ಟೀಸರ್ ಮೂಲಕ ಸದ್ದು ಮಾಡುತ್ತಿದೆ GL0PIXS ಅರ್ಪಿಸುವ “ಯದ್ಭಾವಂ ತದ್ಭವತಿ”
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈಗಾಗಲೇ 54 ಪ್ರಶಸ್ತಿಗಳು ಬಂದಿದೆ.
ಬ್ರಹ್ಮ ಸಿನಿಮಾ ಹಾಲಿಕ್ ಡಿಜಿಟಲ್ ಸ್ಟುಡಿಯೋಸ್ ಹಾಗೂ ಬಿ.ಸಿ.ಡಿ ಸ್ಟುಡಿಯೋಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ, GlOPIXS ಅರ್ಪಿಸುವ “ಯದ್ಭಾವಂ ತದ್ಭವತಿ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ಟೀಸರ್ ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
“ಯದ್ಭಾವಂ ತದ್ಭವತಿ” ಅಂದರೆ ನಾವು ಜಗತ್ತನ್ನು ಯಾವ ರೀತಿ ನೋಡುತ್ತೇವೊ, ಜಗತ್ತು ನಮ್ಮನ್ನು ಅದೇ ರೀತಿ ನೋಡುತ್ತದೆ ಎಂದು. ಈ ಹಿಂದೆ ಹಾಲಿವುಡ್ ಚಿತ್ರವೊಂದನ್ನು ನೋಡಿದ್ದೆ. ಆಗ ಈ ರೀತಿಯ ಕಾನ್ಸೆಪ್ಟ್ ನ ಚಿತ್ರ ಮಾಡಬೇಕೆಂದು ಕೊಂಡೆ. ಚಿತ್ರದಲ್ಲಿ ನಾನೊಬ್ಬನೆ ನಟ. ಆದರೆ ಮೂರು ಪಾತ್ರ. ಮೂರು ಬೇರೆ ಬೇರೆ ರೀತಿಯ ಪಾತ್ರ. ನಿರ್ದೇಶನವನ್ನೂ ನಾನೇ ಮಾಡಿದ್ದೇನೆ. ಇನ್ನೂ ಖುಷಿಯ ವಿಚಾರವೆಂದರೆ ನಮ್ಮ ಚಿತ್ರ ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ 54 ಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ. ಚನ್ನಪಟ್ಟಣದ ಬಳಿ ಇಪ್ಪತ್ತಕ್ಕೂ ಅಧಿಕ ದಿನಗಳ ಚಿತ್ರೀಕರಣ ಮಾಡಿದ್ದೇವೆ. ಈ ಹಿಂದೆ “ಹವಾಲ” ಎಂಬ ಚಿತ್ರ ನಿರ್ದೇಶನ ಮಾಡಿದ್ದ ನನಗೆ, ಇದು ಎರಡನೇ ಚಿತ್ರ. ಹದಿನೆಂಟು ವರ್ಷಗಳಿಂದ ಕಿರುತೆರೆ ಹಾಗೂ ಹಿರಿತೆರೆ ನಟನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ನಿರ್ದೇಶಕ – ನಟ ಅಮಿತ್ ರಾವ್, ಟೀಸರ್ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ಗಣ್ಯರಿಗೆ ಧನ್ಯವಾದ ತಿಳಿಸಿದರು.
ನಿರ್ಮಾಪಕ ಮಂಜುನಾಥ್ ಎಂ ದೈವಜ್ಞ, ಕಾಸ್ಟ್ಯೂಮ್ ಡಿಸೈನರ್ ರಶ್ಮಿ ಅನೂಪ್ ರಾವ್, ಸಂಗೀತ ನಿರ್ದೇಶಕ ರಾಕಿಸೋನು ಹಾಗೂ ಸುಪ್ರೀತ್ (ಡಿ ಐ – ವಿ ಎಫ್.ಎಕ್ಸ್) ಮುಂತಾದವರು ಚಿತ್ರದ ಬಗ್ಗೆ ಮಾತನಾಡಿದರು.
ನಟ, ನಿರ್ದೇಶಕ ಹಾಗೂ ಸಂಕಲನಕಾರ ನಾಗೇಂದ್ರ ಅರಸ್, ನಿರ್ಮಾಪಕ ನಿತ್ಯಾನಂದ ಪ್ರಭು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕನ್ನಡ ಚಿತ್ರರಂಗ ಈಗ ವಿಶ್ವದಾದ್ಯಂತ ಹೆಸರುವಾಸಿ. ಇಂತಹ ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಅಭಿಮಾನವಿರುವ ಹಾಗೂ ಕನ್ನಡ ಚಿತ್ರಗಳು ಎಲ್ಲಾ ಕಡೆ ತಲುಪಬೇಕೆಂಬ ಸದ್ದುದ್ದೇಶ ಹೊಂದಿರುವ GL0PIXS ಎಂಬ ದೊಡ್ಡ ಸಂಸ್ಥೆ ಈ ಚಿತ್ರವನ್ನು ನೋಡಿ, ಮೆಚ್ಚಿ ಬಿಡುಗಡೆ ಮಾಡಲು ಮುಂದಾಗಿದೆ.