಳುನಟ ಸೂರ್ಯ ನಟನೆಯ ಹೊಸ ಚಿತ್ರಕ್ಕೆ ಹೊಂಬಾಳೆ ಸಂಸ್ಥೆ ಬಂಡವಾಳ ಹೂಡಿಕೆ
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ತನ್ನ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ವಿಜಯ್ ಕಿರಗಂದೂರು ನಿರ್ಮಿಸಲಿರುವ ಚಿತ್ರಕ್ಕಾಗಿ ಜನಪ್ರಿಯ ನಟ ಸೂರ್ಯ, ನಟಿ ಕಾಯಾದು ಲೋಹರ್ ಮತ್ತು ಖ್ಯಾತ ನಿರ್ದೇಶಕ ಟಿ. ಜೆ. ಜ್ಞಾನವೇಲ್ ಕೈಜೋಡಿಸಿದ್ದಾರೆ

ಭಾರತೀಯ ಚಿತ್ರರಂಗದ ಯಶಸ್ವಿ ನಟರಲ್ಲಿ ಒಬ್ಬರಾದ ಸೂರ್ಯ, ಕಳೆದ ಎರಡು ದಶಕಗಳಿಂದ ತಮ್ಮ ವೈವಿಧ್ಯಮಯ ನಟನೆ ಮತ್ತು ಧೀಮಂತ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಎರಡು ರಾಷ್ಟ್ರ ಪ್ರಶಸ್ತಿಗಳು ಹಾಗೂ ಏಳು ಫಿಲ್ಮ್ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ಕೇವಲ ನಟನೆಯಷ್ಟೇ ಅಲ್ಲದೆ ಉತ್ತಮ ಸಂದೇಶವಿರುವ ಸಿನಿಮಾಗಳನ್ನು ನಿರ್ಮಿಸುವ ಮೂಲಕವೂ ಗುರುತಿಸಿಕೊಂಡಿದ್ದಾರೆ.
ಇವರೊಂದಿಗೆ ಕೈಜೋಡಿಸಿರುವ ನಿರ್ದೇಶಕ ಟಿ. ಜೆ. ಜ್ಞಾನವೇಲ್ `ಜೈ ಭೀಮ್’ ಚಿತ್ರದ ಮೂಲಕ ದೇಶಾದ್ಯಂತ ಅಪಾರ ಪ್ರಶಂಸೆ ಗಳಿಸಿದವರು. ಸಾಮಾಜಿಕ ಕಳಕಳಿ, ಭಾವನಾತ್ಮಕ ಆಳ ಮತ್ತು ದಿಟ್ಟ ಕಥಾಹಂದರಕ್ಕೆ ಹೆಸರಾಗಿರುವ ಜ್ಞಾನವೇಲ್, ಇಂದಿನ ಭಾರತೀಯ ಚಿತ್ರರಂಗದ ವಿಶಿಷ್ಟ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ಕೆ.ಜಿ.ಎಫ್',ಕಾಂತಾರ’ ಮತ್ತು `ಸಲಾರ್’ ನಂತಹ ಬೃಹತ್ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಬರೆದಿದೆ. ಪ್ರಾದೇಶಿಕ ಗಡಿಗಳನ್ನು ಮೀರಿ, ವಿಭಿನ್ನ ಆಲೋಚನೆಗಳ ತಂತ್ರಜ್ಞರಿಗೆ ಮುನ್ನಲೆಗೆ ತರುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಕಥೆಗಳನ್ನು ಈ ಸಂಸ್ಥೆ ನಿರಂತರವಾಗಿ ಬೆಂಬಲಿಸುತ್ತಾ ಬಂದಿದೆ.
ಹೊಂಬಾಳೆ ಸಂಸ್ಥೆಯ ವಿಜಯ್ ಕಿರಂಗದೂರು ಮಾತನಾಡಿ ಚಿತ್ರರಂಗದ ಮೇಲಿನ ಅಪಾರ ಪ್ರೀತಿ ಹಾಗೂ ಒಂದೇ ರೀತಿಯ ಯೋಚನೆ ಉಳ್ಳವರು ಒಂದಾದಾಗ ಅತ್ಯುತ್ತಮ ಸಿನಿಮಾ ಮೂಡಿಬರಲು ಸಾಧ್ಯ ಎಂದು ಹೊಂಬಾಳೆ ಫಿಲ್ಮ್ಸ್ ಸದಾ ನಂಬುತ್ತದೆ. ಸೂರ್ಯ ಮತ್ತು ಟಿ. ಜೆ. ಜ್ಞಾನವೇಲ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ತಲುಪುವಂತಹ ಒಂದು ಪ್ರಾಮಾಣಿಕ ಹಾಗೂ ಅರ್ಥಪೂರ್ಣ ಕಥೆಯನ್ನು ಹೇಳುವ ನಿಟ್ಟಿನಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ ಎಂದಿದ್ಧಾರೆ
ಚಿತ್ರಕ್ಕೆ ಸಾಯಿ ಅಭ್ಯಂಕರ್ ಅವರ ಸಂಗೀತ ನಿರ್ದೇಶನವಿದ್ದು, ಎಸ್. ಆರ್. ಕದಿರ್ ಅವರ ಛಾಯಾಗ್ರಹಣವಿದೆ. ಚಿತ್ರದ ಕಲಾ ನಿರ್ದೇಶನವನ್ನು ಕೆ. ಕದಿರ್ ನಿರ್ವಹಿಸುತ್ತಿದ್ದು, ಫಿಲೋಮಿನ್ ರಾಜ್ ಅವರ ಸಂಕಲನ ಕಾರ್ಯವಿರಲಿದೆ.

ಚೆನ್ನೈನ ಪಾರ್ಕ್ ಹ್ಯಾಟ್ನಲ್ಲಿ ನಡೆದ ಭವ್ಯ ಮುಹೂರ್ತ ಸಮಾರಂಭದೊಂದಿಗೆ ಅಧಿಕೃತವಾಗಿ ಆರಂಭವಾಗಿದೆ. ಚಿತ್ರತಂಡ ಹಾಗೂ ಚಿತ್ರರಂಗದ ಗಣ್ಯರು ಪಾಲ್ಗೊಂಡಿದ್ದ ಈ ಸಮಾರಂಭ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಒಕ್ಕೂಟಕ್ಕೆ ಸಾಕ್ಷಿಯಾಯಿತು.
ಪ್ರತಿಭಾವಂತ ನಟ, ಭರವಸೆಯ ನಟಿ, ದೀರ್ಘದೃಷ್ಟಿಯುಳ್ಳ ನಿರ್ದೇಶಕ ಹಾಗೂ ಯಶಸ್ವಿ ನಿರ್ಮಾಣ ಸಂಸ್ಥೆ ಒಟ್ಟಾಗಿರುವ ಈ ಚಿತ್ರವು, ಜಗತ್ತಿನಾದ್ಯಂತ ಎಲ್ಲಾ ತಲೆಮಾರಿನ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಸೃಷ್ಟಿಯಾಗುವ ಭರವಸೆ ಮೂಡಿಸಿದೆ.

